ಇಂದಿನಿಂದ ಬೆಳಗಾವಿ ಅಧಿವೇಶನ
ಮೈಸೂರು

ಇಂದಿನಿಂದ ಬೆಳಗಾವಿ ಅಧಿವೇಶನ

December 10, 2018

ಬೆಳಗಾವಿ: ಸಂಪುಟ ವಿಸ್ತರಣೆ ಪದೇಪದೆ ಮುಂದೂ ಡಿಕೆಯಿಂದ ಸಿಟ್ಟುಗೊಂಡಿರುವ ಸಚಿವಾಕಾಂಕ್ಷಿ ಶಾಸಕರು, ಬಿಜೆಪಿಯ ಆಪರೇಷನ್ ಕಮಲದ ಆತಂಕದ ಕರಿನೆರಳಿ ನಲ್ಲಿ ನಾಳೆ(ಡಿ.10)ಯಿಂದ ಬೆಳಗಾವಿಯ ಸುವರ್ಣ ಸೌಧ ದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ.

ನಾಳೆಯಿಂದ ಡಿ.20ರವರೆಗೆ 10 ದಿನಗಳ ಕಾಲ ನಡೆ ಯುವ ವಿಧಾನ ಮಂಡಲದ ಈ ಚಳಿಗಾಲದ ಅಧಿವೇಶನ ರಾಜಕೀಯ ಮೇಲಾಟದ ವೇದಿಕೆಯಾಗುವ ಸಾಧ್ಯತೆ ಇದ್ದು, ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರ, ವಾಗ್ವಾದಗಳು ಕಾವೇರುವುದು ನಿಶ್ಚಿತ. ಸಮ್ಮಿಶ್ರ ಸರ್ಕಾರದ 6 ತಿಂಗಳ ವೈಫಲ್ಯಗಳ ಸರಮಾಲೆಯನ್ನು ಸದನದಲ್ಲಿ ಬಿಚ್ಚಿಟ್ಟು ಆಡಳಿತ ಪಕ್ಷದ ಮೇಲೆ ಮುಗಿಬೀಳಲು ಬಿಜೆಪಿ ತುದಿಗಾಲ ಮೇಲೆ ನಿಂತಿದೆ. ಒಂದೆಡೆ ಪ್ರತಿಪಕ್ಷದ ಅಬ್ಬರ, ಮತ್ತೊಂದೆಡೆ ಸಂಪುಟ ವಿಸ್ತರಣೆ ಮುಂದೂಡಿಕೆಯಿಂದ ಸಿಟ್ಟುಗೊಂಡಿರುವ ಶಾಸಕರನ್ನು ಸಂಭಾಳಿಸಿ ಸುಗಮ ಕಲಾಪ ನಡೆಸುವ ದೊಡ್ಡ ಸವಾಲು ಸರ್ಕಾರಕ್ಕೆ ಎದುರಾಗಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಬಿಜೆಪಿಯ ಆಪರೇಷನ್ ಕಮಲದ ಕಾರ್ಯಾಚರಣೆಗಳು ಚುರುಕುಗೊಳ್ಳಲಿವೆ ಎಂಬ ಸುದ್ದಿ ಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವುದು ದೋಸ್ತಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ. ಹಾಗಾಗಿ ಸದ ನದ ಒಳಗೆ ಪ್ರತಿಪಕ್ಷದ ಸವಾಲನ್ನು ಎದುರಿಸುವ ಜತೆಗೆ ಸದನದ ಹೊರಗೆ ಶಾಸಕರ ಒಗ್ಗಟ್ಟು ಹಾಗೂ ಪಕ್ಷ ನಿಷ್ಠೆ ಯನ್ನು ಕಾಯ್ದುಕೊಂಡು ಪ್ರತಿಪಕ್ಷಗಳ ಅಸ್ತ್ರವನ್ನು ಸಮರ್ಥ ವಾಗಿ ಎದುರಿಸುವ ಎದೆಗಾರಿಕೆಯನ್ನು ಸರ್ಕಾರ ಪ್ರದರ್ಶಿ ಸುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ರೈತರ ಸಾಲ ಮನ್ನಾದ ಗೊಂದಲ, ಬರ ಪರಿಸ್ಥಿತಿ ನಿರ್ವ ಹಣೆಯಲ್ಲಿ ವೈಫಲ್ಯ, ಕಬ್ಬು ಬೆಳೆಗಾರರ ಸಮಸ್ಯೆ, ಪರಿಶಿಷ್ಟ ಜಾತಿ ವರ್ಗದ ಬಡ್ತಿ ಮೀಸಲು ವಿವಾದ, ವರ್ಗಾವಣೆ ದಂಧೆ, ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಆಗಿರುವ ತಾರತಮ್ಯ, ಸರ್ಕಾರದ ಆಡಳಿತ ವೈಫಲ್ಯಗಳೂ ಸೇರಿದಂತೆ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಬಿಜೆಪಿ ತನ್ನದೇ ಆದ ಅಸ್ತ್ರ ಗಳನ್ನು ಬತ್ತಳಿಕೆಯಲ್ಲಿ ಸಿದ್ಧ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತ್ಯಸ್ತ್ರಗಳನ್ನು ಸಿದ್ಧ ಮಾಡಿಕೊಂಡಿದ್ದು, ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿ ಹಾಕಲು ತಮ್ಮದೇ ಆದ ತಂತ್ರಗಳನ್ನು ರೂಪಿಸಿವೆ. ಕಳೆದ 6 ತಿಂಗಳಲ್ಲಿಈ ಸರ್ಕಾರದ ಸಾಧನೆ ಕಳಪೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಈಗಾಗಲೇ ಅಬ್ಬರಿಸಿದ್ದು, ಅದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ಸರ್ಕಾರದ ಸಾಧನೆಗಳನ್ನು ಪ್ರತಿಪಕ್ಷ ನಾಯಕರ ಮುಖಕ್ಕೆ ಹಿಡಿಯುತ್ತೇನೆ ಎಂದು ಕಿಡಿಕಾರಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಅಧಿವೇಶನಕ್ಕೂ ಮೊದಲೇ ನಡೆದಿರುವ ವಾಕ್ಸಮರ, ಆಪರೇಷನ್ ಕಮಲ ಕಾರ್ಯಾಚರಣೆಯ ಸುದ್ದಿಗಳು, ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿ ಇವು ಗಳನ್ನೆಲ್ಲಾ ಗಮನಿಸಿದರೆ ಈ ಅಧಿವೇಶನದಲ್ಲಿ ಸುಗಮ ಕಲಾಪ ಸಾಧ್ಯವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಚಳಿಗಾಲದ ಅಧಿವೇಶನ ಮಾತಿನ ರಣರಂಗವಾಗುವ ಸಾಧ್ಯತೆಗಳಿದ್ದು, ರಾಜಕೀಯವಾಗಿಯೂ ಹಲವು ಬದಲಾವಣೆಗೆ ಕಾರಣವಾದರೂ ಅಚ್ಚರಿಪಡಬೇಕಿಲ್ಲ.

