ಭಾರತ್ ಬಂದ್: ಹಾಸನ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಹಾಸನ

ಭಾರತ್ ಬಂದ್: ಹಾಸನ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

January 9, 2019

ರಸ್ತೆಗಿಳಿಯದ ಬಸ್‍ಗಳು ,ಬಿಕೋ ಎಂದ ಬಸ್ ನಿಲ್ದಾಣಗಳು ಪ್ರಯಾಣಿಕರ ಪರದಾಟ,ಸಹಜ ಸ್ಥಿತಿಯಲ್ಲಿ ಜನಜೀವನ,ಎಂದಿನಂತೆ ಕಾರ್ಯನಿರ್ವಹಿಸಿದ ಪೆಟ್ರೋಲ್ ಬಂಕ್, ಹೋಟೆಲ್, ಚಿತ್ರಮಂದಿರ ಆಟೋ, ಟ್ಯಾಕ್ಸಿಗಳಿಗೆ ಹೆಚ್ಚಿನ ಬೇಡಿಕೆ

ಹಾಸನ: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪ್ತಿ ಮಂಗಳ ವಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ಸಂಘಟನೆಗಳ ಬೆಂಬಲ: ಬಂದ್‍ಗೆ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಎಚ್‍ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಲ್‍ಪಿಎಫ್, ಯುಟಿಯುಸಿ, ಕೈಗಾರಿಕಾ ಮತ್ತು ಸೇವಾ ವಲಯದ ಸ್ವತಂತ್ರ ಸಂಘಟನೆಗಳು, ಕೇಂದ್ರ ಹಾಗೂ ರಾಜ್ಯ ಸÀರ್ಕಾರಿ ನೌಕರರ ಸಂಘಟನೆಗಳು, ರೈಲ್ವೆ, ರಕ್ಷಣೆ, ಆರೋಗ್ಯ, ಶಿಕ್ಷಣ, ಹಾಗೂ ಅಂಚೆ ನೌಕರರ ಸಂಘಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್, ವಿಮಾ, ಟೆಲಿಕಾಂ, ಇಂಧನ, ಕಲ್ಲಿದ್ದಲು ಹಾಗೂ ಸಾರ್ವಜನಿಕ ಸಾರಿಗೆ ಮತ್ತು ಕೈಗಾರಿಕಾ ವಲಯದ ಸಂಘಟನೆ ಗಳು, ಅಂಗನವಾಡಿ, ಗ್ರಾಮ ಪಂಚಾಯತಿ, ಪ್ಲಾಂಟೇಷನ್, ಮುನಿಸಿಪಲ್, ಬಿಸಿಯೂಟ ಅಸಂಘಟಿತ ವಲಯದ ಸಂಘಟನೆಗಳ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ರಸ್ತೆಗಿಳಿಯದ ಬಸ್: ಕೆಎಸ್‍ಆರ್‍ಟಿಸಿ ಬಸ್ ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತ ಗೊಳಿಸಿದವು. ಪರಿಣಾಮ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಹಾಗಾಗಿ, ಜಿಲ್ಲೆಯಿಂದ ಬೇರೆಡೆಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ಗಾಗಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಬಸ್‍ಗಳ ಸಂಚಾರ ಇಲ್ಲದಿದ್ದರಿಂದ ಆಟೋ-ಟ್ಯಾಕ್ಸಿಗಳಿಗೆ ಬೇಡಿಕೆ ಸೃಷ್ಟಿಯಾಗಿತ್ತು.

ಆರೋಗ್ಯ ಸೇವೆ ಲಭ್ಯ: ಔಷಧಿ ಮಳಿಗೆ, ಆಸ್ಪತ್ರೆಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಉಳಿದಂತೆ ನಗರದ ಬಹುಪಾಲು ಅಂಗಡಿ- ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಾಗಿಲು ತೆರೆದಿತ್ತು. ಹೊಟೇಲ್, ಪೆಟ್ರೋಲ್ ಬಂಕ್ ವಹಿವಾಟಿನಲ್ಲಿ ಯಾವುದೇ ರೀತಿಯ ವ್ಯತ್ಯಯವಿಲ್ಲದೆ ಎಂದಿನಂತೆ ಕಾರ್ಯ ನಿರ್ವಹಿಸಿದವು. ಇದರಿಂದ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.

