ನ್ಯಾಯಾಧೀಶರುಗಳಿಗೆ ಪುನಶ್ಚೇತನ ತರಬೇತಿ: ಮಧ್ಯಸ್ಥಿಕೆ ವಿಧಾನದಿಂದ ಸಿವಿಲ್ ಮೊಕದ್ದಮೆ ಒತ್ತಡ ನಿವಾರಣೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಕೆ. ವೆಂಟಿಗೋಡಿ
ಮೈಸೂರು

ನ್ಯಾಯಾಧೀಶರುಗಳಿಗೆ ಪುನಶ್ಚೇತನ ತರಬೇತಿ: ಮಧ್ಯಸ್ಥಿಕೆ ವಿಧಾನದಿಂದ ಸಿವಿಲ್ ಮೊಕದ್ದಮೆ ಒತ್ತಡ ನಿವಾರಣೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಕೆ. ವೆಂಟಿಗೋಡಿ

September 3, 2018

ಮೈಸೂರು:  ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಗಳ ಒತ್ತಡ ನಿವಾರಿಸಲು ಹಾಗೂ ತ್ವರಿತ ನ್ಯಾಯ ಒದಗಿಸಲು `ಮಧ್ಯಸ್ಥಿಕೆ ವಿಧಾನ’ ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ನ್ಯಾಯಾಧೀಶರು ಈ ವಿಧಾನದ ಬಗ್ಗೆ ವಿಸ್ತøತ ಜ್ಞಾನ ಸಂಪಾದನೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಮೈಸೂರು ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅಭಿಪ್ರಾಯಪಟ್ಟರು.

ಕರ್ನಾಟಕ ಹೈಕೋರ್ಟ್‍ನ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ವತಿಯಿಂದ ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ `ಸಿವಿಲ್ ಪ್ರಕರಣದಲ್ಲಿ ಮಧ್ಯಸ್ಥಿಕಾ ವಿಧಾನ’ ಕುರಿತಂತೆ ಮೈಸೂರು ಮತ್ತು ಕೊಡಗು ಜಿಲ್ಲೆಯ ನ್ಯಾಯಾಧೀಶರಿಗೆ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿದ್ದು, ಈ ಪೈಕಿ 45 ಸಾವಿರ ಪ್ರಕರಣಗಳು ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿವೆ. ನ್ಯಾಯಾಧೀಶರಿಗೆ ತಲಾ 1200ರಂತೆ ಈ ಸಿವಿಲ್ ಪ್ರಕರಣಗಳು ಹಂಚಿಕೆ ಆಗಲಿವೆ. ಜೊತೆಗೆ ಎಲ್ಲಾ ವಿಧದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಸಿವಿಲ್ ಪ್ರಕರಣಗಳ ಒತ್ತಡ ಕಡಿಮೆಗೊಳಿಸಲು ಮಧ್ಯಸ್ಥಿಕಾ ವಿಧಾನ ಹೆಚ್ಚು ಪ್ರಯೋಜನಕಾರಿ ಆಗಲಿದ್ದು, ಆ ಮೂಲಕ ಕ್ರಿಮಿನಲ್ ಪ್ರಕರಣಗಳ ತ್ವರಿತಗತಿಯಲ್ಲಿ ವಿಲೇವಾರಿಗೆ ಗಮನ ಕೇಂದ್ರೀಕರಿಸಲು ಅವಕಾಶ ದೊರೆಯಲಿದೆ ಎಂದು ಹೇಳಿದರು.

ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ವಿಧಾನಗಳ ಮೂಲಕ ಇತ್ಯರ್ಥಗೊಳಿಸಲು ಈ ರೀತಿ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ಆ ಮೂಲಕ ಮಧ್ಯಸ್ಥಿಕೆ ವಿಧಾನದ ಬಗ್ಗೆ ಹೆಚ್ಚು ಜ್ಞಾನ ವೃದ್ಧಿಸಿಕೊಳ್ಳಲು ನ್ಯಾಯಾಧೀಶರಿಗೆ ನೆರವಾಗಲಿದೆ. ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಮಧ್ಯಸ್ಥಿಕೆ ವಿಧಾನದ ಮೂಲಕ ಸಿವಿಲ್ ಪ್ರಕರಣಗಳಿಗೆ ಸುಖಾಂತ್ಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ನಿರ್ದೇಶಕಿ ಶುಭಾ ಗೌಡರ್ ಮಾತನಾಡಿ, ನ್ಯಾಯಾಧೀಶರು ಸಿವಿಲ್ ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕಾ ವಿಧಾನ ವಹಿಸುವ ಮಹತ್ವದ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳಬೇಕು. ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದಲ್ಲಿ 117 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 16 ಮಂದಿ ಮಧ್ಯಸ್ಥಿಕಾ ವಿಧಾನದ ತರಬೇತುದಾರರು ಇದ್ದಾರೆ. ಜೊತೆಗೆ 6 ಮಂದಿ ಹಿರಿಯ ನ್ಯಾಯವಾದಿಗಳು ಮಾಸ್ಟರ್ ಟ್ರೇನರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಠಿಣ ಎನ್ನಿಸುವಂತಹ ಹಲವು ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ ನಮ್ಮ ಕೇಂದ್ರಕ್ಕೆ ಇದೆ ಎಂದರು.

ಕೊಡಗು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ವಿ.ಮಲ್ಲಾಪುರ್ ಮಾತನಾಡಿ, ವ್ಯಾಜ್ಯಗಳಿಲ್ಲದ ಸಮಾಜ ಹಾಗೂ ಕಾಲವನ್ನು ಕಾಣಲಾಗದು. ಅದೇ ರೀತಿ ವ್ಯಾಜ್ಯಗಳನ್ನು ಸಂಧಾನ ಹಾಗೂ ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸುವ ವಿಧಾನ ಹೊಸದೇನಲ್ಲ. ಈ ಮಧ್ಯಸ್ಥಿಕೆ ಪರಿಕಲ್ಪನೆ ನಮ್ಮಲ್ಲಿ ಹಿಂದಿನ ಕಾಲದಿಂದಲೂ ಇದೆ ಎಂದು ತಿಳಿಸಿದರು.

ಬಳಿಕ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಮಾಸ್ಟರ್ ಟ್ರೇನರ್ ಪ್ರಸಾದ್ ಸುಬ್ಬಣ್ಣ ಮಧ್ಯಸ್ಥಿಕಾ ವಿಧಾನದ ಬಗ್ಗೆ ಬೆಳಕು ಚೆಲ್ಲಿದರು. `ಮಧ್ಯಸ್ಥಿಕಾ ವಿಧಾನಗಳ ಕುರಿತಂತೆ ನ್ಯಾಯಾಧೀಶರ ಪಾತ್ರ’, `ಮಧ್ಯಸ್ಥಿಕಾ ವಿಧಾನದ ಆಯಾಮಗಳು’ ಹಾಗೂ `ಮಧ್ಯಸ್ಥಿಕಾ ವಿಧಾನಕ್ಕೆ ಒಳಪಡಲು ಅರ್ಹವಾದ ಪ್ರಕರಣಗಳ’ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ ಸೇರಿದಂತೆ ಮೈಸೂರು ಮತ್ತು ಕೊಡಗು ಜಿಲ್ಲೆಯ ನ್ಯಾಯಾಧೀಶರು ಪಾಲ್ಗೊಂಡಿದ್ದರು.

ಶೇ.64ರಷ್ಟು ಪ್ರಕರಣಗಳಿಗೆ ಮುಕ್ತಿ
ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ ಕರ್ನಾಟಕ ಹೈಕೋರ್ಟ್ ವತಿಯಿಂದ 2007ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೆ ಕೇಂದ್ರದ ವ್ಯಾಪ್ತಿಗೆ ಬಂದ ಸಿವಿಲ್ ಪ್ರಕರಣಗಳಲ್ಲಿ ಶೇ.64ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಕೇಂದ್ರ ಯಶಸ್ವಿಯಾಗಿದೆ.
-ಕೇಂದ್ರದ ನಿರ್ದೇಶಕಿ ಶುಭಾ ಗೌಡರ್

Translate »