ಅಧಿವೇಶನಕ್ಕೆ ಸಿದ್ದರಾಮಯ್ಯ ಗೈರು
ಬೆಳಗಾವಿ: ನಾಳೆಯಿಂದ(ಡಿ.10) ಇಲ್ಲಿನ ಸುವರ್ಣ ಸೌಧದಲ್ಲಿ ಆರಂಭ ವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದ ರಾಮಯ್ಯ ಅವರು ಗೈರು ಹಾಜರಾಗುತ್ತಿರುವುದು ಹತ್ತು-ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯ ಸ್ನೇಹಿತರ ಮನೆಯಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂಬ ನೆಪದಲ್ಲಿ ಮಲೇಶಿಯಾ ಪ್ರವಾಸ ಕೈಗೊಳ್ಳುತ್ತಿದ್ದು, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಲ್ಲಿನ ರಾಜಕೀಯ ಜಂಜಾಟಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಧೋರಣೆಯಿಂದ ಅವರ ರಾಜಕೀಯ ನಡೆ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಸಚಿವ ಸಂಪುಟ ವಿಸ್ತರಣೆಯನ್ನು ಪದೇ ಪದೆ ಮುಂದೂಡುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಅಸಮಾ ಧಾನ ದಿನೇ ದಿನೇ ಹೆಚ್ಚಾಗುತ್ತಿದೆ. ಸಚಿವ ಸ್ಥಾನ ಸಿಗದಿದ್ದಲ್ಲಿ `ನಮ್ಮ ದಾರಿ ನಮ್ಮದು, ನಿಮ್ಮ ದಾರಿ ನಿಮ್ಮದು’ ಎಂಬ ನಿರ್ಧಾರಕ್ಕೆ ಬಂದಿರುವ ಶಾಸಕ ರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾರ್ಯತಂತ್ರ ರೂಪಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದ ದೂರ ಉಳಿಯಲು ಸಿದ್ದರಾಮಯ್ಯ ಕೈಗೊಂಡಿರುವ ನಿರ್ಧಾರ ಮೈತ್ರಿ ಸರ್ಕಾರದ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಅವರ ಅನುಪಸ್ಥಿತಿಯಲ್ಲಿ ನಾಳೆಯಿಂದ ಕುಂದಾನಗರಿ ಯಲ್ಲಿ 10 ದಿನಗಳ ಅಧಿವೇಶನ ನಡೆಯಲಿದ್ದು, ಎದುರಾಗಲಿರುವ ರಾಜಕೀಯ ಪರಿಸ್ಥಿತಿ ಯನ್ನು ಮಿತ್ರಪಕ್ಷಗಳು ಹೇಗೆ ನಿಭಾಯಿಸುತ್ತವೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಸಚಿವಾಕಾಂಕ್ಷಿ ಶಾಸಕರುಗಳು ಸದನಕ್ಕೆ ಹಾಜರಾಗುತ್ತಾರೆಯೇ, ಇಲ್ಲವೇ? ಅವರ ನಡೆ ಏನು? ಎಂಬುದು ನಿಗೂಢವಾಗಿದೆ. ಈ ಎಲ್ಲಾ ಕಾರಣಗಳಿಂದ ನಾಳೆಯಿಂದ ನಡೆಯಲಿ ರುವ ಚಳಿಗಾಲದ ಅಧಿವೇಶನ ರಾಜಕೀಯವಾಗಿ ಮಹತ್ವ ಪಡೆಯಲಿದೆ. ಈ ಅಧಿವೇಶನ ವನ್ನು ದೋಸ್ತಿ ಪಕ್ಷಗಳು ಸಮರ್ಥವಾಗಿ ಎದುರಿಸಿ, ಯಾವುದೇ ರಾಜಕೀಯ ಮೇಲಾಟಗಳು ನಡೆಯದಂತೆ ನೋಡಿಕೊಂಡರೆ ಸಮ್ಮಿಶ್ರ ಸರ್ಕಾರ ಅಭದ್ರತೆಯ ಆತಂಕದಿಂದ ಸ್ವಲ್ಪ ಮಟ್ಟಿಗೆ ಹೊರ ಬರಲು ಸಾಧ್ಯವಾಗುತ್ತದೆ. ಜತೆಗೆ ಮುಂದಿನ ಲೋಕಸಭಾ ಚುನಾವಣೆವರೆಗೂ ಸರ್ಕಾರಕ್ಕೆ ಯಾವುದೇ ಬಾಧಕವಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ.

