ಬೇಲೂರು ಪುರಸಭೆ ವಿಶೇಷ ಸಭೆ: ಅಧ್ಯಕ್ಷರು, ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಕಿಡಿ
ಹಾಸನ

ಬೇಲೂರು ಪುರಸಭೆ ವಿಶೇಷ ಸಭೆ: ಅಧ್ಯಕ್ಷರು, ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಕಿಡಿ

December 15, 2018

ಬೇಲೂರು: ಬೇಲೂರು ಪುರಸಭೆಯಲ್ಲಿನ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕೆಲ ಪಟ್ಟಭದ್ರ ಸದಸ್ಯರ ಹಿತಕ್ಕಾಗಿ ಪುರಸಭೆಯನ್ನು ದಿವಾಳಿ ಮಾಡಿದ್ದಾರೆ, ಕಾಂಗ್ರೆಸ್ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ, ಬಸ್ ನಿಲ್ದಾಣ ಮುಂಭಾಗದ 22 ಮಳಿಗೆ ಹರಾಜು ಪ್ರಕ್ರಿಯೆ ವಿಳಂಬದ ಹಿಂದೆ ಅನುಮಾನದ ಹುತ್ತ ಬೆಳೆದಿದೆ, ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ಮೌನ ವಹಿಸದೆ ತಕ್ಷಣವೇ ಪುರಸಭೆ ಆಡಳಿವನ್ನು ಸೂಪರ್ ಸೀಡ್ ಮಾಡಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಸಭೆ ನಡೆಯುವ ಬಾವಿಗೆ ಇಳಿದು ಧರಣಿ ನಡೆಸಿದಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ಬೇಲೂರು ಪುರಸಭೆಯಲ್ಲಿ ನಡೆದಿದೆ.

