ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ
ಕೊಡಗು

ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ

September 3, 2018

ಮಡಿಕೇರಿ: ಬಾಯ್ಬಿರಿದು ನಿಂತಿರುವ ಬೆಟ್ಟಗಳು.. ಕುಸಿದು ಬಿದ್ದ ಬೃಹತ್ ಬಂಡೆಗಳು.. ರಸ್ತೆಗಳು ಇತ್ತೆಂಬುದಕ್ಕೆ ಸಾಕ್ಷಿಯನ್ನೇ ಉಳಿಸದ ಮಣ್ಣಿನ ರಾಶಿ. ಕಾಫಿ ತೋಟಗಳಿಂದ ಛಿದ್ರಗೊಂಡು ಹಾರಿ ಹರಡಿಕೊಂಡಿರುವ ಕಾಫಿ ಗಿಡಗಳು. ಎಲ್ಲಿ ನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಗಳ ಅವಶೇಷಗಳು. ಇದು ಮ್ಕಕಂದೂರು ವ್ಯಾಪ್ತಿಯಲ್ಲಿ ಕಂಡು ಬರುವ ಕರಾಳ ಚಿತ್ರಣ..

ಕಾಫಿ ತೋಟಗಳು, ಗದ್ದೆ ಬಯಲುಗಳ ನಡುವೆ ನೆಲೆ ನಿಂತಿದ್ದ ಮಕ್ಕಂದೂರು ಗ್ರಾಮ ವರುಣನ ಮುನಿಸಿಗೆ ಸಂಪೂರ್ಣ ಧ್ವಂಸಗೊಂಡಿದೆ. ಮಡಿಕೇರಿಯಿಂದ ಮಕ್ಕಂ ದೂರು ಜಂಕ್ಷನ್‍ಗೆ ತೆರಳಿ ಅಲ್ಲಿಂದ ತಂತಿ ಪಾಲದ ಹಾದಿ ಹಿಡಿದರೆ ಮುಂದೆ ಕಾಣ ಸಿಗುವುದೆಲ್ಲವೂ ಊಹಿಸಲಸಾಧ್ಯವಾದ ಭೀಕರತೆ. ಊರಿಗೆ ಊರೇ ನಾಶದ ಹಾದಿ ಹಿಡಿದಿದ್ದು, ಇದೀಗ ಅಲ್ಲಿ ನೆಲೆ ನಿಂತಿದ್ದ ಕುಟುಂಬಗಳು ಬೇರೆ ಊರು ಗಳಿಗೆ ಗುಳೆ ಹೊರಟಿದ್ದಾರೆ.

ಆಗಸ್ಟ್ 16 ರಂದು ಸುರಿದ ಮರಣ ಮಳೆಗೆ ಧ್ವಂಸಗಳೊಂಡ ಗ್ರಾಮಗಳ ಪೈಕಿ ಮಕ್ಕಂದೂರು ಗ್ರಾಮವೂ ಒಂದು. ಬಹುತೇಕ ಕೂಲಿ ಕಾರ್ಮಿಕರೇ ನೆಲೆ ನಿಂತಿದ್ದ ಮಕ್ಕಂದೂರು ಗ್ರಾಮದಲ್ಲಿ ಅತ್ಯಲ್ಪ ಸ್ಥಳ ಗಳಲ್ಲಿ ಕಟ್ಟಿಕೊಂಡಿದ್ದ ಮನೆಗಳು ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣಾಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹುಡುಕಿದರೂ ಸಿಗದಷ್ಟು ಚೂರು-ಚೂರಾಗಿದೆ. ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ವಿವಿಧ ನಿರಾಶ್ರಿತರ ಕೇಂದ್ರಗಳಲ್ಲಿದ್ದ ಮಕ್ಕಂ ದೂರು ನಿವಾಸಿಗಳು ತಮ್ಮ ಗ್ರಾಮವನ್ನು ಕಂಡು ಕಣ್ಣೀರಿನೊಂದಿಗೆ ದಿಜ್ಞೂಢರಾಗಿದ್ದಾರೆ. ಕಷ್ಟಪಟ್ಟು ಕಟ್ಟಿದ್ದ ಮನೆ, ಬೆವರು ಸುರಿಸಿ ದುಡಿದು ಸಲಹಿದ್ದ ಕಾಫಿ ತೋಟಗಳು ಮಣ್ಣಲ್ಲಿ ಮರೆಯಾಗಿ ಅವರ ಕುರುಹು ಇಲ್ಲದಂತಾಗಿದೆ. ಮುಂದೆ ಗತಿ ಏನು ಎಂಬ ಚಿಂತೆ ಮಕ್ಕಂದೂರು ನಿವಾಸಿಗಳನ್ನು ಕಾಡುತ್ತಿದೆ. ಭವಿಷ್ಯದ ಬದುಕಿ ಗಾಗಿ ಹುಟ್ಟಿ ಬೆಳೆದ ಊರನ್ನು ತೊರೆಯ ಬೇಕಾದ ಅನಿವಾರ್ಯತೆಯೂ ಎದುರಾಗಿದೆ.

