ಬೇನಾಮಿ ಆಸ್ತಿ: ಡಿಕೆಶಿ ಬಂಧನ ಸಾಧ್ಯತೆ
ಮೈಸೂರು

ಬೇನಾಮಿ ಆಸ್ತಿ: ಡಿಕೆಶಿ ಬಂಧನ ಸಾಧ್ಯತೆ

January 8, 2019

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ 110 ಕೋಟಿ ರೂ.ಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸದ್ಯದಲ್ಲೇ ಅವರು ಬಂಧನವಾಗುವ ಸಾಧ್ಯತೆ ಇದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ವೇಳೆ ಲಭ್ಯವಾದ ಆಸ್ತಿಗಿಂತಲೂ ಹೆಚ್ಚಿನ ಆಸ್ತಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ವಾಹಿನಿ ಪ್ರಸಾರ ಮಾಡಿದೆ.

ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ದೆಹಲಿಯ ಪ್ರಧಾನ ಕಚೇರಿ ಮತ್ತು ಬೇನಾಮಿ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಬಂಧನವಾಗು ವುದರ ಜೊತೆಗೆ ಅವರ 110 ಕೋಟಿ ಮೌಲ್ಯದ ಆಸ್ತಿ ಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಐಟಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರನ್ನು ವಿಚಾರಣೆ ಗೊಳಪಡಿಸಿದ್ದರು. ಈ ವೇಳೆ ಪಿತ್ರಾರ್ಜಿತ ಆಸ್ತಿ ಎಷ್ಟಿದೆ? ಅದರಿಂದ ಎಷ್ಟು ಆದಾಯ ಬಂದಿದೆ ಎಂಬುದು ಸೇರಿದಂತೆ ಆದಾಯ ಮೂಲಗಳ ಬಗ್ಗೆ ಪ್ರಶ್ನಿಸಿದ್ದರು. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಕೆಲವೊಂದು ಆದಾಯ ಕೃಷಿ ಮೂಲದಿಂದ ಬಂದಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಆವರ ತಾಯಿ ಕೃಷಿ ಮೂಲದ ಆದಾಯದ ಬಗ್ಗೆ ನೀಡಿದ ಮಾಹಿತಿಯೂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಹೊಂದಾಣಿಕೆಯಾಗಲಿಲ್ಲ ಎಂದು ಹೇಳಲಾಗಿದೆ.

ಡಿ.ಕೆ. ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ದೊರೆತ ಹಣ ಹಾಗೂ ಈಗಲ್ಟನ್ ರೆಸಾರ್ಟ್‍ನಲ್ಲಿ ಶಿವಕುಮಾರ್ ಸಾಕ್ಷ್ಯ ನಾಶ ಮಾಡಿದ ಆರೋಪಗಳ ಬಗ್ಗೆ ಐಟಿ ಅಧಿಕಾರಿಗಳು 108 ಪ್ರಶ್ನೆಗಳನ್ನು ಮುಂದಿಟ್ಟು ಮಾಹಿತಿ ಕಲೆ ಹಾಕಿದ್ದರು. ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು ಸದ್ಯದಲ್ಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

Translate »