ಸಮರ್ಪಕ ನೀರು ಪೂರೈಕೆಗೆ  ಆಗ್ರಹಿಸಿ ನಗರಸಭೆಗೆ ಮುತ್ತಿಗೆ
ಚಾಮರಾಜನಗರ

ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ

January 8, 2019

ಕೊಳ್ಳೇಗಾಲ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಇಲ್ಲಿನ ನಗರಸಭೆಗೆ ಮುತ್ತಿಗೆ ಹಾಕಿದ 1ನೇ ವಾರ್ಡ್ ನಿವಾಸಿಗಳು, ಸಿಬ್ಬಂದಿಯನ್ನು ಹೊರ ಕಳುಹಿಸಿ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು.

ನಗರಸಭೆ ಎದುರು ಜಮಾಯಿಸಿದ 1ನೇ ವಾರ್ಡ್ ನಿವಾಸಿಗಳು ವಿವಿಧ ಸಂಘಟನೆ ಗಳ ಮುಖಂಡರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರಲ್ಲದೆ, ಕರ್ತವ್ಯದಲ್ಲಿದ್ದ ನೌಕರ ರನ್ನು ಹೊರ ಕಳಿಹಿಸಿ ಕಚೇರಿ ಬಾಗಿಲು ಹಾಕಿದರು. ಇದೇ ವೇಳೆ ಖಾಲಿ ಕೊಡ ಪ್ರದರ್ಶಿಸಿ, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಆರು ತಿಂಗಳಿ ನಿಂದಲೂ 1ನೇ ವಾರ್ಡ್‍ಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗಹರಿಸಲು ಕ್ರಮಕೈ ಗೊಂಡಿಲ್ಲ ಎಂದು ಆರೋಪಿಸಿದರು.
ನೀರಿನ ಸಮಸ್ಯೆ ಕುರಿತು ಸಾಕಷ್ಟು ಬಾರಿ ನಗರಸಭೆಗೆ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೂ ತರ ಲಾಗಿದೆ. ಆದರೂ ಪರಿಹಾರ ದೊರಕಿಲ್ಲ. ಇದು ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಯಾಗಿದೆ ಕಿಡಿಕಾರಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರಸಭೆ ಆಯುಕ್ತ ನಾಗಶೆಟ್ಟಿ ಅವರನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಲವು ಬಾರಿ ಮನವಿ ನೀಡಿದರೂ ನೀರಿನ ಸಮಸ್ಯೆ ನೀಗಿಲ್ಲ ಎಂದು ಆಕ್ರೋಶ ಹಾರ ಹಾಕಿದರು. ಬಳಿಕ ಧರಣಿ ನಿರತರನ್ನು ಸಮಾಧಾನ ಪಡಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

ಈ ವೇಳೆ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ನಟರಾಜ ಮಾಳಿಗೆ, ಜಯಕರ್ನಾಟಕ ಸಂಘಟನೆಯ ಸುರೇಶ್, ಜೆಡಿಎಸ್ ಮುಖಂಡ ಅಣಗಳ್ಳಿ ದಶರಥ್, 1ನೇ ವಾರ್ಡ್ ನಿವಾಸಿಗಳಾದ ದಿಲೀಪ್ ಸಿದ್ದಪ್ಪಾಜಿ, ಶಿವಮೂರ್ತಿ, ಸರಸ್ವತಿ, ಸಾವಿತ್ರಮ್ಮ, ಪಾರ್ವತಿ, ಸರೋಜ, ರಾಧಿಕಾ, ಮಹಾದೇವಮ್ಮ ಇನ್ನಿತರರಿದ್ದರು.

Translate »