‘ಮೈಸೂರು ಮಿತ್ರ’ ಮಕ್ಕಂದೂರು ಗ್ರಾಮದ ಮೂಲಕ ತಂತಿಪಾಲದ ಕಡೆ ತೆರಳಿದ ಸಂದರ್ಭ ಹಲವು ಮಂದಿ ಊರು ತೊರೆಯುತ್ತಿರುವುದು ಕಂಡು ಬಂತು. ಉಟ್ಟಿರುವ ಬಟ್ಟೆ, ಉಳಿದಿರುವ ಜೀವ ಈ ಎರಡನ್ನು ಬಿಟ್ಟು ಇದೀಗ ಇನ್ನೇನು ಉಳಿದಿಲ್ಲ.

ಮನೆ, ತೋಟ ಎಲ್ಲಾ ಕೊಚ್ಚಿ ಹೋಗಿ ಹೊಳೆ ಸೇರಿದೆ. ಈ ಊರಲ್ಲಿ ಬದುಕೋದು ಹೇಗೆ ಹೇಳಿ? ಸದ್ಯಕ್ಕೆ ಸಂಬಂಧಿಕರ ಮನೆಯಲ್ಲಿ ಉಳಿದು ಕೊಂಡಿದ್ದೇನೆ. ಸರಕಾರ ಮನೆ ಕಟ್ಟಿ ಕೊಡೊದಾಗಿ ಹೇಳಿದೆ. ಅಲ್ಲಿಯವರೆಗೆ ಕಾಯಬೇಕು. ಮುಂದೆನಾಗುತ್ತೋ ನೋಡ ಬೇಕು ಎಂದು ಊರು ಬಿಟ್ಟು ಗುಳೆ ಹೊರಟ ಘನಾವತಿ ಅವರು ತಮ್ಮ ಅಳಲು ತೋಡಿ ಕೊಂಡರು. ಹೀಗೆ ಮುಂದೆ ಸಾಗಿದಾಗ ಸಾಕು ನಾಯಿಗಳು, ದನ-ಕರುಗಳೂ ತಮ್ಮವರೊಂದಿಗೆ ತೆರಳಲಾಗದೆ ಅಸಹಾಯಕವಾಗಿ ರಸ್ತೆಯಲ್ಲಿ ನಿಂತುಕೊಂಡಿದ್ದು ಕೂಡ ಕಂಡು ಬಂತು.

