ಬೆಂಗಳೂರು  ಆರ್ ಆರ್ ನಗರ ಅಭ್ಯರ್ಥಿ ಆಯ್ಕೆ ಮೈತ್ರಿ ಮಾತುಕತೆ ವಿಫಲ
ಮೈಸೂರು

ಬೆಂಗಳೂರು ಆರ್ ಆರ್ ನಗರ ಅಭ್ಯರ್ಥಿ ಆಯ್ಕೆ ಮೈತ್ರಿ ಮಾತುಕತೆ ವಿಫಲ

May 25, 2018

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ( ಆರ್ ಆರ್ ನಗರ) ನಗರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ವಿಫಲವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಡಿ.ಕೆ. ಶಿವ ಕುಮಾರ್ ಮತ್ತು ಉಭಯ ಪಕ್ಷಗಳ ಅಭ್ಯರ್ಥಿಗಳ ಸಭೆ ಇಂದು ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ನಡೆದಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಹಾಲಿ ಶಾಸಕರಾಗಿದ್ದ ಮುನಿರತ್ನ ಮತ್ತು ಜೆಡಿಎಸ್ ಅಭ್ಯರ್ಥಿ ನಟಿ ಅಮೂಲ್ಯ ಮಾವ ರಾಮಚಂದ್ರಪ್ಪ ಸ್ಪರ್ಧಿಸುತ್ತಿದ್ದಾರೆ. ಮೇ 28ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಮುನಿ ರತ್ನ ಶಾಸಕರಾಗಿದ್ದ ಕಾರಣ ಜೆಡಿಎಸ್ ಅವರಿಗೆ ಬೆಂಬಲ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಆದರೆ ಮುನಿರತ್ನ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿರುವುದರಿಂದ ಅವರು ಗೆಲ್ಲುವುದು ಅಸಾಧ್ಯ. ಅವರಿಗೆ ಬೆಂಬಲ ನೀಡಿದರೆ ಬಿಜೆಪಿಗೆ

ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ಮುಖ್ಯ ಮಂತ್ರಿಗಳು ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು ಎನ್ನಲಾಗಿದೆ. ಅಭ್ಯರ್ಥಿಗಳಾಗಿರುವ ಮುನಿರತ್ನ ಮತ್ತು ರಾಮಚಂದ್ರಪ್ಪ ತಮಗೇ ಬೆಂಬಲ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳದೇ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮುನಿರತ್ನ ಹಾಲಿ ಶಾಸಕರಾಗಿರುವುದರಿಂದ ಅವರಿಗೆ ಜೆಡಿಎಸ್ ಬೆಂಬಲ ನೀಡ ಬೇಕೆಂದು ಕೇಳಿದ್ದೇವೆ. ಮುಖ್ಯಮಂತ್ರಿಗಳು ಮುಖಂಡರ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದರು. ಈ ಸಂಬಂಧ ಮಾಧ್ಯಮ ದವರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಆರ್.ಆರ್.ನಗರ ಮತ್ತು ಜಯನಗರ ಚುನಾವಣೆಗಳಲ್ಲಿ ಗೆಲ್ಲುವುದು ಸರ್ಕಾರಕ್ಕೆ ಅತೀ ಅವಶ್ಯಕವಾಗಿದೆ. ಮೇ 28ರಂದು ಆರ್.ಆರ್.ನಗರ ಚುನಾವಣೆ ನಡೆಯಲಿರುವುದರಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳು ಮತ್ತು ಮುಖಂಡರ ಜೊತೆ ಚರ್ಚೆ ನಡೆಸಲಾಗಿದೆ. ಮತ್ತೆ ಮುಖಂಡರೊಂದಿಗೆ ಚರ್ಚಿಸಿ ನಾಳೆ ನನ್ನ ನಿರ್ಧಾರವನ್ನು ಪ್ರಕಟಿಸಲಿದ್ದೇನೆ ಎಂದರು.

Translate »