ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ಯಶಸ್ವಿ
ಕೊಡಗು

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ಯಶಸ್ವಿ

September 3, 2018

ಮಡಿಕೇರಿ:  ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾ ನದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಗೊಂಡಿದೆ. ದೆಹಲಿಯಿಂದ ತಜ್ಞರನ್ನು ಹೊತ್ತು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿಮಾನ ಶುಕ್ರವಾರದಂದು 3 ತಾಸುಗಳಷ್ಟು ನಿಲ್ದಾಣದ ಎಲ್ಲಾ ಭಾಗ ಗಳಿಂದಲೂ ಪರೀಕ್ಷಾರ್ಥ ಪ್ರಯೋಗ ನಡೆಸಿ ಮುಂಬರುವ ವಿಮಾನಯಾನ ಸೇವೆಗೆ ಹಸಿರು ನಿಶಾನೆ ತೋರಿಸಿತು.

ಇದಕ್ಕೂ ಮೊದಲು ಪೈಲಟ್, ಸಹ ಪೈಲಟ್ ಸೇರಿದಂತೆ 8 ಜನ ತಜ್ಞರ ತಂಡವನ್ನು ಹೊತ್ತ ಎಎಐನ ತಾಂತ್ರಿಕ ವಿಮಾನ ಗುರುವಾರದಂದು ಮಧ್ಯಾಹ್ನ ದೆಹಲಿಯಿಂದ ಹೊರಟು ಹೈದರಾಬಾದ್ ಮಾರ್ಗವಾಗಿ ಸಂಜೆ 4.31ರ ಸಮಯದಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‍ವೇಯಲ್ಲಿ ಇಳಿಯಿತು. ಆ ಮೂಲಕ ವಿಮಾನವೊಂದು ಈ ನಿಲ್ದಾಣಕ್ಕೆ ಅಧಿಕೃತವಾಗಿ ಪ್ರಥಮ ಭಾರಿಗೆ ಭೂಸ್ಪರ್ಶ ಮಾಡಿದಂತಾಯಿತು. ವಿಮಾನದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲೋಕಾರ್ಪಣೆಗಾಗಿ ದಿನಗಣನೆ ಆರಂಭಗೊಂಡಿದೆ. ಇದೀಗ ಶೇ.98 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ಸಜ್ಜಾಗಿದೆ. ಟರ್ಮಿನಲ್ ಭಾಗದಲ್ಲಿ ಕೆಲವು ಕೆಲಸಗಳು ಬಾಕಿ ಉಳಿದಿದ್ದು, ಅಕ್ಟೋಬರ್ 20ರೊಳಗಾಗಿ ಎಲ್ಲಾ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವಂಬರ್ ಮೊದಲ ವಾರದಲ್ಲಿ ಅಧಿಕೃತವಾಗಿ ಸೇವೆ ಆರಂಭಗೊಳ್ಳುವುದು ನಿಶ್ಚಿತವಾಗಿದೆ. ಕೊಡಗು ಜಿಲ್ಲೆಗೆ ಹೆಚ್ಚು ಪ್ರಯೋಜನವಾಗುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೊಡಗಿನ ನೆರೆ ಜಿಲ್ಲೆಯಾದ ಕಣ್ಣೂರಿನ ಮಟ್ಟನೂರು ಎಂಬ ಪ್ರದೇಶದಲ್ಲಿ ರೂಪುಗೊಂಡಿದೆ.

ವಿರಾಜಪೇಟೆಯಿಂದ ಇರಿಟ್ಟಿ ಮಾರ್ಗವಾಗಿ ಕೇವಲ 52 ಕಿ.ಮೀ ದೂರದಲ್ಲಿ ಮಟ್ಟನೂರು ಪಟ್ಟಣವಿದೆ. ಈ ಪಟ್ಟಣದಿಂದ ಕೇವಲ 2.85 ಕಿ.ಮೀ ದೂರದಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿದೆ. ಕಣ್ಣನೂರಿನಿಂದ 23 ಕಿ.ಮೀ ದೂರದಲ್ಲಿರುವ ಮಟ್ಟನೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿರುವುದು ಕೊಡಗಿನ ಜನರ ಪಾಲಿಗೆ ಮತ್ತಷ್ಟು ಅನುಕೂಲವಾಗಲಿದೆ.

