ಶ್ರೀನಗರ ಬಡಾವಣೆಗೆ ಮೂಲ ಸೌಲಭ್ಯ: ಕ್ರಿಯಾ ಯೋಜನೆ ರೂಪಿಸಲು ಸಚಿವ ಜಿಟಿಡಿ ಸೂಚನೆ
ಮೈಸೂರು

ಶ್ರೀನಗರ ಬಡಾವಣೆಗೆ ಮೂಲ ಸೌಲಭ್ಯ: ಕ್ರಿಯಾ ಯೋಜನೆ ರೂಪಿಸಲು ಸಚಿವ ಜಿಟಿಡಿ ಸೂಚನೆ

November 19, 2018

ಮೈಸೂರು: ಕಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಬಡಾವಣೆಗೆ ಕುಡಿಯುವ ನೀರನ್ನು ಪೂರೈ ಸಲು ಕ್ರಿಯಾ ಯೋಜನೆ ತಯಾರಿಸುವುದೂ ಸೇರಿದಂತೆ ಇನ್ನಿತರ ಮೂಲಸೌಲಭ್ಯ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದರು.

ಭಾನುವಾರ ಶ್ರೀನಗರಕ್ಕೆ ಭೇಟಿ ನೀಡಿ, ನಿವಾಸಿಗಳ ಮನವಿ ಆಲಿಸಿದ ಅವರು, ಸ್ಥಳ ದಲ್ಲೇ ಅಧಿಕಾರಿಗಳಿಗೆ ನಿವಾಸಿಗಳ ಸಮಸ್ಯೆ ಗಳನ್ನು ಪರಿಹರಿಸಲು ಸೂಕ್ತ ಕ್ರಮ ವಹಿಸು ವಂತೆ ನಿರ್ದೇಶನ ನೀಡಿದರು.

ಬಡಾವಣೆಗೆ ಕಬಿನಿ ಕುಡಿಯುವ ನೀರನ್ನು ಒದಗಿಸಬೇಕೆಂಬ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಚಿವರು, ಸ್ಥಳದಲ್ಲಿಯೇ ಹಾಜ ರಿದ್ದ ಇಇ ಹರೀಶ್ ಅವರಿಗೆ ಕಬಿನಿಯಿಂದ ಶ್ರೀನಗರ ಹಾಗೂ ಸುತ್ತಮುತ್ತಲಿನ ಬಡಾ ವಣೆಗಳಿಗೆ ಕುಡಿಯುವ ನೀರನ್ನು ಪೂರೈ ಸಲು ಅಗತ್ಯ ಕಾಮಗಾರಿ ಕೈಗೊಳ್ಳುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿ ದರಲ್ಲದೆ, ಕಬಿನಿಯಿಂದ ಹೆಚ್ಚುವರಿಯಾಗಿ 60 ಎಂಎಲ್‍ಡಿ ನೀರನ್ನು ಮೈಸೂರು ನಗರಕ್ಕೆ ಒದಗಿಸುವ ಸಲುವಾಗಿ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಿದರು.

ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರ ಳಲು ಬಸ್‍ನ ಸಮಸ್ಯೆ ಇರುವುದನ್ನು ನಿವಾಸಿ ಗಳು ಸಚಿವರ ಗಮನಕ್ಕೆ ತಂದ ಹಿನ್ನೆಲೆ ಯಲ್ಲಿ ಶ್ರೀನಗರ ಬಡಾವಣೆ ಹಾಗೂ ಸುತ್ತ ಮುತ್ತಲಿನ ಬಡಾವಣೆಯ ನಿವಾಸಿಗಳ ಕೋರಿಕೆಯಂತೆ ಹೊಸದಾಗಿ ಮಾರ್ಗ ರೂಪಿಸಿ ಇದೇ 20ರೊಳಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವರ್ತುಲ (ರಿಂಗ್) ರಸ್ತೆಗೆ ಹೊಂದಿ ಕೊಂಡಂತೆ ಇರುವ ನಾಚನಹಳ್ಳಿ ಪಾಳ್ಯ 3ನೇ ಹಂತದ ಬಡಾವಣೆಯ ಪ್ರಮುಖ ರಸ್ತೆಗಳು ಹಾಳಾಗಿದ್ದು, ದುರಸ್ತಿಗೊಳಿಸು ವಂತೆ ನಿವಾಸಿಗಳು ಕೋರಿದಾಗ, ಮುಡಾ ಇಇ ಪ್ರಭಾಕರ್ ಅವರಿಗೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಇದೇ ವೇಳೆ ಶ್ರೀನಗರ ನಿವಾಸಿಗಳು ಸಚಿವ ರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಸಚಿವರು, ಖಾಸಗಿ ಬಡಾವಣೆ ಶ್ರೀನಗರ ದಲ್ಲಿ ಬೀದಿದೀಪಗಳ ನಿರ್ವಹಣೆಗಾಗಿ ಸೋಲರ್ ಪ್ಯಾನೆಲ್ ಅಳವಡಿಸಿ, ನಿರ್ವ ಹಣೆ ಮಾಡುತ್ತಿರುವುದು ಅತ್ಯಂತ ಶ್ಲಾಘ ನೀಯ. ಶ್ರೀನಗರದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ಅರಳಿ ಸಸಿ ಗಳನ್ನು ನೆಟ್ಟಿರುವುದು ಪರಿಸರ ಕಾಳಜಿಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಡಿಪಾಳ್ಯ ಗ್ರಾಮದಲ್ಲಿ ಎಸ್‍ಸಿಪಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಪಂ ಸದಸ್ಯೆ ರೂಪ ಲೋಕೇಶ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮುಖಂಡರಾದ ಕೆಜಿ ಕೊಪ್ಪಲು ನಾರಾಯಣಗೌಡ, ಬಂಡಿಪಾಳ್ಯ ಸೋಮು ಮತ್ತಿತರರು ಹಾಜರಿದ್ದರು.

Translate »