ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
ಮೈಸೂರು

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

December 10, 2018

ಮಡಿಕೇರಿ: ಕೊಡಗಿಗೆ ಅತ್ಯಂತ ಸನಿಹದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಟ್ಟನೂರಿ ನಲ್ಲಿರುವ ಕಣ್ಣೂರು ಇಂಟರ್ ನ್ಯಾಷನಲ್ ಏರ್‍ಪೋರ್ಟ್ ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿದೆ.

ಬಹಳ ವರ್ಷಗಳ ಕನಸಾಗಿದ್ದ 3 ಸಾವಿರ ಕೋಟಿ ರೂಪಾಯಿ ವೆಚ್ಚದ ಕಣ್ಣೂರು ಅಂತಾರಾಷ್ಟ್ರೀಯ ಏರ್‍ಪೋರ್ಟ್‍ನಿಂದ ಮೊದಲ ವಿಮಾನ ದಲ್ಲಿ ಕೊಡಗಿನ ಕೆಲ ಪ್ರಯಾಣಿಕರೂ ಸೇರಿದಂತೆ 136 ಪ್ರಯಾ ಣಿಕರು ಇಂದು ಬೆಳಿಗ್ಗೆ 10.10ಕ್ಕೆ ಅಬುದಾಬಿಗೆ ಹಾರಿದ್ದಾರೆ. ಮಟ್ಟನೂರಿನಲ್ಲಿ ಆಯೋಜಿತ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಪ್ರಥಮವಾಗಿ ಅಬು ದಾಬಿಗೆ ಹೊರಟ 136 ಪ್ರಯಾಣಿಕರನ್ನು ಹೊಂದಿದ್ದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮೊದಲು ನಿಲ್ದಾಣದ ಟರ್ಮಿನಲ್ ಕಟ್ಟಡವನ್ನೂ ವಿಧ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

ಅಬುದಾಬಿಗೆ ಹೊರಡುವ ಮೊದಲ ವಿಮಾನದ ಪ್ರಯಾಣಿಕ ರನ್ನು ಬೆಳಿಗ್ಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಪರವಾಗಿ ಬರಮಾಡಿಕೊಂಡು ಅವರನ್ನು ವಿಶೇಷ ವಾಗಿ ಸ್ವಾಗತಿಸಿ ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಆರಂಭಿಕ ವಿಮಾನದಲ್ಲಿ ಬೀಳ್ಕೊಡಲಾಯಿತು. ನಿಲ್ದಾಣದ ಹೊರ ಆವರಣದಲ್ಲಿ ಬೃಹತ್ ಸಭಾಂಗಣ, ಮುಂಭಾಗದಲ್ಲಿ ಭಾರಿ ಗಾತ್ರದ ವೇದಿಕೆಯಲ್ಲಿ ಅತಿಗಣ್ಯರಿಗೆ, ಗಣ್ಯರಿಗೆ, ಷೇರುದಾರ ರಿಗೆ, ನಿಲ್ದಾಣಕ್ಕೆ ಜಾಗ ನೀಡಿರುವ ಭೂ ಮಾಲೀಕರು, ಮಾಧ್ಯಮದವರು ಸೇರಿದಂತೆ ಸಾರ್ವಜನಿಕರಿಗೆ ಪ್ರತ್ಯೇಕವಾದ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಜನರ ಅನುಕೂಲ ಕ್ಕಾಗಿ 100ಕ್ಕೂ ಹೆಚ್ಚಿನ ಬೃಹತ್ ಎಲ್‍ಇಡಿ ಪರದೆಯನ್ನು ಅಳ ವಡಿಸಲಾಗಿತ್ತು. ವಿಮಾನ ನಿಲ್ದಾಣ ವೈವಿಧ್ಯಮಯ ರೀತಿಯ ಚಿತ್ರಕಲೆಗಳನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಂಗೊಳಿಸು ತ್ತಿತ್ತು. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹೈಟೆಕ್ ಏರ್ ಪೋರ್ಟ್‍ನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ಉದ್ಘಾಟನಾ ಕಾರ್ಯಕ್ರಮಕ್ಕೆ 1 ಲಕ್ಷ ಜನರನ್ನು ನೂತನ ವಿಮಾನ ನಿಲ್ದಾಣಕ್ಕೆ ಕರೆತರಲು 60 ಸರ್ಕಾರಿ ಬಸ್ಸುಗಳ ಉಚಿತ ಸೇವಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊಡಗಿನಿಂದ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಖಜಾಂಚಿ ಭಾಸ್ಕರ್, ಟ್ರಾವೆಲ್ ಕೂರ್ಗ್‍ನ ಸತ್ಯ, ಮಾದೇಟಿರ ತಿಮ್ಮಯ್ಯ ನೇತೃತ್ವದಲ್ಲಿ ಹಲವಾರು ಉದ್ಯಮಿ ಗಳು ಪಾಲ್ಗೊಂಡಿದ್ದರು. ಮೊದಲ ವಿಮಾನದಲ್ಲಿ ಅಬುದಾಬಿಗೆ ಸಿದ್ದಾಪುರದ ರಿಯಾಜ್ ಕೂಡ ತೆರಳಿದರು. ವಿಶೇಷ ಎಂಬಂತೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ನಿಯಂತ್ರಿಸುವ ಏರ್ ಟ್ರಾಫಿಕ್ ಕಂಟ್ರೋಲ್ ಕೊಠಡಿಯಲ್ಲಿ ಕಣ್ಣೂರಿನವರೇ ಆದ ಪಿ.ವಿ.ಹೃದ್ಯಾ ಎಂಬ ತರುಣಿಯೂ ಸೇರಿದಂತೆ ಜಿ.ಪ್ರದೀಪ್ ಕುಮಾರ್, ಶ್ರೀಲೇಶ್ ಶ್ರೀಧರನ್ ಎಂಬ ತಂತ್ರಜ್ಞರು ಮೊದಲ ವಿಮಾನದ ಹಾರಾಟವನ್ನು ಕಮಾಂಡ್ ಮಾಡಿದರು. ಈ ಮೂವರೂ ಕಣ್ಣೂರಿನವರೇ ಆಗಿದ್ದು, ಇದೀಗ ತಮ್ಮೂರಿನಿಂದಲೇ ಹಾರಾಡುವ ವಿಮಾನ ಗಳ ನಿಯಂತ್ರಣ ಕಾರ್ಯಕ್ಕೆ ನಿಯೋಜನೆಗೊಂಡಿರುವುದು ಮತ್ತೊಂದು ವಿಶೇಷವಾಗಿದೆ.

Translate »