ನಾವು ಸ್ವಲ್ಪ ಎಚ್ಚರದಿಂದಿದ್ದರೆ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೆ?
ಮೈಸೂರು

ನಾವು ಸ್ವಲ್ಪ ಎಚ್ಚರದಿಂದಿದ್ದರೆ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೆ?

September 3, 2018

ಮೈಸೂರು: ನಮ್ಮ ಮೂರ್ಖತನದಿಂದಾಗಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಂತಾಯಿತು. ಅಂದು ನಾವು ಸ್ವಲ್ಪ ಎಚ್ಚರವಾಗಿದ್ದರೆ, ಜಾಗೃತರಾಗಿದ್ದರೆ, ಸಂಘಟಿತರಾಗಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿದ್ದರೇ? ಮೋದಿಯವರ ಗೆಲುವಿನ ಹಿಂದೆ ನಮ್ಮ ಅಸಹಾಯಕತೆ, ನಮ್ಮ ವಿಘಟನೆ ಇದೆ ಎಂದು ವಿಚಾರವಾದಿ ಪ್ರೊ.ಬಿ.ಪಿ.ಮಹೇಶ್‍ ಚಂದ್ರಗುರು ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಕಾಯಕಯೋಗಿ ವಿಕಾಸ ವೇದಿಕೆ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಸಂದರ್ಭದಲ್ಲಿ `ಪ್ರಸ್ತುತ ರಾಜಕಾರಣದಲ್ಲಿ ಸಮಾಜ ಮತ್ತು ಯುವಶಕ್ತಿಯ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ `ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಹೊಣೆ’ ವಿಷಯದ ಬಗ್ಗೆ ಮಾತನಾಡಿದರು.

ಇಂದಿರಾಗಾಂಧಿ ತುರ್ತುಸ್ಥಿತಿ ಹೇರಿ ತಮ್ಮ ವಿರೋಧಿಗಳನ್ನು ಜೈಲಿಗೆ ಅಟ್ಟಿದರೇ ಹೊರತು, ಯಾರನ್ನೂ ಕೊಲ್ಲಲಿಲ್ಲ. ಆದರೆ ನರೇಂದ್ರ ಮೋದಿ, 2014ರಲ್ಲಿ ಅಧಿಕಾರಕ್ಕೆ ಬಂದು 2000 ಜನ ಪ್ರಗತಿಪರರರು, ಹೋರಾಟಗಾರರು, ಚಿಂತಕರ ಸಾವಿಗೆ ಕಾರಣರಾಗಿದ್ದಾರೆ. ದಾಬೋಲ್ಕರ್, ಕಲಬುರ್ಗಿ, ಗೌರಿ ಹತ್ಯೆ ನಡೆಯಿತು. ಇದನ್ನು ಸಿಬಿಐಗೆ ವಹಿಸಿದ್ದರೆ ಖಂಡಿತ ಸತ್ಯ ಹೊರ ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಕ್ವಿಟ್ ಮೋದಿ ಚಳುವಳಿ ಅಗತ್ಯ: ಪ್ರಜಾಪ್ರಭುತ್ವ ಇರುವುದು ಪ್ರಜೆಗಳ ಉದ್ಧಾರಕ್ಕಾಗಿಯೇ ಹೊರತು ಮೋದಿ ಉದ್ಧಾರಕ್ಕಲ್ಲ ಎಂದು ಅಭಿಪ್ರಾಯಪಟ್ಟ ಅವರು, `ಸಬ್‍ಕ ಸಾತ್, ಸಬ್‍ಕ ವಿಕಾಸ್’ ಎನ್ನುವ ಅವರ ಆಡಳಿತದಲ್ಲಿ 4.60 ಲಕ್ಷ ರೈತರು ಸಾವಿಗೀಡಾಗಿದ್ದಾರೆ. ಯುವಕರಿಗೆ ಉದ್ಯೋಗದ ಆಮಿಷ ಒಡ್ಡಿದರೂ ಉದ್ಯೊಗ ಸೃಷ್ಟಿ ಮಾಡಲಿಲ್ಲ. ಮೂಲಭೂತವಾದಿಗಳ ಈ ಆಡಳಿತದಲ್ಲಿ ಮೊಟ್ಟ ಮೊದಲ ಬಲಿಪಶುಗಳು ದಲಿತರು, ನಂತರ ಹಿಂದುಳಿದವರು, ಮಹಿಳೆಯರು. ಇದೆಲ್ಲವನ್ನೂ ದೇಶದ ಜನತೆ ಅರಿತುಕೊಳ್ಳಬೇಕು. 2019ರ ಚುನಾವಣೆಯಲ್ಲಾದರೂ ಎಲ್ಲಾ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ್ಗಗಳು, ಮಹಿಳೆಯರು ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸಬೇಕಾಗಿದೆ. ರಾಜಕೀಯ ಜೀತ ಪದ್ಧತಿಯಿಂದ ನಾವೆಲ್ಲರೂ ಹೊರ ಬರಬೇಕಿದೆ. 2019ರಲ್ಲಿ `ಕ್ವಿಟ್ ಮೋದಿ’ ಚಳುವಳಿ ಕೈಗೊಳ್ಳಬೇಕಾಗಿದೆ. ರಾಜಕೀಯ ಪರಿವರ್ತನೆ ಮಾಡಬೇಕಿದೆ. ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಅದಕ್ಕಾಗಿ ಹಿಂದುತ್ವವಾದಿಗಳನ್ನು ಹೊರತುಪಡಿಸಿ, ಎಲ್ಲಾ ಪ್ರಗತಿಪರ ಪಕ್ಷಗಳು ಸಂಘಟಿತರಾಗಬೇಕಾಗಿದೆ ಎಂದರು.

ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರನ್ನು ಸ್ಮರಿಸಿದ ಮಹೇಶ್‍ಚಂದ್ರಗುರು, 20 ಅಂಶಗಳ ಕಾರ್ಯಕ್ರಮ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಯೋಜನೆಗಳನ್ನು ತಂದು ಕೊಟ್ಟವರು. ದೇಶದಲ್ಲಿಯೇ ಕರ್ನಾಟಕವನ್ನು ಉಜ್ವಲಗೊಳಿಸಿದವರು. ಶ್ರೀಮಂತರಲ್ಲದವರು, ಮೇಲ್ವಗಕ್ಕೆ ಸೇರಿಲ್ಲದವರು, ಅಲಕ್ಷಿತರು, ದೀನ ದಲಿತರಿಗೆ, ಅಹಿಂದ ವರ್ಗಗಳಿಗೆ ಅಧಿಕಾರ ಕೊಟ್ಟವರು. ಅರಸರ ನಂತರ ಹಿಂದುಳಿದವರ ಬಗ್ಗೆ ಹೋರಾಡಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅಂಥವರನ್ನೇ ಸೋಲಿಸಲಾಯಿತು. ಅವರ ಸೋಲು ಪ್ರಜಾಪ್ರಭುತ್ವದ ಸೋಲು. ದೀನ ದುರ್ಬಲರ ಸೋಲು ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಅನಿವಾರ್ಯತೆಯಿಂದಾಗಿ 80 ಶಾಸಕರ ಬಲವಿದ್ದರೂ ಕಡಿಮೆ ಸಂಖ್ಯೆಯವರಿಗೆ ಅವಕಾಶ ಕೊಟ್ಟು ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ. ಅರಸರ ಪ್ರಗತಿಶೀಲ ಪರಂಪರೆಯನ್ನು ಅತ್ಯಂತ ಬದ್ಧತೆಯಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ಸಮನ್ವಯ ಸಮಿತಿಯಲ್ಲಿ ಅವರೇ ಈಗ ಸೂಪರ್ ಚೀಫ್ ಮಿನಿಷ್ಟರ್ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಶ್ರೀ ಯೋಗೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಮತ್ತು ವ್ಯಕ್ತಿತ್ವ ವಿಕಸನ ವಿಷಯ ಕುರಿತು ಬೆಂಗಳೂರಿನ ಕನಕದಾಸ ಸಂಶೋದನ ಅಧ್ಯಯನ ಕೇಂದ್ರದ ಕಾ.ತ.ಚಿಕ್ಕಣ್ಣ ಮಾತನಾಡಿದರು. ವೇದಿಕೆ ಅಧ್ಯಕ್ಷ ಡಾ.ಮಾಲೇಗೌಡ, ಕಾರ್ಯದರ್ಶಿ ಪುರುಷೋತ್ತಮ್ ಮರಿಗೌಡ, ತಿಮ್ಮೇಗೌಡ ಇನ್ನಿತರ ಪದಾಧಿಕಾರಗಳು ಉಪಸ್ಥಿತರಿದ್ದರು.

Translate »