ಬತ್ತಿದ ಕಾರಂಜಿಕೆರೆ: ದೋಣಿ ವಿಹಾರ ಸ್ಥಗಿತ
ಮೈಸೂರು

ಬತ್ತಿದ ಕಾರಂಜಿಕೆರೆ: ದೋಣಿ ವಿಹಾರ ಸ್ಥಗಿತ

February 14, 2019

ಮೈಸೂರು: ನೀರಿನ ಪ್ರಮಾಣ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಮೈಸೂರಿನ ಕಾರಂಜಿಕೆರೆ ಯಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ವಲಸೆ ಪಕ್ಷಿಗಳ ಸಂತಾನಾಭಿವೃದ್ಧಿ ಸಂದರ್ಭದಲ್ಲಿಯೇ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿ ಕೆರೆಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡಿ, ದೋಣಿ ವಿಹಾರ ಮಾಡಿ ಸಂಭ್ರಮಿಸುತ್ತಿದ್ದರು. ಕಳೆದ ಸಾಲಿನಲ್ಲಿ ವಾಡಿಕೆ ಮಳೆ ಬಾರದೆ ಕಾರಂಜಿಕೆರೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ನೀರು ಸಂಗ್ರಹವಾಗಿತ್ತು. ರಾಜಕಾಲುವೆ ಒತ್ತುವರಿ ಯಾಗಿರುವುದರಿಂದ ಚಾಮುಂಡಿಬೆಟ್ಟದಿಂದ ಮಳೆ ನೀರು ಸರಾಗವಾಗಿ ಕಾರಂಜಿಕೆರೆಗೆ ಹರಿದು ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆರೆ ನೀರು ಬತ್ತಿ ಹೋಗಿದ್ದು, ದೋಣಿ ವಿಹಾರ ಅಸಾಧ್ಯವಾಗಿದೆ. ದೋಣಿ ವಿಹಾರ ಟೆಂಡರ್ ಪಡೆದಿರುವ ಸಂಸ್ಥೆಯವರು ಕೆರೆ ನೀರಿನ ಪ್ರಮಾಣ ಗಮನಿಸಿ ಮೃಗಾಲ ಯದ ಅಧಿಕಾರಿಗಳಿಗೆ ದೋಣಿ ವಿಹಾರ ಸ್ಥಗಿತಗೊಳಿಸುವು ದಾಗಿ ತಿಳಿಸಿದ್ದಾರೆ. ಕೆರೆಯಲ್ಲಿ ಕೆಲವೆಡೆ ಎರಡು ಅಡಿ ನೀರಷ್ಟೇ ಇರುವುದರಿಂದ ದೋಣಿ ನೆಲಕ್ಕೆ ಬಡಿದು ಮಗುಚುವ ಸಾಧ್ಯತೆಯಿದೆ ಎಂದಿದ್ದಾರೆ. ಗುತ್ತಿಗೆದಾರರ ಅಭಿಪ್ರಾಯಕ್ಕೆ ಮೃಗಾಲಯದ ಅಧಿಕಾರಿಗಳು ಸಮ್ಮತಿಸಿದ್ದಾರೆ.

ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಾರಂಜಿಕೆರೆ ದೋಣಿ ವಿಹಾರ ಗುತ್ತಿಗೆದಾರರು ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದರಿಂದ ದೋಣಿ ವಿಹಾರ ಅಸಾಧ್ಯ ಎಂದಿ ದ್ದಾರೆ. ಈ ತಿಂಗಳ ಮೊದಲ ವಾರದವರೆಗೂ ದೋಣಿ ವಿಹಾರ ನಡೆದಿದೆ ಎಂದರು. ವಲಸೆ ಪಕ್ಷಿಗಳಿಗೆ ಹಾಗೂ ಕಾರಂಜಿಕೆರೆಯಲ್ಲಿಯೇ ಇರುವ ಪಕ್ಷಿಗಳಿಗೆ ನೀರಿನ ತೊಂದರೆ ಯಾಗುವುದಿಲ್ಲ. ಪ್ರಸ್ತುತ ಕೆರೆಯಲ್ಲಿರುವ ನೀರು ಪಕ್ಷಿಗಳಿಗೆ ಸಾಕಾಗಲಿದೆ. ಮಾರ್ಚ್ ನಂತರ ಮಳೆಗಾಲ ಆರಂಭವಾಗಿ ಕೆರೆಗೆ ನೀರು ಹರಿದು ಬರಲಿದೆ ಎಂದು ಸ್ಪಷ್ಟಪಡಿಸಿದರು.

Translate »