ಪಟ್ಟಣದ ಪುರಸಭಾ ವೇಲಾಪುರಿ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಡಿ.ಆರ್.ಭಾರತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಷಯಗಳ ಪ್ರಸ್ತಾಪಕ್ಕೂ ಮುನ್ನವೇ ಕಾಂಗ್ರೆಸ್ ಸದಸ್ಯರಾದ ಬಿ.ಎಲ್.ಧರ್ಮೇಗೌಡ, ಸತೀಶ್,ಜುಬೇರ್ ಆಹಮದ್ ಅಧ್ಯಕ್ಷರು ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಯಗಚಿ ಸೇತುವೆ ಬಳಿ ಮೀನು ಮಾರಾಟದ ಮಳಿಗೆಯ ಮರು ಹರಾಜು ನಡೆಸಲು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯದೆ, ಕೆಲ ಸದಸ್ಯರ ಕುಮ್ಮಕಿನಿಂದ ಹರಾಜು ನಡೆಸಿದ್ದಾರೆ, ನಾವುಗಳು ವಿರೋಧ ಮಾಡಿರುವ ಅರ್ಜಿ ಯನ್ನು ಪುರಸಭೆಗೆ ಸಲ್ಲಿಸಲಾಗಿದೆ ಎಂದು ಪತ್ರವನ್ನು ಪ್ರದರ್ಶನ ಮಾಡಿದ ಅವರು ಇತ್ತೀಚಿನ ದಿನದಲ್ಲಿ ಪುರಸಭೆ ಆಡಳಿತ ತೀವ್ರ ಕುಸಿತ ಕಂಡಿದೆ, ಬಸ್‍ನಿಲ್ದಾಣದ ಮುಂಭಾಗದ 22 ಮಳಿಗೆಗಳಿಗೆ ಹರಾಜು ನಡೆಸಲು ಪುರಸಭೆ ನ್ಯಾಯಾಲಯದ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ, ಅಲ್ಲದೆ 22 ಮಳಿಗೆದಾರರಿಂದ ತಲಾ ರೂ 10 ಸಾವಿರ ಹಣ ಪಡೆದಿ ರುವ ಬಗ್ಗೆ ಸಾಕ್ಷಿ ಸಮೇತ ಬಹಿರಂಗ ಪಡೆಸಲು ನಾವುಗಳು ಸಿದ್ದವೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಳಿಕ ಅಧ್ಯಕ್ಷರ ಪೀಠದ ಬಳಿ ಆಗಮಿಸಿದ ಸದಸ್ಯ ಸತೀಶ್ ಧರಣಿ ಕುಳಿತರು, ಈ ಸಂದರ್ಭದಲ್ಲಿ ಅಧ್ಯಕ್ಷೆ ಡಿ.ಆರ್.ಭಾರತಿ ಹಾಗೂ ಮುಖ್ಯಾಧಿಕಾರಿ ಮಂಜುನಾಥ್ ಪುರಸಭೆಯ ಸಿಬ್ಬಂದಿ ಯಿಂದ ಧರಣಿ ನಿರತ ಸದಸ್ಯರನ್ನು ಆಚೆ ಕಳಿಸಲು ಯತ್ನಿಸಿದ ಸಂದರ್ಭದಲ್ಲಿ ಸದಸ್ಯ ಸತೀಶ್ ಅವರಿಗೆ ಸದಸ್ಯರಾದ ಮಂಜುನಾಥ್, ಜುಬೇರ್ ಅಹಮದ್, ಬಿ.ಎಲ್.ಧರ್ಮೇಗೌಡ ಪೂರ್ಣ ಬೆಂಬಲ ನೀಡಿ, ‘ನಿಮಗೆ ತಾಕತ್ತು ಇದ್ದರೆ’ ಆಚೆ ಕಳಿಸಿ ನೀವು ಮಾಡಿರುವ ಹಗರಣಗಳ ಸರಮಾಲೆ ನಮ್ಮ ಬಳಿ ದಾಖಲೆ ಸಹಿತ ಇದೆ, ಅಧ್ಯಕ್ಷರು ಸರ್ವಾಧಿಕಾರಿ ದೋರಣೆಯನ್ನು ಅನುಸರಣೆ ಮಾಡಿದ್ದಾರೆ, ಮೊದಲು ಸದಸ್ಯರಿಗೆ ಗೌರವ ನೀಡುವ ಸಂಸ್ಕøತಿ ಬೆಳೆಸಿಕೊಳ್ಳಿ, ನಾವುಗಳು ಜನರಿಂದ ಚುನಾಯಿತರಾಗಿ ಪುರಸಭೆಗೆ ದನಕಾಯಲು ಬಂದಿಲ್ಲ, ನಿಮ್ಮ ಭ್ರಷ್ಟಾಚಾರದ ಬಗ್ಗೆ ಹೇಳಿದರೆ ನಿಮಗೆ ಭಾರಿ ನೋವು ತರುತ್ತದೆ, ಏಕೆ? ಬೇಲೂರಿನ ಶಾಸಕರೇ ಪುರಸಭೆಯಲ್ಲಿ ಭ್ರಷ್ಟಾಚಾರವಿದೆ ಎಂಬ ಬಗ್ಗೆ ನಮಗೆ ದೂರು ಬಂದಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಸದಸ್ಯ ಜಬೇರ್ ಅಹಮದ್ ತೀವ್ರ ವಾಗ್ದಾಳಿ ನಡೆಸಿದರು. ಮಾತಿನ ಚಕಮಕಿ ನೆಡೆದ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅರುಣ್‍ಕುಮಾರ್ ಸೇರಿದಂತೆ ಸದಸ್ಯರಾದ ಧರ್ಮೇಗೌಡ, ಸತೀಶ್, ಪೈಂಟ್ ರವಿ, ಜುಬೇರ್, ಸಭೆ ಬಹಿಷ್ಕರಿಸಿ ಜಿಲ್ಲಾಧಿಕಾರಿ ಬಳಿ ದೂರು ನೀಡಲಿದ್ದೇವೆ ಎಂದು ಹೊರ ನಡೆದ ಘಟನೆ ಜರುಗಿತು.ಇದೇ ಸಂದರ್ಬದಲ್ಲಿ ಪುರಸಭೆಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಕೆಲ ಸದಸ್ಯರು ಪುರಸಭೆಯ ಕಾರ್ಯ ವೈಖರಿ ಧಿಕ್ಕಾರ ಬಗ್ಗೆ ಧಿಕ್ಕಾರ ಕೂಗುತ್ತಾ ಹೊರನಡೆದರು.

Translate »