ಪ್ರತಿನಿತ್ಯ ಸರ್ಕಾರಿ ಕೆಲಸಕ್ಕಾಗಿ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಕೆಂದ್ರಕ್ಕೆ ಆಗಮಿಸು ತ್ತಿದ್ದ ಗ್ರಾಮೀಣ ಪ್ರದೇಶದ ಜನರ ಸಂಖ್ಯೆ ಬಂದ್ ಹಿನ್ನೆಲೆಯಲ್ಲಿ ವಿರಳವಾಗಿತ್ತು. ಇದ ರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಅಂಚೆ ಕಚೇರಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಜನರಿಲ್ಲದೆ ಭಣಗುಡುತ್ತಿದ್ದ ದೃಶ್ಯ ಗೋಚರಿಸಿತ್ತು. ಬಂದ್ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮುಂಜಾ ಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಭಣಗುಡುತ್ತಿದ್ದ ಸಂತೆ, ಮಾರುಕಟ್ಟೆ: ಕಟ್ಟಿನಕೆರೆ ಮಾರುಕಟ್ಟೆ, ಎಪಿಎಂಸಿ ಮಾರು ಕಟ್ಟೆ ಮತ್ತು ಸಂತೆ ನಡೆಯುವ ಜಾಗಗಳಲ್ಲಿ ಜನರಿಲ್ಲದೆ ಭಣಗುಡುತ್ತಿತ್ತು. ಮಂಗಳ ವಾರ ಸಂತೆ ಇದ್ದರೂ ಕೆಲ ರಸ್ತೆಗಳು ಖಾಲಿ ಖಾಲಿ ಇದ್ದಂತೆ ಕಂಡು ಬಂದಿತು.

ಕಚೇರಿ ಮುಂಭಾಗ ನೌಕರರ ಪ್ರತಿಭಟನೆ: ಮುಖ್ಯ ಅಂಚೆ ಕಚೇರಿಯು ಕೂಡ ಕಾರ್ಯ ನಿರ್ವಹಿಸಲಿಲ್ಲ. ನೌಕರರು ಕಚೇರಿ ಮುಂದೆ ಪ್ರತಿಭಟಿಸಿದರು. ಕಾವೇರಿ ಬ್ಯಾಂಕ್ ನೌಕರರು ತಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇನ್ನು ಕೆಲವು ಬ್ಯಾಂಕ್ ಗಳು ಬಂದ್ ಆಗಿದ್ದರೆ, ಮತ್ತೆ ಕೆಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವ ಹಿಸಿದವು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿ ಕರ ಕೊರತೆ ಎದ್ದು ಕಾಣುತಿತ್ತು.

ಸಕಲೇಶಪುರದಲ್ಲಿ ಮಿಶ್ರ ಪ್ರತಿಕ್ರಿಯೆ: ಮುಂಜಾನೆಯಿಂದಲೇ ಕೆಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವ ಹಿಸುತ್ತಿದ್ದವು. ಇನ್ನುಳಿದ ಬಹುತೇಕ ಅಂಗಡಿ ಗಳು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿ ಬಂದ್‍ಗೆ ಸಾಥ್ ನೀಡಿತು. ಇನ್ನು ಸಾರಿಗೆ ಸಂಸ್ಥೆ ಬಸ್‍ಗಳು ಡಿಪೆÇೀದಲ್ಲಿ ನಿಂತಿದ್ದು, ಚಾಲಕರು ಹಾಗೂ ನಿರ್ವಾಹಕರು ಬಂದ್‍ಗೆ ಸಾಥ್ ನೀಡಿದರು.

ಇಂದೂ ಕೂಡ ಭಾರತ್ ಬಂದ್ ಇರುವು ದರಿಂದ ಬಂದ್‍ನ ಬಿಸಿ ಜಿಲ್ಲೆಯ ಜನರಿಗೆ ಹೇಗೆ ತಟ್ಟುತ್ತದೆ. ಇದಕ್ಕೆ ಜನತೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಚನ್ನರಾಯಪಟ್ಟಣಕ್ಕೆ ತಟ್ಟಿದ ಬಂದ್ ಬಿಸಿ: ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಯಾವುದೇ ಸರ್ಕಾರಿ ಬಸ್‍ಗಳು ಹೊರ ಡದೆ ಬಂದ್ ಬೆಂಬಲಿಸಿದವು. ಇನ್ನು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಆಟೋ ಮೂಲಕ ಪ್ರಚಾರ ಮಾಡುತ್ತಾ ನಗರದ ಬಹುಭಾಗ ತೆರೆದಿದ್ದ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿಸುವ ಕಾರ್ಯ ಮಾಡಿದರು.

ಬಸ್ ಸಂಚಾರ ಸ್ಥಗಿತ: ವಿದ್ಯಾರ್ಥಿಗಳ ಪರದಾಟ

ಭಾರತ್ ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಆದರೆ, ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಜೆ ರದ್ದುಪಡಿಸಿದ್ದರು. ಆದರೆ, ಬಂದ್‍ಗೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಮಂಗಳವಾರ ಶಾಲಾ-ಕಾಲೇಜುಗಳಿಗೆ ಆಗಮಿಸಲು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಾಮದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ ಬಸ್‍ಗಳಲ್ಲಿ ಹಾಗೂ ಆಟೋ ಮತ್ತು ಇತರೆ ಖಾಸಗಿ ವಾಹನಗಳಲ್ಲಿ ಹೆಚ್ಚಿನ ಹಣ ನೀಡಿ ಶಾಲಾ ಕಾಲೇಜುಗಳಿಗೆ ಬಂದರು. ಆದರೆ, ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗೈರಾಗಿ ದ್ದರು. ಜೊತೆಗೆ, ಕೆಲವು ಶಾಲೆಗಳ ಶಿಕ್ಷಕರು ಗೈರಾಗಿದ್ದರು. ಇದರಿಂದ ತರಗತಿಗಳು ನಡೆಯದೇ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಹತಾಶರಾದರು. ಬಳಿಕ, ಅವರು ವಾಪಸ್ ಮನೆಗೆ ಹೋಗಲು ಬಸ್ ಸೌಲಭ್ಯವಿಲ್ಲದೆ ಬಸ್ ನಿಲ್ದಾಣದಲ್ಲಿಯೇ ಕಾದು ಕುಳಿತು ಪರದಾಡುತ್ತಿದ್ದರು. ಬಂದ್ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