`ವಾಸ್ತು’ಗಾಗಿ ಸಿಎಂ ವಸತಿ ಬದಲು!
ಬೆಳಗಾವಿ: ಅಧಿವೇಶನದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳಿಗೆ, ಪ್ರತಿಪಕ್ಷ ನಾಯಕರುಗಳಿಗೆ ಬೆಳಗಾವಿಯಲ್ಲಿ ವಾಸ್ತವ್ಯ ಕಲ್ಪಿಸಲಾ ಗಿದ್ದು, ಶಾಸಕರುಗಳಿಗೆ ಬೆಳಗಾವಿ-ಹುಬ್ಬಳ್ಳಿಯ ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆ ಮಾಡ ಲಾಗಿದೆ. ಆದರೆ, ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಸರ್ಕಿಟ್ ಹೌಸ್ ಬಿಟ್ಟು ಈ ಬಾರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿ ದ್ದಾರೆ. ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ವಾಸ್ತವ್ಯವನ್ನು ಬದಲಾ ಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ವಿಶೇಷ ಊಟ-ಉಪಚಾರದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಮಧ್ಯಾಹ್ನ ಸುವರ್ಣ ಸೌಧದಲ್ಲಿ ಭೂರಿ-ಭೋಜನವನ್ನೇ ಆಯೋಜಿಸಲಾಗಿದೆ. ಊಟದಿಂದಾಗಿ ಯಾರಿಗೂ ಆರೋಗ್ಯ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಸಲ ಕರಾವಳಿ, ಬೆಂಗಳೂರು, ಹಳೆ ಮೈಸೂರು, ಉತ್ತರ ಕರ್ನಾಟಕ ಶೈಲಿಯ ಬಗೆ ಬಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕರಾವಳಿ ಭಾಗದವರಿಗೆ ಕುಚ್ಚಲಕ್ಕಿ ಗಂಜಿ, ಬೆಂಗಳೂರು ಭಾಗದವರಿಗೆ ರಾಗಿ ಮುದ್ದೆ-ಸೊಪ್ಪಿನ ಸಾರು, ಉತ್ತರ ಕರ್ನಾಟಕದವರಿಗೆ ರೊಟ್ಟಿ-ಎಣ್ಣೆಗಾಯಿ ಪಲ್ಯ ಮತ್ತಿತರ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಬೆಳಗಾವಿಯ ಜನಪ್ರಿಯ ಸಿಹಿ ತಿನಿಸಾದ ಕುಂದ, ಕರದಂಟು ಇರಲಿವೆ. ಅಧಿವೇಶನದಲ್ಲಿ ಪಾಲ್ಗೊಳ್ಳುವವರಿಗೆ ಊಟ-ಉಪಚಾರ, ವಸತಿ ಮತ್ತು ವಾಹನ ಸೌಕರ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ವಾಮೀಜಿಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭ
ಬೆಳಗಾವಿ: ಚಳಿಗಾಲದ ಬೆಳಗಾವಿ ಅಧಿವೇಶ ನಕ್ಕೆ ಪ್ರತಿಭಟನೆ ಬಿಸಿ ತಟ್ಟಲಿದ್ದು, ಉತ್ತರ ಕರ್ನಾಟಕದ ಅಭಿ ವೃದ್ಧಿಗೆ ಪಕ್ಷಾತೀತವಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ ಆರಂಭವಾಗಿದೆ. ನಗರದ ಸಾಹಿತ್ಯ ಭವನ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಹತ್ತು ದಿನಗಳ ಒಳಗೆ 10 