ಕಾರಂಜಿಕೆರೆಯಲ್ಲಿ ಮತ್ತೊಮ್ಮೆ ತಲೆ ಎತ್ತಲಿದೆ `ಚಿಟ್ಟೆಗಳ ಉದ್ಯಾನ’
ಮೈಸೂರು

ಕಾರಂಜಿಕೆರೆಯಲ್ಲಿ ಮತ್ತೊಮ್ಮೆ ತಲೆ ಎತ್ತಲಿದೆ `ಚಿಟ್ಟೆಗಳ ಉದ್ಯಾನ’

December 10, 2018

ಮೈಸೂರು: ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾನವನ’ ಮತ್ತೊಮ್ಮೆ ತಲೆ ಎತ್ತಲಿದೆ.

ಕಾರಂಜಿಕರೆಯ ಆವರಣದಲ್ಲಿ ಚಿಟ್ಟೆ ಗಳ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ 20 ಲಕ್ಷ ರೂ. ನೀಡಿದ್ದು, ಮೃಗಾಲಯವು ಈಗಾಗಲೇ ಕಾಮಗಾರಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಕಾರಂಜಿ ಕೆರೆಯ ಆವರಣದಲ್ಲಿ ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ ಕಟ್ಟಡಕ್ಕೆ ಹೊಂದಿಕೊಂಡಂತೆ ಕಳೆದ 8 ವರ್ಷದ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾನವನ ದಲ್ಲಿ ಬಣ್ಣಬಣ್ಣದ ಬಗೆಬಗೆಯ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಚಿಟ್ಟೆಗಳ ಸೊಬಗನ್ನು ನೋಡು ವುದಕ್ಕಾಗಿಯೇ ವಿವಿಧೆಡೆಯಿಂದ ಪ್ರವಾಸಿಗರು ಆಗ ಮಿಸುತ್ತಿದ್ದರು. ಅಲ್ಲದೇ ಚಿಟ್ಟೆಗಳ ಉದ್ಯಾನ ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವೂ ಆಗಿತ್ತು. ಕಳೆದ 3 ವರ್ಷದ ಹಿಂದೆ ಕಾರಂಜಿಕೆರೆಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಚಿಟ್ಟೆ ಉದ್ಯಾನದ ಬಳಿ ಆತ್ಮ ಹತ್ಯೆಗೆ ಶರಣಾಗಿದ್ದನು. ಆ ಘಟನೆಯ ನಂತರ ಚಿಟ್ಟೆ ಉದ್ಯಾನವನವನ್ನು ಸ್ಥಗಿತಗೊಳಿಸಲಾಗಿತ್ತು.

ಕಾಲ ಕ್ರಮೇಣ ಪ್ರವಾಸಿಗರು ಚಿಟ್ಟೆ ಉದ್ಯಾನವನದತ್ತ ಹೋಗುವುದನ್ನು ನಿಲ್ಲಿಸಿದ್ದರು. ಅಲ್ಲದೇ ಸಿಬ್ಬಂದಿ ಪ್ರವಾಸಿಗರನ್ನು ಚಿಟ್ಟೆ ಉದ್ಯಾನದತ್ತ ಬಿಡದೇ ತಡೆಯೊಡ್ಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕಡ ಗಣನೆಗೆ ಒಳಗಾದ ಚಿಟ್ಟೆ ಉದ್ಯಾನವನ ನಶಿಸಿಹೋಗಿತ್ತು. ಆದರೆ ಇದೀಗ ಚಿಟ್ಟೆ ಉದ್ಯಾನವನಕ್ಕೆ ಮರು ಜೀವ ನೀಡಲು ಮೃಗಾಲಯ ಮುಂದಾಗಿದ್ದು, ಇದಕ್ಕೆ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡುವ ಮೂಲಕ ಇಂಬು ನೀಡುತ್ತಿದೆ.

