ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ, ಕಲ್ಲು ತೂರಾಟ
ಮೈಸೂರು, ಹಾಸನ

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ, ಕಲ್ಲು ತೂರಾಟ

February 14, 2019

ಹಾಸನ: ಆಪರೇಷನ್ ಕಮಲದ ಸುಮಾರು 82 ನಿಮಿಷಗಳ ಆಡಿಯೋ ಸುದ್ದಿವಾಹಿನಿಗಳಲ್ಲಿ ಇಂದು ಪ್ರಸಾರವಾಗು ತ್ತಿದ್ದಂತೆಯೇ ಹಾಸನದಲ್ಲಿ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಯಿತು. ಸ್ಥಳೀಯ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಮನೆ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ವಿವರ: ಗುರು ಮಿಟ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಜೊತೆ ಆಪರೇಷನ್ ಕಮಲ ಡೀಲಿಂಗ್ ನಡೆಸಿದ ವೇಳೆ ರೆಕಾರ್ಡ್ ಮಾಡಲಾದ 82 ನಿಮಿಷಗಳ ಆಡಿಯೋ ಇಂದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಯಿತು.

`ಹೆಚ್.ಡಿ. ದೇವೇಗೌಡರ ವಿಕೆಟ್ ಹೋಗುತ್ತೆ. ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇವರು ಹೋದರೆ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳು ತ್ತದೆ’ ಎಂದು ಹೇಳಿರುವ ಮಾತುಗಳು ಪ್ರಸಾರ ವಾಗುತ್ತಿದ್ದಂತೆಯೇ ಅದು ಶಾಸಕ ಪ್ರೀತಂ ಗೌಡ ಅವರ ಧ್ವನಿ ಎಂದು ಗ್ರಹಿಸಿದ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದರು.

ಹಾಸನದ ವಿದ್ಯಾನಗರ ಸಮೀಪದ ಗೌರಿಕೊಪ್ಪಲಿನಲ್ಲಿರುವ ಶಾಸಕ ಪ್ರೀತಂ ಜೆ.ಗೌಡ ಮನೆ ಮುಂದೆ ಜಮಾಯಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಬಿಜೆಪಿ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.

ಈ ವೇಳೆ ಬಿಜೆಪಿ ಕಾರ್ಯಕರ್ತರೂ ಕೂಡ ಸ್ಥಳಕ್ಕೆ ಆಗಮಿಸಿದ ಪರಿಣಾಮ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತ ತಲುಪಿತ್ತು. ಅದೇ ವೇಳೆ ಜೆಡಿಎಸ್ ಕಾರ್ಯಕರ್ತರು ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ಬಿಜೆಪಿ ಕಾರ್ಯಕರ್ತ ರಾಹುಲ್ ಎಂಬಾತ ಕಲ್ಲೇಟಿನಿಂದ ಗಾಯ ಗೊಂಡಿದ್ದಾನೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಠಾತ್ತನೆ ನಡೆದ ಬೆಳವಣಿಗೆಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೂ ಪೊಲೀಸರು ಜೆಡಿಎಸ್ ಕಾರ್ಯಕರ್ತರನ್ನು ಸಮಾಧಾನಪಡಿಸಿ ಚದುರಿಸುವಲ್ಲಿ ಯಶಸ್ವಿಯಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್‍ಗೌಡ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಶಾಸಕರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅದೇ ವೇಳೆ ಶಾಸಕರ ಮನೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸಿ ಮನೆಯಲ್ಲಿರುವ ಶಾಸಕರ ತಾಯಿಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೇ ಜೆಡಿಎಸ್ ವಿರುದ್ಧ ಗುರುವಾರ ಪ್ರತಿಭಟನೆ ನಡೆಸುವ ಬಗ್ಗೆಯೂ ಕೂಡ ಚರ್ಚೆ ನಡೆಸುತ್ತಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ಹೆಚ್.ಎಲ್.ಅನಿಲ್ ಕುಮಾರ್, ಜಿಪಂ ಸದಸ್ಯ ಸ್ವರೂಪ್, ಜೆಡಿಎಸ್ ಮುಖಂಡರಾದ ಎಸ್.ದ್ಯಾವೇಗೌಡ, ಗಿರೀಶ್, ಚನ್ನವೀರಪ್ಪ, ಕಮಲ್ ಕುಮಾರ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಯೋಗಾರಮೇಶ್ ಹಾಗೂ ಮುಖಂಡರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಲ್ಲೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ಆರೋಗ್ಯ ವಿಚಾರಿಸಿದ್ದಲ್ಲದೇ, ಘಟನೆಯ ಬಗ್ಗೆ ವಿವರ ಪಡೆದರು.

Translate »