ಚಾಮರಾಜನಗರ ಜಿಲ್ಲೆಯಲ್ಲಿ ‘ಭಾರತ್ ಬಂದ್’ಗೆ ಉತ್ತಮ ಪ್ರತಿಕ್ರಿಯೆ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ‘ಭಾರತ್ ಬಂದ್’ಗೆ ಉತ್ತಮ ಪ್ರತಿಕ್ರಿಯೆ

September 11, 2018

ಚಾಮರಾಜನಗರ: ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೋಮವಾರ ಕರೆ ನೀಡಿದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೊರ ರಾಜ್ಯದ ಹಾಗೂ ಗ್ರಾಮಾಂತರ ಪ್ರದೇಶದ ಪ್ರಯಾಣಿಕರು ಪರದಾಡುವಂತಾಯಿತು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಫೋಷಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳು, ಹೊಟೇಲ್‍ಗಳು, ಚಿತ್ರಮಂದಿರಗಳು ಬಾಗಿಲು ಮುಚ್ಚಿದವು. ಪೆಟ್ರೋಲ್ ಬಂಕ್‍ಗಳು ಬಂದ್ ಆಗಿದ್ದ ಪರಿಣಾಮ ವಾಹನ ಸವಾರರು ಪದಾಡುತ್ತಿದ್ದ ದೃಶ್ಯ ಕಂಡು ಬಂತು.

ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು, ಔಷಧಿ ಅಂಗಡಿಗಳು ತೆರೆದಿದ್ದವು. ಲಾರಿ, ಆಟೋ, ಕಾರುಗಳ ಸಂಚಾರ ವಿರಳವಾಗಿತ್ತು. ಬ್ಯಾಂಕ್‍ಗಳು ಎಂದಿನಂತೆ ತೆರೆದರೂ ಸಹ ಸ್ವಲ್ಪ ಸಮಯದ ನಂತರ ಪ್ರತಿಭಟನಾಕಾರರು ತೆರಳಿ ಬಾಗಿಲು ಮುಚ್ಚಿಸುವಲ್ಲಿ ಯಶಸ್ವಿಯಾದರು. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಅಧಿಕಾರಿಗಳು ಹಾಗೂ ನೌಕರರ ಹಾಜರಾತಿ ಕಡಿಮೆ ಇತ್ತು. ಸಾರ್ವಜನಿಕರಿಲ್ಲದೇ ನಗರದ ಜಿಲ್ಲಾಡಳಿತ ಭವನ ಬಿಕೋ ಎನ್ನುತ್ತಿತ್ತು.

ಕಾಂಗ್ರೆಸ್ ಕರೆ ನೀಡಿದ್ದ ಬಂದ್‍ಗೆ ಜೆಡಿಎಸ್, ಬಿಎಸ್‍ಪಿ, ಎಸ್‍ಡಿಪಿಐ ಬೆಂಬಲ ಸೂಚಿಸಿದವು. ಪ್ರತಿಭಟನೆ ನಡೆಸುವ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಎತ್ತಿನ ಗಾಡಿಯ ಮೇಲೆ ಬೈಕ್, ಗ್ಯಾಸ್ ಸಿಲಿಂಡರ್ ಮೆರವಣಿಗೆ: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿಬೀದಿ, ಚಿಕ್ಕ ಅಂಗಡಿ ಬೀದಿ ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.