ಒಟ್ಟು ರೂ. 1892 ಕೋಟಿ ಮೊತ್ತದ ಆರಂಭಿಕ ವೆಚ್ಚದಲ್ಲಿ ಅನುಷ್ಟಾನಗೊಳಿಸಿದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ 9 ಲಕ್ಷ ಚ.ಅಡಿ ವಿಸ್ತೀರ್ಣವಿದ್ದು, ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಟರ್ಮಿನಲ್ ಕಟ್ಟಡ ಬಹುದೂರದಿಂದಲೇ ಗಮನ ಸೆಳೆಯುತ್ತದೆ. ಪ್ರಯಾಣಿಕರಿಗೆ ವಿಮಾನವನ್ನು ನೇರವಾಗಿ ಏರಲು ಅನುಕೂಲವಾಗುವಂತೆ ಅತ್ಯಾಧುನಿಕ ಮೂರು `ಏರೋಬ್ರಿಡ್ಜ್’ಗಳ ಸೌಲಭ್ಯವಿದ್ದು, ಒಟ್ಟು 20 ಸಾಧಾರಣ ಅಥವಾ 14 ಬೃಹತ್ ವಿಮಾನಗಳನ್ನು ಏಕಕಾಲಕ್ಕೆ ನಿಲ್ಲಿಸಬಹುದಾಗಿದೆ.

ವಿಮಾನ ನಿಲ್ದಾಣದ ಬಹುಮುಖ್ಯ ಭಾಗವಾಗಿರುವ ಏರ್ ಟ್ರಾಫಿಕ್ ಕಂಟ್ರೋಲರ್ (ಎ.ಟಿ.ಸಿ) ಕಟ್ಟಡ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ನಿಲ್ದಾಣದ ಆವರಣದಲ್ಲೆ ಬಿ.ಪಿ.ಸಿ.ಎಲ್ ಅಧೀನದ ಬಿ.ಕೆ.ಎಫ್.ಎಫ್ ಪಿ.ಎಲ್ ಸಂಸ್ಥೆ ಒಟ್ಟು 9.90 ಲಕ್ಷ ಲೀಟರ್ ಸಾಮರ್ಥ್ಯದ 2 ಬೃಹತ್ ಇಂಧನ ಸಂಗ್ರಹ ಟ್ಯಾಂಕನ್ನು ನಿರ್ಮಿಸಿದ್ದು, ಇದರಲ್ಲಿ ನೆಲ ಮಾಳಿಗೆಯ ಟ್ಯಾಂಕ್ ಕೂಡ ಒಳಗೊಂಡಿದೆ. ವಿಮಾನಗಳಿಗೆ ಇಲ್ಲಿಂದಲೇ ನೇರವಾಗಿ ಇಂಧನ ತುಂಬಿಸುವ ವ್ಯವಸ್ಥೆಯೂ ಇದೆ.

ರನ್ ವೇ ವಿಶೇಷ: ವಿಮಾನ ನಿಲ್ದಾ ಣದ ಮೊದಲ ಹಂತದ ರನ್‍ವೇ 3050 ಮೀ. ಉದ್ದವಿದ್ದು, ವಿಮಾನ ನಿಲ್ದಾಣ ಉದ್ಘಾಟನೆಯಾದ ಬಳಿಕ ರನ್ ವೇಯನ್ನು ವಿಸ್ತರಿಸುವ ಕಾರ್ಯ ಆರಂಭವಾಗಲಿದೆ. ಎರಡನೇ ಹಂತವಾಗಿ ಈ ರನ್ ವೇಯನ್ನು 3400 ಮೀ. ವಿಸ್ತರಿಸುವ ಗುರಿ ಹೊಂದಲಾಗಿದ್ದು, ಬಳಿಕ ಭವಿಷ್ಯದಲ್ಲಿ ರನ್ ವೇಯನ್ನು ಗರಿಷ್ಠ 4000 ಮೀ. ಉದ್ದದಲ್ಲಿ ಅಭಿವೃದ್ದಿ ಪಡಿಸುವ ಯೋಜನೆಯಿದೆ. ರನ್ ವೇ ಏರಿಯಾದಲ್ಲಿ ಅಗತ್ಯವಾಗಿರುವ `ರನ್ ವೇ ಎಂಡ್’ ಮತ್ತು `ಸೇಪ್ಟಿ ಏರಿಯಾ’ ವನ್ನು ಸುರಕ್ಷತೆಯ ದೃಷ್ಟಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

Translate »