ಅಹಿಂಸೆ ಮೂಲಕ ತ್ಯಾಗಿಗಳಿಂದ ಸಮಾಜಕ್ಕೆ ಮಾರ್ಗದರ್ಶನಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ
ಹಾಸನ

ಅಹಿಂಸೆ ಮೂಲಕ ತ್ಯಾಗಿಗಳಿಂದ ಸಮಾಜಕ್ಕೆ ಮಾರ್ಗದರ್ಶನಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ

July 23, 2019

ಪುಣ್ಯಸಾಗರ ಮಹಾರಾಜರ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮ
ಶ್ರವಣಬೆಳಗೊಳ, ಜು.22- ದೇಶಾ ದ್ಯಂತ ತ್ಯಾಗಿಗಳು ಮಳೆಗಾಲದ ನಿಮಿತ್ತ ಚಾತುರ್ಮಾಸ್ಯ ಕೈಗೊಂಡು ಅಹಿಂಸೆ ಮೂಲಕ ಆತ್ಮಕಲ್ಯಾಣ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಪೀಠಾಧಿ ಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿ ಸಿದ್ದ ಪುಣ್ಯಸಾಗರ ಮಹಾರಾಜರ ಚಾತು ರ್ಮಾಸ್ಯ ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮದಲ್ಲಿ ಮಂಗಲ ಆಶೀರ್ವಚನ ನೀಡಿ ಮಾತನಾಡಿದರು.

ಸಾಮಾನ್ಯವಾಗಿ ಕರ್ನಾಟಕದವರು ಮುನಿ ದೀಕ್ಷೆ ಪಡೆದು ಉತ್ತರ ಭಾರತದ ಕಡೆ ವಿಹಾರ ಮಾಡುತ್ತಾರೆ. ಆದರೆ ಪುಣ್ಯ ಸಾಗರ ಮಹಾರಾಜರು ಕರ್ನಾಟಕದ ಜನರಿಗೆ ಆಧ್ಯಾತ್ಮ ಕೊಡಬೇಕು, ಧರ್ಮ ಬೋಧನೆ ಮಾಡಬೇಕು ಎಂದು ಕರ್ನಾಟಕ ವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಕೊಂಡು ಸರಳ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಸಚಿತ್ರ ರೂಪದಲ್ಲಿ ಬರೆದು ಪ್ರಕಟಿಸಿದ್ದಾರೆ. ಹಾಗೆಯೇ ಭಜನೆಗಳನ್ನು ರಚಿಸಿ ಪಂಚಕಲ್ಯಾಣದಂತಹ ಧಾರ್ಮಿಕ ಕಾರ್ಯಕ್ರಮ ಮಾಡಿ ಧರ್ಮ ಪ್ರಭಾವನೆ ಮಾಡುತ್ತಿದ್ದಾರೆ. ಇವರು ಸರಳ ಸ್ವಭಾವ ದವರು, ಅಧ್ಯಯನಶೀಲರು, ಸರಳ ಕನ್ನಡದಲ್ಲಿ ಧರ್ಮೋಪದೇಶ ಮಾಡುವವ ರಾಗಿದ್ದಾರೆ ಎಂದರು.

ಮುನಿಗಳು ನದಿ ನೀರಿನಂತೆ ಹರಿಯು ತ್ತಿರುತ್ತಾರೆ. ಆದರೆ ನದಿಗಳ ಮಧ್ಯೆ ಹೇಗೆ ಜಲಾಶಯಗಳನ್ನು ಕಟ್ಟಿ ನೀರಿನ ಸದುಪ ಯೋಗ ಪಡೆದುಕೊಳ್ಳುತ್ತೇವೆಯೋ ಹಾಗೆ 4 ತಿಂಗಳ ಚಾತುರ್ಮಾಸ್ಯದಲ್ಲಿ ಮುನಿಗಳ ಧರ್ಮೋಪದೇಶದಿಂದ ಪುಣ್ಯಲಾಭ ಪಡೆಯಬೇಕು ಎಂದರು.

ಒಬ್ಬರ ಪ್ರವಚನ ಇನ್ನೊಬ್ಬರಿಗೆ ಪ್ರಭಾವ ಬೀರಬೇಕಾದರೆ ಅದನ್ನು ಆಚರಣೆಗೆ ತಂದಿರಬೇಕು. ಮುನಿಗಳು ಧರ್ಮ ಆಚರಿ ಸುತ್ತಾ ಅದನ್ನೇ ಉಪದೇಶ ಮಾಡುವವ ರಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಮೋಹ, ಕಷಾಯಗಳು, ಪರಿಗ್ರಹಗಳು ಇಲ್ಲದಿರುವುದರಿಂದ ಅವರ ಉಪದೇಶ ಗಳು ಹೆಚ್ಚು ಪ್ರಭಾವ ಬೀರುತ್ತವೆ. ಮುಂದಿನ ಪೀಳಿಗೆಗೆ ನಾವು ಧರ್ಮ ಉಳಿಸಬೇಕಾ ದರೆ ಧರ್ಮ ರಕ್ಷಣೆ ಮಾಡಿ, ಮಕ್ಕಳನ್ನು ಧರ್ಮ ಮಾರ್ಗಕ್ಕೆ ತರಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪುಣ್ಯ ಸಾಗರ ಮಹಾರಾಜರು ಆಶೀರ್ವಚನ ನೀಡಿ ಶ್ರವಣಬೆಳಗೊಳ ಕ್ಷೇತ್ರ ಪವಿತ್ರ ಭೂಮಿಯಾಗಿದ್ದು, ಅಸಂಖ್ಯಾತ ಮುನಿ ಗಳು ಪಾದಾರ್ಪಣೆ ಮಾಡಿದ ಪವಿತ್ರ ಕ್ಷೇತ್ರ ವಾಗಿದೆ. ಅನಾದಿ ಕಾಲದಿಂದಲೂ ಮನುಷ್ಯ ದುಃಖಿಯಾಗಿದ್ದು, ಅವನು ಮಾಡಿದ ಪಾಪ ಕರ್ಮಗಳು ತೊಳೆಯಬೇಕಾದರೆ ಚಾತುರ್ಮಾಸ್ಯದಲ್ಲಿ ಗುರು ಮುನಿಗಳ ಉಪದೇಶ ಕೇಳಿ ಪಾಲಿಸಿದಾಗ ಅವನಿಗೆ ಶಾಂತಿ ದೊರೆಯುತ್ತದೆ ಎಂದರು.