ಎತ್ತಿನಗಾಡಿ ಮೇಲೆ ಬೈಕ್, ಗ್ಯಾಸ್ ಸಿಲಿಂಡರ್‍ಗಳನ್ನು ಮೆರವಣಿಗೆ ನಡೆಸಲಾಯಿತು. ಕುದುರೆಗಾಡಿಯ ಮೇಲೆ ಸೈಕಲ್ ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆಯಲಾಯಿತು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲಾಯಿತು.
ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಅಗತ್ಯ ವಸ್ತುಗಳ ಬೆಲೆ ಇಳಿಯಲಿ, ಬಿಜೆಪಿ ಸರ್ಕಾರ ರಾಜೀನಾಮೆ ನೀಡಲಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ರೀತಿಯಲ್ಲಿ ಬರೆದಿದ್ದ ನಾಮಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ನಾಗರಿಕರ ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಸಾಮಾನ್ಯ ಜನರ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ನಾಗರಿಕರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಧಿಸಿರುವ ದೈತ್ಯಕಾರದ ತೆರಿಗೆಗಳ ಪರಿಣಾಮ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳವಾಗಿದೆ. ಬೆಲೆ ನಿಯಂತ್ರಣಕ್ಕೆ ತರುವಲ್ಲಿ ಪ್ರಧಾನಿ ನರೇಂದ್ರಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎನ್.ಕಾಮರಾಜು, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಲೆ ಮೇಲೆ ಸೌದೆ ಒಲೆಹೊತ್ತು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರಹಳ್ಳಿ ನವೀನ್, ತಾಲೂಕು ಪಂಚಾಯಿತಿ ಸದಸ್ಯರಾದ ಮಹದೇವಶೆಟ್ಟಿ, ಪುಟ್ಟಸ್ವಾಮಿ, ಕುಮಾರ್‍ನಾಯ್ಕ, ನಗರಸಭಾ ಸದಸ್ಯರಾದ ಆರ್.ಎಂ.ರಾಜಪ್ಪ, ಚಿನ್ನಮ್ಮ, ನೀಲಮ್ಮ, ಚಂದ್ರಕಲಾ, ಕಲಾವತಿ, ಭಾಗ್ಯಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನ್ನ, ಗುರುಸ್ವಾಮಿ, ಮುಖಂಡರಾದ ಸೈಯದ್‍ರಫಿ, ಪದ್ಮಾಪುರುಷೋತ್ತಮ್, ಲತಾ ಜಯಣ್ಣ, ಕಾಗಲವಾಡಿ ಚಂದ್ರು, ರವಿಗೌಡ, ಅರುಣ್‍ಕುಮಾರ್, ಆರ್.ಮಹದೇವು, ಚೂಡಾ ಅಧ್ಯಕ್ಷ ಸೈಯದ್ ಆಲಿಖಾನ್, ಜೆಡಿಎಸ್ ಮುಖಂಡರಾದ ಮಹೇಶ್‍ಗೌಡ, ರಾಮಚಂದ್ರ, ಎಸ್‍ಡಿಪಿಐ ನಗರಸಭಾ ಸದಸ್ಯರಾದ ಮಹೇಶ್, ಸಮಿವುಲ್ಲಾ ಖಾನ್, ಅಬ್ರಾರ್ ಅಹಮದ್ ಇತರರು ಪಾಲ್ಗೊಂಡಿದ್ದರು.

ಬಿಜೆಪಿಯಿಂದ ಗುಲಾಬಿ ವಿತರಣೆ

ಚಾಮರಾಜನಗರ:  ಭಾರತ್ ಬಂದ್‍ಗೆ ಸಹಕರಿಸದೆ ಅಲ್ಲಲ್ಲಿ ತೆರೆದಿದ್ದ ಅಂಗಡಿ-ಮುಂಗಟ್ಟುಗಳಿಗೆ ಬಿಜೆಪಿ ಮುಖಂಡರು ತೆರಳಿ ಅಂಗಡಿ ಮಾಲೀಕರಿಗೆ ಗುಲಾಬಿ ನೀಡಿ ಅಭಿನಂದಿಸಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಭಾರತ್ ಬಂದ್‍ಗೆ ಕರೆ ನೀಡಿತ್ತು. ಇದಕ್ಕೆ ಬೆಂಬಲ ನೀಡದಂತೆ ಬಿಜೆಪಿ ಮನವಿ ಮಾಡಿತ್ತು. ಆದರೂ, ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅಂಗಡಿ, ಹೊಟೇಲ್, ಟೀ ಕ್ಯಾಂಟೀನ್ ಬಾಗಿಲು ಮುಚ್ಚಿದವು. ಅಲ್ಲಲ್ಲಿ ಬೆರಳಣಿಕೆಯಷ್ಟು ತೆರೆದಿದ್ದ ಅಂಗಡಿಗಳಿಗೆ ಬಿಜೆಪಿ ಮುಖಂಡರು ತೆರಳಿ ಗುಲಾಬಿ ನೀಡಿ ನಮ್ಮ ಮನವಿಗೆ ಸ್ಪಂದಿಸಿದಕ್ಕೆ ಅಭಿನಂದನೆ ಎಂದು ತಿಳಿದರು.

ಬಿಜೆಪಿ ರಾಜ್ಯ ಎಸ್‍ಟಿ ಮೋರ್ಚಾ ಕಾರ್ಯದರ್ಶಿ ಕೆಲ್ಲಂಬಲ್ಳಿ ಸೋಮನಾಯಕ, ನಗರಸಭಾ ಸದಸ್ಯ ಮನೋಜ್‍ಪಟೇಲ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕುಲಗಾಣ ಶಾಂತಮೂರ್ತಿ, ನಗರ ಘಟಕದ ಅಧ್ಯಕ್ಷ ಸುಂದರ್ ರಾಜ್, ಮುಖಂಡರಾದ ಪೃಥ್ವಿರಾಜ್, ನಾಗೇಶ್‍ನಾಯಕ, ಶಿವಣ್ಣ, ಕುಮಾರ್, ಚಂದ್ರಶೇಖರ್ ಹಾಜರಿದ್ದರು.

Translate »