ಗರಗನಹಳ್ಳಿ ಬಳಿ ಕರಡಿ ಪ್ರತ್ಯಕ್ಷ
ಚಾಮರಾಜನಗರ

ಗರಗನಹಳ್ಳಿ ಬಳಿ ಕರಡಿ ಪ್ರತ್ಯಕ್ಷ

June 21, 2018

ಗುಂಡ್ಲುಪೇಟೆ: ತಾಲೂಕಿನ ಗರಗನಹಳ್ಳಿ ಸಮೀಪ ಕರಡಿಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರನ್ನು ಭೀತಿಗೊಳಿಸಿರುವ ಘಟನೆ ನಡೆದಿದೆ.ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗರಗನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಘಟನೆ ವಿವರ: ಗ್ರಾಮದ ವಾಸಿ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಕರಡಿಯೊಂದು ಕಾಣಿಸಿಕೊಂಡು ಜಮೀನಿನ ಮಾಲೀಕ ಮಹದೇವಪ್ಪ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಅಷ್ಟರಲ್ಲಿ ಕಿರುಚಿಕೊಂಡಾಗ ಸುತ್ತಮುತ್ತಲಿನ ಸಾರ್ವಜನಿಕರು ಬಂದು ಕರಡಿಯನ್ನು ಓಡಿಸಿದ್ದಾರೆ. ಅಲ್ಲಿಂದ ಓಡಿಹೋದ ಕರಡಿಯು ಪಕ್ಕದಲ್ಲಿರುವ ಬೇಲಿಯಲ್ಲಿ ಅಡಗಿಕೊಂಡಿತು.

ತಕ್ಷಣ ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಯನ್ನು ಬಲೆಯಲ್ಲಿ ಬಂಧಿಸಿ ಕಾಡಿಗೆ ಬಿಡಲು ಪ್ರಯತ್ನಿಸಿದರು. ಆದರೆ ರೋಷಗೊಂಡ ಕರಡಿಯು ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆಯೇ ದಾಳಿಗೆ ಮುಂದಾಯಿತು.

ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಕರಡಿಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿ ನಿಲ್ಲು ವಷ್ಟರಲ್ಲಿ ಕರಡಿಯು ಮರವನ್ನೇರಿತು. ಮರವೇರಿರುವ ಕರಡಿಗೆ ಅರವಳಿಕೆ ಚುಚ್ಚುಮದ್ದನ್ನು ನೀಡಿ ಅದನ್ನು ಬಂಧಿಸಿ ಕಾಡಿಗೆ ಬಿಡುವ ಬಗ್ಗೆ ಕಾರ್ಯಾಚರಣೆ ಮುಂದುವರೆಸಲಾಯಿತು.

ಸ್ಥಳಕ್ಕೆ ಎಸಿಎಫ್ ರವಿಕುಮಾರ್, ಆರ್‍ಎಫ್‍ಒ ನವೀನ್, ಬೇಗೂರು ಪೊಲೀಸ್ ಠಾಣೆ ಎಎಸ್‍ಐ ಗುರುಸಿದ್ದಯ್ಯ ಇತರ ಅಧಿಕಾರಿಗಳು ಭೇಟಿ ನೀಡಿದ್ದರು.

Translate »