ಇಲಾಖೆ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಏಳಲಿದೆ. ಉತ್ತರ ಕರ್ನಾಟಕದ ಯಾವ ಶಾಸಕರು ಅಧಿವೇಶನಕ್ಕೆ ಗೈರಾಗಬಾರದು. ಪಕ್ಷಭೇದ ಮರೆತು ಎಲ್ಲರೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಧ್ವನಿಯಾಗಬೇಕು ಎಂದರು. ಇದೇ ವೇಳೆ ಉತ್ತರ ಕರ್ನಾಟಕ ಹೋರಾಟ ಅಭಿವೃದ್ಧಿ ಪರ ಧ್ವನಿ ಎತ್ತುವಂತೆ ಎಲ್ಲ ಶಾಸಕರಿಗೂ ಪತ್ರ ಬರೆಯುವುದ ರಾಗಿ ಹೇಳಿದರು. ಅಲ್ಲದೆ 10 ದಿನಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟಕ್ಕೆ ಸಿದ್ಧವಾಗುತ್ತೇವೆ. ಒಂದೊಮ್ಮೆ ಸರ್ಕಾರ ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಹೋರಾಟಗಾರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿತ್ತೇವೆ. ಅಲ್ಲದೇ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಮಾಡಲು ಎಲ್ಲಾ ಸ್ವಾಮೀಜಿಗಳ ಬೆಂಬಲವಿದ್ದು, ಪ್ರತ್ಯೇಕ ರಾಜ್ಯ ಹೋರಾಟ ತೀವ್ರಗೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಆಗುತ್ತದೆ ಎಚ್ಚರಿಕೆ ನೀಡಿದರು.
ಹೋರಾಟಗಾರರ ನಿರ್ಣಯಗಳು: ಬೆಳಗಾವಿ 2ನೇ ರಾಜಧಾನಿಯಾಗಿ ಘೋಷಣೆ, ಕನ್ನಡ ಸೌಧಕ್ಕೆ ಕಚೇರಿಗಳ ಸ್ಥಳಾಂತರ, 10 ದಿನ ಬದಲಿಗೆ 21 ದಿನ ಅಧಿವೇಶನ ನಡೆಯಬೇಕು, ಬೇಡಿಕೆಗಳ ಕುರಿತು ಸ್ವಾಮೀಜಿಗಳು, ಹೋರಾಟಗಾರರ ಜೊತೆ ಸಿಎಂ ಸಭೆ ಮಾಡಬೇಕು, ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ಅಧಿವೇಶನದಲ್ಲಿ ಅಭಿವೃದ್ಧಿ ಕುರಿತು ಹೋರಾಟ ಮಾಡಬೇಕು ಹಾಗೂ ಸರ್ಕಾರ ಬೇಡಿಕೆಗಳನ್ನ ಈಡೇರಿಸದಿದ್ದರೆ ಜನರ ಬಳಿ ಹೋಗಿ ಜನಾಗ್ರಹ ಸಂಗ್ರಹಣೆ.

ಸುವರ್ಣಸೌಧದ ಸುತ್ತ ನಿಷೇಧಾಜ್ಞೆ
ಬೆಳಗಾವಿ: ನಾಳೆಯಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿರುವ ಇಲ್ಲಿನ ಸುವರ್ಣಸೌಧಕ್ಕೆ ಪೆÇಲೀಸ್ ಸರ್ಪಗಾವಲು ಹಾಕಲಾ ಗಿದ್ದು, ಇಡೀ ಬೆಳಗಾವಿಯಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾ ಗಿದೆ. ಬಂದೋಬಸ್ತ್ ಕಾರ್ಯಕ್ಕಾಗಿ 5 ಸಾವಿರಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿದೆ. ಸುವರ್ಣಸೌಧದ ಸುತ್ತ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಧಿವೇ ಶನದ ಸಂದರ್ಭದಲ್ಲಿ ಸುವರ್ಣಸೌಧದ ಬಳಿ ಕಬ್ಬು ಬೆಳೆಗಾರರೂ ಸೇರಿದಂತೆ ವಿವಿಧ
