ಬತ್ತಿದ ಕಾರಂಜಿಕೆರೆಗೆ ಶುದ್ಧೀಕರಿಸಿದ ಒಳಚರಂಡಿ ನೀರು
ಮೈಸೂರು

ಬತ್ತಿದ ಕಾರಂಜಿಕೆರೆಗೆ ಶುದ್ಧೀಕರಿಸಿದ ಒಳಚರಂಡಿ ನೀರು

February 21, 2019

ಮೈಸೂರು: ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿಕೆರೆ ಮಳೆ ಕೊರತೆ ಹಾಗೂ ಬೇಸಿಗೆಯಿಂದ ಬತ್ತಿ ಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರ, ವಿದ್ಯಾರಣ್ಯ ಪುರಂನಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿ ಸುವ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ಕಳೆದ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕಾರಂಜಿಕೆರೆಯಲ್ಲಿ ಕಡಿಮೆ ನೀರು ಸಂಗ್ರಹ ವಾಗಿತ್ತು. ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಜನವರಿ ಯಿಂದಲೇ ಕಾರಂಜಿಕೆರೆಯಲ್ಲಿ ನೀರಿನ ಪ್ರಮಾಣ ಕುಸಿಯಲಾರಂಭಿಸಿತ್ತು. ಕೆರೆಯಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಫೆ.8 ರಿಂದ ದೋಣಿವಿಹಾರ ನಿಷೇಧಿಸಲಾಗಿತ್ತು. ಮುಂದಿನ ದಿನಗಳಲ್ಲಿ ಕಾರಂಜಿಕೆರೆಗೆ ನೀರಿನ ಕೊರತೆ ಉಂಟಾಗ ದಂತೆ ಮಾಡಲು ವಿದ್ಯಾರಣ್ಯಪುರಂನಲ್ಲಿರುವ ಒಳ ಚರಂಡಿ ನೀರು ಶುದ್ಧೀಕರಣ ಘಟಕದಿಂದ ನೀರನ್ನು ಹರಿಸಲು ಯೋಜನೆ ರೂಪಿಸಲಾಗುತ್ತಿದೆ.

ಪಾಲಿಕೆ ಸಮ್ಮತಿ: ಈ ಘಟಕದಿಂದ ಈಗಾಗಲೇ ರೇಸ್‍ಕೋರ್ಸ್, ಗಾಲ್ಫ್ ಕ್ಲಬ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಶುದ್ಧೀಕರಿಸಿದ ನೀರನ್ನು ಲಾನ್ ಹಾಗೂ ಗಿಡಮರಗಳಿಗೆ ನೀರುಣಿಸಲು ಸರಬರಾಜು ಮಾಡ ಲಾಗುತ್ತಿದೆ. ಈ ಹಿಂದೆ ಲಿಂಗಾಂಬುಧಿ ಕೆರೆಗೂ ನೀರನ್ನು ಪೂರೈಸಲಾಗಿತ್ತು. ಇದನ್ನು ಮನಗಂಡು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮಿತ್ ಎಂ.ಕುಲಕರ್ಣಿ ಈ ಘಟಕದಿಂದ ಕಾರಂಜಿಕೆರೆಗೆ ನೀರು ಸರಬರಾಜು ಮಾಡುವಂತೆ ಕೋರಿದ್ದಾರೆ. ಇದಕ್ಕೆ ಮೈಸೂರು ನಗರ ಪಾಲಿಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಪ್ರಮಾಣದಷ್ಟು ನೀರನ್ನು ಸರಬರಾಜು ಮಾಡುವುದಾಗಿ ಭರವಸೆ ನೀಡಿದೆ.

ವಿದ್ಯಾರಣ್ಯಪುರಂನಲ್ಲಿನ ನೀರು ಶುದ್ಧೀಕರಣ ಘಟಕದಿಂದ ಚಾಮುಂಡಿಬೆಟ್ಟದ ಪಾದದವರೆಗೂ 5 ಕಿ.ಮೀ ದೂರ ಪೈಪ್‍ಲೈನ್ ಅಳವಡಿಸಲಾ ಗುತ್ತದೆ. ಅಧಿಕ ಸಾಮಥ್ರ್ಯದ ಮೋಟಾರ್ ಪಂಪ್ ಅಳವಡಿಸಿ ನೀರನ್ನು ಸರಬರಾಜು ಮಾಡಲಾಗುತ್ತದೆ. ರೇಸ್‍ಕೋರ್ಸ್ ಹಿಂಭಾಗದಲ್ಲಿ ಬೆಟ್ಟದ ತಪ್ಪಲಿನಿಂದ ಕಾರಂಜಿಕೆರೆಗೆ ಬರುವ ರಾಜಕಾಲುವೆಗೆ ಪೈಪ್‍ಲೈನ್ ಸಂಪರ್ಕ ನೀಡಲಾಗುತ್ತದೆ. ಅಲ್ಲಿಂದ ನೀರು ಕಾರಂಜಿಕೆರೆಗೆ ಹರಿದು ಬರಲಿದೆ.

