ಬೇಲೂರು ಪುರಸಭೆ ವಿಶೇಷ ಸಭೆ; ಅಧ್ಯಕ್ಷರು, ಸದಸ್ಯರ ನಡುವೆ ಮಾತಿನ ಚಕಮಕಿ
ಹಾಸನ

ಬೇಲೂರು ಪುರಸಭೆ ವಿಶೇಷ ಸಭೆ; ಅಧ್ಯಕ್ಷರು, ಸದಸ್ಯರ ನಡುವೆ ಮಾತಿನ ಚಕಮಕಿ

June 23, 2018

ಬೇಲೂರು:  ಪುರಸಭೆಗೆ 100 ಹಾಗೂ ಶ್ರೀಚನ್ನ ಕೇಶವಸ್ವಾಮಿ ದೇಗುಲ 900 ವರ್ಷ ಪೂರೈಸಿರುವ ಹಿನ್ನೆಲೆ ಪುರಸಭೆ, ದೇವಾಲಯ ಆಡಳಿತ ಜಂಟಿಯಾಗಿ ಕಾರ್ಯಕ್ರಮ ರೂಪಿಸುವ ಕುರಿತು ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟ ಪರಿಣಾಮ ಅಂತಿಮವಾಗಿ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪುರಸಭೆಗೆ ನೂರು ವರ್ಷ ತುಂಬಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಕಾರ್ಯಕ್ರಮ ರೂಪಿಸಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸೋಣ ಎಂದು ಸದಸ್ಯ ಬಿ.ಗಿರೀಶ್ ವಿಷಯ ಪ್ರಸ್ತಾಪಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯ ಜಿ.ಶಾಂತ ಕುಮಾರ್ ಮಧ್ಯ ಪ್ರವೇಶಿಸಿ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ಮಾತನಾಡಿ ಅವರಿಂದ ವಿಶೇಷ ಅನುದಾನವನ್ನು ತಂದು ಆ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭವಾದ ಪುರಸಭೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಜುಲೈ ತಿಂಗಳಿನಲ್ಲಿ ಆಚರಿಸಬೇಕು ಹಾಗೂ ಅಂದಿನ ಹಿರಿಯ ಸದಸ್ಯರು ಹಾಗೂ ನಿವೃತ್ತ ಪೌರ ಕಾರ್ಮಿಕರನ್ನು ಸನ್ಮಾನಿಸೋಣ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಶ್ರೀನಿಧಿ, ಬೇಲೂರು ದೇವಾಲಯಕ್ಕೆ 900 ವರ್ಷ ಹಾಗೂ ಪುರಸಭೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಹಾಗೂ ಪುರಸಭೆಯಿಂದ ಜಂಟಿಯಾಗಿ ಎರಡು ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿತ್ತು. ಇದಕ್ಕೆ 30 ಲಕ್ಷ ರೂ. ಹಣ ಬೇಕಾಗುತ್ತದೆ. ಇದರಲ್ಲಿ 100 ವರ್ಷಗಳಿಂದ ಅಧ್ಯಕ್ಷ ಉಪಾಧ್ಯಕ್ಷ ರಾಗಿದ್ದವರ ಭಾವಚಿತ್ರಗಳೊಂದಿಗೆ ವಿಶೇಷ ಸಂಚಿಕೆ ಹೊರತರಬೇಕು. ಈ ಸಂಬಂಧ ದೇವಾಲಯ 15 ಲಕ್ಷ ರೂ. ಪುರಸಭೆಯಿಂದ 15 ಲಕ್ಷ ರೂ. ಭರಿಸಿ ಮುಖ್ಯಮಂತ್ರಿಗಳನ್ನು ಕರೆಸಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡೋಣ ಎನ್ನುತಿದ್ದಂತೆ ಸದಸ್ಯ ರವಿ ಅಣ್ಣೇಗೌಡ ಕಳೆದ ಕೆಲ ವರ್ಷಗಳಿಂದ ದೇವಾಲಯ ಆಡಳಿತ ಮಂಡಳಿ ಪುರಸಭೆಗೆ ನೀಡಬೇಕಾದ ಪಾರ್ಕಿಂಗ್ ಹಣವನ್ನೇ ಕೊಟ್ಟಿಲ್ಲ ಎಂದು ಗುಡುಗಿದರ ಲ್ಲದೆ, ಅವರೊಂದಿಗೆ ನಾವು ಕಾರ್ಯಕ್ರಮ ಮಾಡುವುದು ಬೇಡ. ಪ್ರತ್ಯೇಕವಾಗಿ ಪುರಸಭೆಯಿಂದಲೇ ಮಾಡೋಣ ಎಂದರು.