ಎಲ್ಲಿ: ಈ ಹಿಂದೆ ಇದ್ದ ಸ್ಥಳದಲ್ಲಿಯೇ ಚಿಟ್ಟೆ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ. ಸುಮಾರು 1 ಗುಂಟೆ ವಿಸ್ತೀರ್ಣವಿರುವ ಸಣ್ಣ ದ್ವೀಪದಲ್ಲಿ ಚಿಟ್ಟೆ ಉದ್ಯಾನ ತಲೆ ಎತ್ತಲಿದೆ. ಈ ಹಿಂದೆ ಇದ್ದ ಚಿಟ್ಟೆ ಉದ್ಯಾನದಲ್ಲಿ ಪ್ರವಾಸಿಗರು ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಆ ಉದ್ಯಾನದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೇ ಕೇವಲ ಚಿಟ್ಟೆಗಳನ್ನು ನೋಡಿಕೊಂಡು ವಾಪಸ್ಸಾಗುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಚಿಟ್ಟೆಗಳ ಸಂರಕ್ಷಣೆಯಲ್ಲಿ ಅಗತ್ಯವೂ ಆಗಿದೆ.

20 ಬಗೆಯ ಚಿಟ್ಟೆ: ಈಗಾಗಲೇ ಮೈಸೂರು ಭಾಗದಲ್ಲಿ 10 ಬಗೆಯ ಚಿಟ್ಟೆಗಳಿವೆ. ಚಿಟ್ಟೆ ಉದ್ಯಾನದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಇರುವ ಚಿಟ್ಟೆಗಳನ್ನು ತಂದು ಪಾಲನೆ ಮಾಡು ವುದಕ್ಕೆ ನಿರ್ಧರಿಸಲಾಗಿದೆ. ಅಲ್ಲದೇ ಚಿಟ್ಟೆಗಳ ಮನೆಯನ್ನು ನಿರ್ಮಿಸಿ ಅದರಲ್ಲಿ ಚಿಟ್ಟೆಗಳನ್ನು ಬೆಳೆಸಿ ಈ ಉದ್ಯಾನದಲ್ಲಿ ಬಿಡಲಾಗುತ್ತದೆ. ಇದರೊಂದಿಗೆ ಮೃಗಾಲಯವು ಬೆಳೆಸಿದ ವಿವಿಧ ಬಗೆಯ ಚಿಟ್ಟೆಗಳನ್ನು ಮಕ್ಕಳಿಂದ ಉದ್ಯಾನವನಕ್ಕೆ ಬಿಡಿಸುವ ಆಲೋಚನೆಯೂ ಮೃಗಾಲಯದ ಮುಂದಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೇರೆ ಬೇರೆ ಸ್ಥಳಗಳಿಂದ ವಿವಿಧ ತಳಿಯ ಚಿಟ್ಟೆಗಳ ಮೊಟ್ಟೆಗಳನ್ನು ತರುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕಾರಂಜಿ ಕೆರೆಯ ದ್ವೀಪದಲ್ಲಿ ಚಿಟ್ಟೆಗಳನ್ನು ಸೆಳೆಯುವುದಕ್ಕಾಗಿ ವಿವಿಧ ಬಗೆಯ ಹೂವಿನ ಗಿಡ ಹಾಗೂ ಹಣ್ಣಿನ ಗಿಡವನ್ನು ಬೆಳೆಸುವುದಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ತಜ್ಞರು ಸಲಹೆಯನ್ನು ನೀಡಿದ್ದು, ಇದರೊಂದಿಗೆ ಈ ಹಿಂದೆ ಚಿಟ್ಟೆಗಳ ಉದ್ಯಾನದಲ್ಲಿ ಬೆಳೆಸಲಾಗಿದ್ದ ಗಿಡಗಳನ್ನೇ ಮತ್ತೊಮ್ಮೆ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ತ್ವರಿತ ಗತಿಯಲ್ಲಿ ಚಿಟ್ಟೆಗಳ ಆಕರ್ಷಣೆಗೆ ಬೇಕಾದ ಕಾಮಗಾರಿಯನ್ನು ನಡೆಸುವುದಕ್ಕೆ ಮೃಗಾಲಯ ಕ್ರಮ ಕೈಗೊಂಡಿ ರುವುದರಿಂದ ಮುಂದಿನ 4 ತಿಂಗಳೊಳಗೆ ಚಿಟ್ಟೆ ಉದ್ಯಾನ ವೀಕ್ಷಣೆಗೆ ಲಭ್ಯವಾಗಲಿದೆ.

– ಎಂ.ಟಿ.ಯೋಗೇಶ್‍ಕುಮಾರ್

Translate »