ವಿಧಾನ ಮಂಡಲ ಅಧಿವೇಶನ ಮತ್ತೆ ಮುಂದೂಡಿಕೆ
ಮೈಸೂರು

ವಿಧಾನ ಮಂಡಲ ಅಧಿವೇಶನ ಮತ್ತೆ ಮುಂದೂಡಿಕೆ

February 14, 2019

ಬೆಂಗಳೂರು: ಧ್ವನಿ ಸುರುಳಿ ವಿವಾದ ವಿಧಾನಸಭೆಯ ಮೂರನೇ ದಿನದ ಕಲಾಪವನ್ನೂ ನುಂಗಿ ಹಾಕಿತು. ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ನಡೆಸಿದ ಸಂಧಾನ ಸಭೆ ವಿಫಲಗೊಂಡ ನಂತರ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ನಡೆ ವಿರೋಧಿಸಿ ಧರಣಿ ನಡೆಸಿದರು. ಸರ್ಕಾರದ ವಿರುದ್ಧದ ಘೋಷಣೆ ನಡುವೆಯೇ ನಾಲ್ಕು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಮಸೂದೆ ಸೇರಿದಂತೆ ಕೆಲವು ತಿದ್ದುಪಡಿ ಕಾಯಿದೆಗಳಿಗೆ ಅಂಗೀಕಾರ ಪಡೆದುಕೊಂಡಿತು. ಸಭಾಧ್ಯಕ್ಷರು, ಗೊಂದಲ ತಿಳಿಗೊಳಿಸಲು ನಡೆಸಿದ ಪ್ರಯತ್ನ ವಿಫಲವಾದ ನಂತರ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಸದನ ಸಮಾವೇಶಗೊಳ್ಳುತ್ತಿದ್ದಂತೆ ಧರಣಿ ಮುಂದುವರಿಸಿದ ಬಿಜೆಪಿ ಸದಸ್ಯರು ಇದೇ ವೇಳೆ ಹಾಸನದಲ್ಲಿ ತಮ್ಮ ಪಕ್ಷದ ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದಕ್ಕೆ ಆ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಈ ಘಟನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚೋದನೆ ಕಾರಣ, ಆ ಪಕ್ಷದ ಕಾರ್ಯ ಕರ್ತರು ಗೂಂಡಾಗಿರಿ ನಡೆಸಿದ್ದಾರೆ ಎಂದು ದೂರುತ್ತಿದ್ದಂತೆ ಆಡಳಿತ ಪಕ್ಷದ ಸಚಿವರು, ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಜೆಡಿಎಸ್ ಸದಸ್ಯರು, ಬಿಜೆಪಿ ಸದಸ್ಯರ ಮೇಲೆರಗಿ ಬಿದ್ದಿದ್ದಲ್ಲದೆ, ಭಾರೀ ವಾಗ್ವಾದ ನಡೆದಿದ್ದರಿಂದ ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಮೌನವಾಗಿ ಇದನ್ನು ವೀಕ್ಷಿಸುತ್ತಿದ್ದ ಸಭಾಧ್ಯಕ್ಷರು ಸದನವನ್ನು ನಾಳೆಗೆ ಮುಂದೂಡಿರುವುದಾಗಿ ಘೋಷಿಸಿ ಹೊರನಡೆದರು.

 

Translate »