ಆಗಸ್ಟ್ 15ರ ರಾತ್ರಿ ಭಾರಿ ಮಳೆ ಸುರಿಯಿತು. ಭೂಮಿ ಕುಸಿಯುತ್ತಿರುವ ಶಬ್ಧ ಮನೆ ಹಿಂದೆಯೇ ಕೇಳಿಸಿತು. ತಕ್ಷಣವೇ ಮನೆ ಮಂದಿಯೆಲ್ಲಾ ಹೊರಗೋಡಿ ಬಂದು ಪ್ಕಕದಲೇ ಇದ್ದ ಬೇರೆಯವರ ಮನೆಯಲ್ಲಿ ರಾತ್ರಿ ಕಳೆದವು. ಬೆಳಿಗ್ಗೆ ನೋಡಿದಾಗ ತೋಟ, ಮನೆ, ಎಲ್ಲವೂ ಧ್ವಂಸವಾಗಿತ್ತು. ಆ ಬಳಿಕ ಊರಿಗೆ ಬಂದ ಅಗ್ನಿಶಾಮಕ ದಳದವರು ತಕ್ಷಣವೇ ಊರು ಬಿಡುವಂತೆ ಹೇಳಿದರು.

ಸಂಬಂಧಿಕರೊಬ್ಬರು ತಮ್ಮ ಮನೆ ಖಾಲಿ ಇದೆ ಎಂದು ಆಶ್ರಯ ನೀಡಿದರು. ಆದ್ರೆ, ಮನೆ ಬಿಡುವ ಸಂದರ್ಭ ಜೊತೆಗಿದ್ದ ದನ-ಕರುಗಳೂ ಕಾಣುತ್ತಿಲ್ಲ, ಹುಡುಕಿದರೂ ಸಿಗಲಿಲ್ಲ. ಇಂತಹ ಪರಿಸ್ಥಿತಿ ನಮ್ಮೂರಿಗೆ ಬಂದೋಯ್ತು ಎಂದು ಚೆನ್ನಪಂಡ ಮುತ್ತಣ್ಣ ಕಂಬನಿ ಮಿಡಿದರು. 4 ಎಕರೆ ತೋಟವಿತ್ತು, 2 ಎಕರೆ ಗದ್ದೆಯೂ ಹೊಳೆ ಬದಿ ಇತ್ತು. ಬೆಟ್ಟ ಕುಸಿದು ತೋಟದ ಮೇಲೆ ಬಿದ್ದಿದೆ.

ತೋಟ ಸರ್ವನಾಶವಾಗಿದೆ. ಗದ್ದೆಯ ಮೇಲೆ ಹೊಳೆ ಹರಿಯುತ್ತಿದೆ ಎಂದು ಚನ್ನಪಂಡ ಕುಸುಮಾ ಕಂಬನಿ ಗರೆದರು. ಕಟ್ಟಿದ್ದ ಮನೆ ಭೂ ಸಮಾಧಿಯಾಗಿದೆ. ಈಗ ಉಳಿದದ್ದು ವಾಷಿಂಗ್ ಮಿಷನ್ ಮಾತ್ರ. ಅದನ್ನೇ ವಾಪಾಸು ಕೊಂಡೊಯ್ಯುತ್ತಿದ್ದೇನೆ. ಈ ಊರಿನ ಮುಂದಿನ ಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ಸರಕಾರ ಮನೆ ಕಟ್ಟಿ ಕೊಡುತ್ತದೆ ಎಂದು ನಂಬಿದ್ದೇನೆ ಎಂದು ಮಕ್ಕಂದೂರು ಬೋರ್‍ವೆಲ್ ಪೈಸಾರಿ ನಿವಾಸಿ ರೀನಾ ಹತಾಶರಾಗಿ ನುಡಿದರು.

ಒಟ್ಟಿನಲ್ಲಿ ಮಕ್ಕಂದೂರು ಗ್ರಾಮ ಯುದ್ದ ಪೀಡಿತ ಪ್ರದೇಶದಂತಾಗಿದ್ದು, ಸಹಜ ಸ್ಥಿತಿಗೆ ಮರಳಲು ಹಲವು ವರ್ಷಗಳೇ ಉರುಳಲಿದೆ ಎಂಬುದಕ್ಕೆ ಅಲ್ಲಿನ ಪರಿ ಸ್ಥಿತಿಯೇ ಸಾಕ್ಷಿ ಹೇಳುತ್ತಿದೆ.

Translate »