ತೊಂದರೆಯಾಗದಂತೆ ಕ್ರಮ: ಶುದ್ಧೀಕರಣಗೊಂಡ ನೀರಿನಿಂದ ಪಕ್ಷಿ ಹಾಗೂ ಜಲಚರಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶುದ್ಧೀಕರಣಗೊಂಡ ನೀರಿನ ಸ್ಯಾಂಪಲ್ ಕಳುಹಿಸಲಾಗಿದೆ. ಇನ್ನೆರಡು ದಿನದಲ್ಲಿ ಶುದ್ಧೀಕರಣಗೊಂಡ ನೀರಿನಲ್ಲಿ ಪಕ್ಷಿ ಮತ್ತು ಜಲಚರಗಳಿಗೆ ಮಾರಕವಾದ ಅಂಶ ಇದೆಯಾ ಅಥವಾ ಆ ನೀರನ್ನು ಕೆರೆಗೆ ತುಂಬಿಸಲು ಯೋಗ್ಯವಾಗಿದೆಯಾ ಎಂಬ ವರದಿಯನ್ನು ಮಂಡಳಿ ನೀಡಲಿದೆ. ನೀರು ಬಳಕೆಗೆ ಯೋಗ್ಯ ಎಂದಾದರೆ ಮೃಗಾಲಯದ ವತಿಯಿಂದಲೇ ಪೈಪ್‍ಲೈನ್ ನಿರ್ಮಾಣ, ನೀರೆತ್ತುವ ಮೋಟಾರ್ ಅಳವಡಿಕೆ ಕಾರ್ಯ ನಡೆಸಲಾಗುತ್ತದೆ. ಈ ಯೋಜನೆಗೆ ಅಂದಾಜು 2 ರಿಂದ 2.50 ಕೋಟಿ ರೂ. ವೆಚ್ಚವಾಗಲಿದೆ. ಇದರಿಂದ ಬೇಸಿಗೆ ವೇಳೆಯೂ ಕಾರಂಜಿಕೆರೆ ಬತ್ತಿ ಹೋಗದಂತೆ ನೋಡಿಕೊಂಡಂತಾಗುತ್ತದೆ.

ಹೂಳೆತ್ತಬಾರದು: ಕೆರೆ ಬತ್ತಿ ಹೋದರೆ ಹೂಳೆತ್ತುವಂತೆ ಕೆಲವರು ಆಗ್ರಹಿಸುವುದು ಸಾಮಾನ್ಯ. ಹೂಳೆತ್ತಿದರೆ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾ ಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತದೆ. ಆದರೆ ಪ್ರಕೃತಿ ನಿಯಮದಂತೆ ಕೆರೆಗಳು ಬೇಸಿಗೆಯಲ್ಲಿ ಬರಿದಾಗಿ, ಮಳೆಗಾಲದಲ್ಲಿ ತುಂಬಿದರೆ ಮಾತ್ರ ಉತ್ತಮ ವಾತಾವರÀಣವನ್ನು ಕಾಪಾಡಿಕೊಳ್ಳಬಹುದು. ಅದರಲ್ಲಿಯೂ ಕಾರಂಜಿಕೆರೆಯಲ್ಲಿ ಹೂಳೆತ್ತಬಾರದು. ದ್ವೀಪ ಇರುವ ಸ್ಥಳದ ಬಳಿ ಹಾಗೂ ಆಯ್ದ ಕೆಲ ಸ್ಥಳಗಳಲ್ಲಿ ಮಾತ್ರ ಹೂಳೆತ್ತೆಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೂಳೆತ್ತಲು ಮೃಗಾಲಯದ ಅಧಿಕಾರಿಗಳು ನಿರಾಕರಿಸಿದ್ದು, ಕೆರೆ ವಾತಾವರಣವನ್ನು ಕಾಪಾಡಿ ಕೊಳ್ಳಲು ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ಶುದ್ಧೀಕರಿಸಿರುವ ನೀರನ್ನು ಜಲಚರಗಳಿಗೆ ಮತ್ತಷ್ಟು ಪೂರಕವಾಗಿಸಲು ರಾಜಕಾಲುವೆಯಲ್ಲಿ ಪಾಚಿ ಸೇರಿದಂತೆ ಕೆಲವು ಗಿಡಗಳನ್ನು ನಡೆಲಾಗುತ್ತದೆ. ಈ ಗಿಡಗಳು ನೀರಿನಲ್ಲಿ ವಿಷಕಾರಿ ಅಂಶಯಿದ್ದರೆ, ಅದನ್ನು ಹೀರಿಕೊಂಡು ನೀರನ್ನು ಶುದ್ಧಿ ಮಾಡುತ್ತವೆ. ಅಲ್ಲದೆ, ನೀರು ಹರಿದುಕೊಂಡು ಬರುವುದರಿಂದ ಮಣ್ಣಿನಲ್ಲಿರುವ ಉತ್ತಮ ಅಂಶ ನೀರಿಗೆ ಬೆರೆಯುತ್ತದೆ. ಸೂರ್ಯನ ಕಿರಣ ನೀರಿಗೆ ಬೀಳುವುದರಿಂದ ನೀರು ಇನ್ನಷ್ಟು ಶುದ್ಧವಾಗುತ್ತದೆ. ಅಲ್ಲದೆ ನೀರಿ ನಲ್ಲಿ ಆಮ್ಲಜನಕದ ಪ್ರಮಾಣವನ್ನು ಗಿಡಗಳು ಹೆಚ್ಚಿಸುತ್ತವೆ. ಈ ಎಲ್ಲಾ ಅಂಶವನ್ನು ಮನಗಂಡು ಮೃಗಾಲಯದ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

 

Translate »