ಶಾಸಕ ಆನಂದ ಸಿಂಗ್ ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಬಂಧನ
ಮೈಸೂರು

ಶಾಸಕ ಆನಂದ ಸಿಂಗ್ ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಬಂಧನ

February 21, 2019

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಬಿಜೆಪಿ ಆಡಳಿತವಿರುವ ಮಹಾ ರಾಷ್ಟ್ರ, ಗುಜರಾತ್ ರಾಜ್ಯಗಳಲ್ಲೇ ತಲೆ ಮರೆಸಿಕೊಂಡಿದ್ದ ಗಣೇಶ್ ಅವರನ್ನು ನಿನ್ನೆ ಬಿಡದಿ ಪೊಲೀಸರು ಅಹಮದಾ ಬಾದ್ ಹೊರವಲಯದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬಹುತೇಕ ಬುಧ ವಾರ ತಡರಾತ್ರಿ ಇಲ್ಲ ಗುರುವಾರ ಮುಂಜಾನೆ ವಿಶೇಷ ವಿಮಾನದಲ್ಲಿ ನಗರಕ್ಕೆ ಕರೆತರುತ್ತಿದ್ದು, ನಾಳೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನಂತರ ತಮ್ಮ ವಶಕ್ಕೆ ಪೊಲೀಸರು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆಪರೇಷನ್ ಕಮಲಕ್ಕೆ ಹೆದರಿ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಬಿಡದಿ ಸಮೀಪವಿರುವ ಈಗಲ್ ಟನ್ ರೆಸಾರ್ಟ್‍ನಲ್ಲಿ ಹಿಡಿದಿಟ್ಟಿದ್ದರು. ಜನವರಿ-20ರ ರಾತ್ರಿ ಗಣೇಶ್, ತನಗೆ ಅನ್ಯಾಯವಾಗಿದೆ ಎಂದು ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಗಣೇಶ್‍ನಿಂದ ಹಲ್ಲೆಗೊಳಗಾದ ಆನಂದ್ ಸಿಂಗ್ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಬೇಕಾಯಿತು. ಹಲ್ಲೆ ಬಗ್ಗೆ ಆನಂದ್‍ಸಿಂಗ್ ಕುಟುಂಬದವರು ಎರಡು ದಿನಗಳ ನಂತರ ನೀಡಿದ ದೂರನ್ನು ಆಧರಿಸಿ ಬಿಡದಿ ಪೊಲೀಸರು ಗಣೇಶ್ ವಿರುದ್ಧ ಕ್ರಮಕ್ಕೆ ಮುಂದಾದರು. ಇದರ ಸುಳಿವರಿತ ಗಣೇಶ್ ಜನವರಿ 23ರಿಂದ ನಾಪತ್ತೆಯಾಗಿದ್ದ. ಗಣೇಶ್ ಶೋಧಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ತಂಡ ರಾಷ್ಟ್ರದ ವಿವಿಧೆಡೆ ತಡಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಆಪರೇಷನ್ ಕಮಲಕ್ಕೆ ಸಿಲುಕಿ ಮುಂಬೈ ಪಂಚತಾರಾ ಹೋಟೆಲ್‍ನಲ್ಲಿ ವಾಸವಿದ್ದ ಕೆಲವು ಕಾಂಗ್ರೆಸ್ ಶಾಸಕರ ಜೊತೆ ಗಣೇಶ್ ತಂಗಿದ್ದನೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಶಾಸಕರು ತಂಗಿದ್ದ ಹೋಟೆಲ್‍ಗೆ ಸ್ಥಳೀಯ ಗೂಂಡಾಗಳು ಹಾಗೂ ಪೊಲೀಸರ ರಕ್ಷಣೆ ಇತ್ತು. ಅಲ್ಲಿಯ ಸರ್ಕಾರದ ಅನುಮತಿ ಇಲ್ಲದೆ ಆ ಹೋಟೆಲ್‍ಗೆ ಯಾರೂ ಪ್ರವೇಶ ಮಾಡಲು ಅನುಮತಿ ಇರಲಿಲ್ಲ.

ಧ್ವನಿ ಸುರಳಿ ಬಿಡುಗಡೆಗೊಂಡು ಆಪರೇಷನ್ ಕಮಲ ಏಕಾಏಕಿ ವಿಫಲವಾದ ನಂತರ ಮುಂಬೈನಲ್ಲಿದ್ದ ಶಾಸಕರು ಬರಿಗೈಯಲ್ಲಿ ರಾಜ್ಯಕ್ಕೆ ಹಿಂತಿರುಗಿದರು. ಇಲ್ಲಿಯೇ ವಾಸವಿದ್ದ ಗಣೇಶ್ ನಂತರ ತಮ್ಮ ನೆಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‍ಗೆ ವರ್ಗಾಯಿಸಿದರು. ಇದರ ಸುಳಿವರಿತ ವಿಶೇಷ ತಂಡ ನಿನ್ನೆ ಗಣೇಶ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆಪರೇಷನ್ ಕಮಲದಲ್ಲಿ ಗಣೇಶ್ ಕೂಡ ಮೊದಲ ಹತ್ತು ಶಾಸಕರ ಪಟ್ಟಿಯಲ್ಲಿಯೇ ಇದ್ದರು ಆದರೆ ಅವರು ಮಾತ್ರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಂಪರ್ಕವನ್ನಿಟ್ಟುಕೊಂಡು ಬಂದು-ಹೋಗುವ ನಾಟಕವಾಡುತ್ತಿದ್ದರು.

Translate »