ಸದಸ್ಯ ಬಿ.ಗಿರಿಶ್ ಮದ್ಯೆ ಪ್ರವೇಶಿಸಿ, ದೇವಾಲಯ ಸಮಿತಿಯವರು ಪುರಸಭೆಯವರನ್ನು ಕೇವಲವಾಗಿ ನೋಡಿಕೊಂಡು ಪುರಸಭೆಗೆ ಕೊಡಬೇಕಾದ ಪಾರ್ಕಿಂಗ್ ಹಣವನ್ನೇ ಕೊಡುತ್ತಿಲ್ಲವೆಂದ ಮೇಲೆ ಅವರೊಂದಿಗೆ ಕಾರ್ಯಕ್ರಮ ಮಾಡುವುದು ಸರಿಯಲ್ಲ. ಅಲ್ಲದೆ ದೇವಾಲಯ ಸಮಿತಿಯವರು ಅವರ ಜಾಗದಲ್ಲಿ ಪಾರ್ಕಿಂಗ್ ಮಾಡದೇ ಅನಧಿಕೃತವಾಗಿ ದೇವಾಲಯದ ಮುಂಭಾಗದ ಲೋಕೋಪ ಯೋಗಿ ಹಾಗೂ ಪುರಸಭೆ ಜಾಗದಲ್ಲೇ ಪಾರ್ಕಿಂಗ್ ಮಾಡುತ್ತಿ ದ್ದಾರೆ. ಅಲ್ಲದೆ ಆ ಜಾಗವನ್ನು ಪುರಸಭೆಯಿಂದ ಸ್ವಚ್ಛತೆ ಮಾಡಲಾಗು ತ್ತಿದೆ. ಮೊದಲು ಸ್ವಚ್ಛತೆಯನ್ನು ನಿಲ್ಲಿಸಿ. ಹಣ ಕಟ್ಟಿದ ನಂತರ ನೋಡೋಣ. ಯಾವುದೇ ಕಾರಣಕ್ಕೂ ದೇವಾಲಯ ಆಡಳಿತದೊಂದಿಗೆ ಕಾರ್ಯಕ್ರಮ ಮಾಡೋದು ಬೇಡ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಸದಸ್ಯ ಶ್ರೀನಿಧಿ, ರವಿ ಅಣ್ಣೇಗೌಡ, ಗಿರೀಶ್ ಅವರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಯಾರೂ ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿ ಸಭೆ ಕೆಲಕಾಲ ಗೊಂದಲ ಏರ್ಪಟ್ಟಿತು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್, ಸದಸ್ಯರು ಸಮಾಧಾನವಾಗಿ ಗೌರವಯುತ ವಾಗಿ ಮಾತನಾಡಬೇಕು. ಸಲ್ಲದ ವಿಚಾರಕ್ಕೆ ಸಭೆಯಲ್ಲಿ ಸದಸ್ಯರು ಜಗಳ ಮಾಡಬಾರದು. ಸಭೆಗೆ ತಮ್ಮ ಅಭಿಪ್ರಾಯವಷ್ಟೇ ತಿಳಿಸಬೇಕು ಎಂದರೂ, ಸದಸ್ಯರು ಸುಮ್ಮನಾಗದಿದ್ದ ವೇಳೆ ಮುಖ್ಯಾಧಿಕಾರಿ ಮಂಜು ನಾಥ್ ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರ ಸಮಿತಿ ರಚಿಸಿ ಚರ್ಚಿಸಿ ತೀರ್ಮಾನಿಸೋಣ ಎಂದು ಸದಸ್ಯರ ಮಾತಿಗೆ ತೆರೆ ಎಳೆದರು.

ನಂತರ ಮಾತನಾಡಿದ ಸದಸ್ಯ ಶಾಂತಕುಮಾರ್, ಪಟ್ಟಣದ ರಸ್ತೆಗಳಲ್ಲಿ ಡಾಂಬರೀಕರಣ ಹಾಗೂ ಸಿಮೆಂಟ್ ರಸ್ತೆ ಮಾಡುವುದ ಕ್ಕಿಂತ ಮುಂಚೆ ನೀರಿನ ಪೈಪ್‍ಲೈನ್ ಸಂಪರ್ಕ ಆಗಬೇಕು. ಇಲ್ಲದಿದ್ದಲ್ಲಿ ರಸ್ತೆ ಅಗೆದು ಹಾಳಾಗಲಿದೆ. ಆದ್ದರಿಂದ ಪುರಸಭೆ ಯಿಂದ ಮೊದಲು 23 ವಾರ್ಡ್‍ಗಳಿಗೂ ಪೈಪ್‍ಲೈನ್ ಮಾಡಿ ನಲ್ಲಿಗಳ ಸಂಪರ್ಕ ಕೊಡಿ ಒತ್ತಾಯಿಸಿದರು.

ಉಪಾಧ್ಯಕ್ಷ ಕುಮಾರಸ್ವಾಮಿ, ನಮ್ಮ ವಾರ್ಡ್‍ಗೆ ಪುರಸಭೆ ನಿಧಿಯಿಂದ ಕಾಮಗಾರಿ ಕೈಗೆತ್ತುಕೊಂಡಿದ್ದಾರೆ ಅದನ್ನು ಅಧ್ಯಕ್ಷರು ಕೈಬಿಟ್ಟು ತಮಗೆ ಬೇಕಾದೆಡೆ ಕಾಮಗಾರಿ ಮಾಡಿಸಿಕೊಂಡು ನಮ್ಮ ವಾರ್ಡ್‍ಗೆ ಅನ್ಯಾಯವೆಸಗಿದ್ದಾರೆ ಎಂದು ಏರುದನಿಯಲ್ಲೇ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತಿಗಿಳಿದ ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್, ತುರ್ತಾಗಿ ಆಗಬೇಕಿದ್ದರಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ನಿಮ್ಮ ವಾರ್ಡ್‍ಗೆ ಬೇರೆ ಅನುದಾನದಲ್ಲಿ ಕಾಮಗಾರಿ ಸೇರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಸಭೆ ಕರೆಯಲು ಸಾಧ್ಯವಾ ಗಿರಲಿಲ್ಲ ಎನ್ನುತಿದ್ದಂತೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ನಡುವೆಯೇ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆಯಿತು. ಮತ್ತೆ ಸಭೆ ಗದ್ದಲದ ಗೂಡಾಯಿತು.

Translate »