‘ಪರೀಕ್ಷೆ ಇದೆ ಎಂಬ ಕಾರಣಕ್ಕೆ ಬೆಳಗಿನ ಜಾವವೇ ಎದ್ದು ನಾವು ಸರ್ಕಾರಿ ಹಾಗೂ ಖಾಸಗಿ ವಾಹನಗಳ ಮೂಲಕ ಕಾಲೇಜಿಗೆ ಬಂದೆವು. ಆದರೆ, ಕಾಲೇಜಿಗೆ ಬಂದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಕಾಲೇಜಿನ ಆಡಳಿತ ಮಂಡಳಿ ಪರೀಕ್ಷೆಯನ್ನು ಕೂಡ ಮುಂದೂಡಿದೆ. ಹೀಗಾಗಿ ನಮಗೆ ವಾಪಸ್ ಊರಿಗೆ ತೆರಳಲು ಯಾವುದೇ ಬಸ್ ಸೌಕರ್ಯ ಇಲ್ಲ. ಹೀಗಾಗಿ ಏನು ಮಾಡ ಬೇಕೆಂಬುದು ತೋಚುತ್ತಿಲ್ಲ. ಸಂಜೆ ತನಕ ಬಸ್ ನಿಲ್ದಾಣದಲ್ಲಿ ಇರುವುದಕ್ಕೂ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಹಾಸನದ ಹೇಮಾವತಿ ಪ್ರತಿಮೆಯಿಂದ ವಿವಿಧ ಸಂಘಟನೆ ಗಳು ಪ್ರತಿಭಟನೆ ಮೆರವಣಿಗೆ ಆರಂಭಿಸಿದರು. ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು. ನಂತರ ಮತ್ತೊಂದು ಸಂಘಟನೆ ಬಿ.ಎಂ.ರಸ್ತೆ ಮೂಲಕ ಬೃಹತ್ ಮೆರವಣಿಗೆ ನಡೆಸಿತು. ಪ್ರತಿಭಟನಾ ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದವು.
ಉದ್ಯೋಗ ಸಮಸ್ಯೆ, ನಿರಂತರ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್‍ಗಳ ಅನಗತ್ಯ ಬೆಲೆ ಏರಿಕೆ, ಸಾರ್ವಜನಿಕ ಉದ್ಯಮಗಳ ಖಾಸಗೀ ಕರಣ, ರೈತರ ಸಾಲ ಮನ್ನಾ ವಿರೋಧ, ಸಂವಿಧಾನ ಬದಲಾವಣೆ ಹೇಳಿಕೆ ಸೇರಿದಂತೆ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಿರುದ್ಯೋಗ ಸಮಸ್ಯೆಯಿಂದ ದೇಶದ ಯುವ ಜನರು ಪರಿತಪಿಸುತ್ತಿದ್ದಾರೆ. ಆಹಾರ, ವಸತಿ, ಇಂಧÀನ, ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಅತ್ಯಂತ ದುಬಾರಿಯಾಗಿದೆ. ಎಲ್ಲಾ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂ ರಾಷ್ಟ್ರೀಯ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

‘ನೋಟ್‍ಬ್ಯಾನ್’ ಮತ್ತು ‘ಜಿಎಸ್‍ಟಿ’ಯಂತಹ ಅನರ್ಥಕಾರಿ ಆರ್ಥಿಕ ಕ್ರಮಗಳಿಂದಾಗಿ ದೇಶದ ಆಂತರಿಕ ಉತ್ಪಾದನೆಯಲ್ಲಿ ತೀವ್ರ ಕುಸಿತ, ಉದ್ಯೋಗನಾಶ, ಹಣದುಬ್ಬರದಿಂದಾಗಿ ಕೃಷಿ ಮತ್ತು ಕೈಗಾರಿಕೆ ಬಿಕ್ಕಟ್ಟಿಗೆ ಸಿಲುಕಿವೆ. ಮಾತ್ರವಲ್ಲದೇ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ಉಂಟಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ರೈತ ಸಂಘದ ಕೊಟ್ಟೂರು ಶ್ರೀನಿವಾಸ್, ಮುಖಂಡರಾದ ನವೀನ್ ಕುಮಾರ್, ಎಂ.ಸಿ.ಡೋಂಗ್ರೆ, ಕುಮಾರಸ್ವಾಮಿ, ಸ್ವಾಮಿ, ಮಂಜು ನಾಥ್, ಆಶಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Translate »