ಸಂಘಟನೆಗಳ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸುವರ್ಣಸೌಧಕ್ಕೆ ಪೆÇಲೀಸ್ ಸರ್ಪಗಾವಲು ಹಾಕಲಾಗಿದೆ. ಪೆÇಲೀಸರ ಕಣ್ತಪ್ಪಿಸಿ ಯಾರೂ ಸುವರ್ಣಸೌಧ ಒಳ ಹೋಗಲು ಸಾಧ್ಯವೇ ಇಲ್ಲ ಎಂಬಂತೆ ಭದ್ರತೆಯನ್ನು ಕಲ್ಪಿಸಲಾಗಿದೆ. ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ, ಧರಣಿಗಳನ್ನು ನಡೆಸುವ ಹಿನ್ನೆಲೆ ಯಲ್ಲಿ ಇಡೀ ಬೆಳಗಾವಿಯಲ್ಲಿ ಬಿಗಿ ಪೆÇಲೀಸ್ ಪಹರೆ ನಿಯೋಜಿಸ ಲಾಗಿದೆ. ದೋಸ್ತಿ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ಬಿಜೆಪಿ, ಅಧಿವೇಶನದ ಮೊದಲ ದಿನವಾದ ನಾಳೆ ಸುವರ್ಣಸೌಧದ ಬಳಿ 1 ಲಕ್ಷಕ್ಕೂ ಹೆಚ್ಚು ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಬಿಗಿ ಪೆÇಲೀಸ್ ಕಾವಲನ್ನು ಹಾಕಲಾಗಿದೆ. ಪ್ರತಿಭಟನೆ, ಹೋರಾಟ ನಡೆಸುವವರಿಗಾಗಿ ಸುವರ್ಣಸೌಧಕ್ಕೆ 1 ಕಿ.ಮೀ ದೂರದಲ್ಲಿ ಸ್ಥಳವನ್ನು ನಿಗದಿ ಮಾಡಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಭದ್ರತೆಗಾಗಿ ನೆರೆ ಜಿಲ್ಲೆಗಳಿಂದಲೂ ಪೆÇಲೀಸರನ್ನು ಕರೆಸಿಕೊಳ್ಳಲಾಗಿದ್ದು, ಬೆಳಗಾವಿ ನಗರ ಪೆÇಲೀಸ್ ಆಯುಕ್ತರ ಉಸ್ತುವಾರಿಯಲ್ಲಿ 7 ಜಿಲ್ಲೆಗಳ ಪೆÇಲೀಸ್ ವರಿಷ್ಠಾಧಿಕಾರಿಗಳು, 11 ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳು, 34 ಡಿವೈಎಸ್ಪಿಗಳು, 81 ಇನ್ಸ್‍ಪೆಕ್ಟರ್‍ಗಳು, 227 ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್, ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 5 ಸಾವಿರ ಪೆÇಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

ನವ ವಧುವಿನಂತೆ ಸಿಂಗಾರ: ವಿಧಾನಮಂಡಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ನವ ವಧುವಿನಂತೆ ಸಿಂಗಾರಗೊಂಡಿದ್ದು, ಸುವರ್ಣ ಸೌಧ ಸೇರಿದಂತೆ ಸರ್ಕಾರಿ ಕಚೇರಿ ಗಳಿಗೆ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಫ್ಲೆಕ್ಸ್‍ಗಳ ಬಳಕೆಗೆ ನಿರ್ಬಂಧ ಹೇರಿದ್ದರೂ ಬೆಳಗಾವಿಯ ಹಲವೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಗಣ್ಯರಿಗೆ ಸ್ವಾಗತ ಕೋರುವ ಫ್ಲೆಕ್ಸ್‍ಗಳನ್ನು ಹಾಕಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚ ಲಾಗಿದ್ದು, ರಸ್ತೆ ವಿಭಜಕಗಳಿಗೆ ಬಣ್ಣ ಬಳಿದು, ನಗರದ ಸ್ವಚ್ಛತೆಗೂ ಗಮನ ಹರಿಸಲಾಗಿದೆ.

Translate »