ಕುಶಾಲನಗರ ಬಳಿ ವೈದ್ಯರ ಹತ್ಯೆ
ಮೈಸೂರು

ಕುಶಾಲನಗರ ಬಳಿ ವೈದ್ಯರ ಹತ್ಯೆ

December 10, 2018

ಬೈಲಕುಪ್ಪೆ: ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಖಾಸಗಿ ವೈದ್ಯ ರೊಬ್ಬರನ್ನು ಬೈಲು ಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪದಲ್ಲಿ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಬಾಸನ್‍ಖಾನ್ ಗ್ರಾಮದವರಾಗಿದ್ದು, ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಾ ಕೊಪ್ಪ ಗ್ರಾಮದ ಬಿ.ಎಂ. ರಸ್ತೆಯ ಮನೆ ಯೊಂದರಲ್ಲಿ ವಾಸವಾಗಿದ್ದ ಡಾ. ದಿಲೀಪ್ (56) ಹತ್ಯೆಗೊಳಗಾದವರು. ಇವರು ಶನಿವಾರ ಸಂಜೆ ಕುಶಾಲನಗರದಲ್ಲಿ ಕ್ಲಿನಿಕ್ ಕೆಲಸ ಮುಗಿಸಿಕೊಂಡು ಕೊಪ್ಪದ ಮನೆಗೆ ಆಗಮಿಸಿದ್ದರು. ಇಂದು ಬೆಳಿಗ್ಗೆ ಅಕ್ಕಪಕ್ಕದ ನಿವಾಸಿಗಳು ಗಮನಿಸಿ ದಾಗ ಇವರ ಹತ್ಯೆ ಆಗಿರುವುದು ಬೆಳಕಿಗೆ ಬಂದಿದೆ. ಡಾ. ದಿಲೀಪ್ ಅವರ ಕೈಗಳನ್ನು ಹಿಂದಕ್ಕೆ ತಿರುಗಿಸಿ ಕಟ್ಟಲಾಗಿದ್ದು, ಬಾಯಿ ಮತ್ತು ಕಾಲುಗಳಿಗೆ ಸೆಲ್ಯೂಷನ್ ಟೇಪ್ ಸುತ್ತಲಾಗಿತ್ತು.

ಮೃತದೇಹದ ಸುತ್ತ ಖಾರದ ಪುಡಿ ಎರಚಲಾಗಿತ್ತು. ದುಷ್ಕರ್ಮಿಗಳು ಡಾ. ದಿಲೀಪ್ ಅವರನ್ನು ಹತ್ಯೆ ಮಾಡಿದ ನಂತರ ಶ್ವಾನ ದಳಕ್ಕೆ ವಾಸನೆ ಸಿಗಬಾರದು ಎಂಬ ಕಾರಣಕ್ಕಾಗಿ ಮೃತದೇಹದ ಸುತ್ತ ಖಾರದಪುಡಿ ಎರಚಿದ್ದಾರೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್‍ಪಿ ಭಾಸ್ಕರ್ ರೈ, ವೃತ್ತ ನಿರೀಕ್ಷಕ ಪ್ರದೀಪ್, ಸಬ್ ಇನ್ಸ್‍ಪೆಕ್ಟರ್‍ಗಳಾದ ಲೋಕೇಶ್, ಗಣೇಶ್, ಸವಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಯಿತು. ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯ ವಿಷಯ ತಿಳಿಯುತ್ತಿದ್ದಂತೆಯೇ ಜಿಪಂ ಸದಸ್ಯ ವಿ.ರಾಜೇಂದ್ರ, ಕೊಡಗು ಜಿಪಂ ಸದಸ್ಯೆ ಚಂದ್ರಕಲಾ, ಪರಿಸರವಾದಿ ಬಸವೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಯ್ಯ, ತಾಪಂ ಮಾಜಿ ಸದಸ್ಯ ಸೋಮಶೇಖರ್ ಮತ್ತಿತರರು ಸ್ಥಳಕ್ಕೆ ಆಗಮಿಸಿದ್ದರು.

Translate »