ಜ್ಞಾನ ಅಖಂಡವಾಗಿ ಮನುಷ್ಯನ ಆತ್ಮ ನಲ್ಲಿರುತ್ತದೆ. ಜೀವ ಸಂಕುಲಗಳಿಗೆ ಹಾನಿ ಯಾಗಬಾರದೆಂಬ ಉದ್ದೇಶದಿಂದ ದಿಗಂ ಬರ ಮುನಿಗಳು 4 ತಿಂಗಳು ಒಂದೇ ಕಡೇ ಚಾತುರ್ಮಾಸ್ಯ ಆಚರಿಸುತ್ತಾ ಬಂದಿದ್ದು, ಅಹಿಂಸಾ ಪಾಲಕರಾಗಿದ್ದಾರೆ ಎಂದರು. ಈ 4 ತಿಂಗಳು ಶ್ರಾವಕರು ಸಹ ವ್ರತ ನಿಯಮಗಳನ್ನು ತಪ್ಪದೇ ಆಚರಿಸಿ ಒಳ್ಳೆಯ ಸದ್ಗತಿ ಪಡೆಯಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ಪುಣ್ಯಸಾಗರ ಮಹಾರಾಜರನ್ನು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಶ್ರಾವಕರು ಭವ್ಯ ಮೆರವಣಿಗೆ ಮೂಲಕ ಚಾವುಂಡರಾಯ ಸಭಾ ಮಂಟಪಕ್ಕೆ ಮಂಗಲ ವಾದ್ಯಗಳೊಂದಿಗೆ ಕರೆ ತಂದರು. ಬೆಂಗಳೂರು ಮೈಸೂರು, ದಾವಣಗೆರೆ, ಬೆಳಗಾಂ, ಹಾವೇರಿ ಹುಬ್ಬಳ್ಳಿ, ಸೋಂದಾ ಕಲಘಟಗಿ, ಅರಟಾಳ, ಧಾರವಾಡ, ನವಲ ಗುಂದ, ಹಾಸನ, ಇನ್ನೂ ಅನೇಕ ಕಡೆಗ ಳಿಂದ ಆಗಮಿಸಿದ್ದ ಶ್ರಾವಕ-ಶ್ರಾವಕಿಯರು ಪುಣ್ಯ ಸಾಗರ ಮಹಾರಾಜರಿಗೆ ಶ್ರೀಫಲ ಆಘ್ರ್ಯಗಳನ್ನು ಎತ್ತಿ ಭಕ್ತಿ ಸಮರ್ಪಿಸಿದರು. ಹಾಗೆಯೇ ದೀಕ್ಷಾ ಗುರುಗಳಾದ ವಿದ್ಯಾ ಸಾಗರ ಮಹಾರಾಜರಿಗೂ ಅಘ್ರ್ಯ ಸಮ ರ್ಪಿಸಲಾಯಿತು. ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುವ ಮುನಿಗಳಿಗೆ ಮಾತಾಜಿಯ ವರಿಗೆ ಕ್ಷೇತ್ರದ ಶ್ರೀಗಳಿಗೆ ಲೇಖನ ಸಾಮಗ್ರಿ ಜಪಮಾಲೆ, ವಸ್ತ್ರ, ಶಾಸ್ತ್ರಗಳನ್ನು ಬೆಂಗ ಳೂರಿನ ನಿಹಾಲ್ ಜೈನ್ ಅರ್ಪಿಸಿದರು. ನಂತರ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಚಾತುರ್ಮಾಸ್ಯ ವ್ರತದ ಮಂತ್ರಗಳನ್ನು ಪಠಿಸಿದರು. 50 ಕಿ.ಮೀ. ವ್ಯಾಪ್ತಿಯ ಅಷ್ಟ ದಿಗ್ಬಂಧನಗಳನ್ನು ವಿಧಿಸಿಕೊಂಡು ಚಾತುರ್ಮಾಸ್ಯ ಕಲಶ ಸ್ಥಾಪನೆ ಮಾಡಲಾಯಿತು. ಭಕ್ತರು ಈ ಸಂದರ್ಭ ಜಯಘೋಷ ಮೊಳಗಿಸಿದರು.

ಚಾತುರ್ಮಾಸ್ಯ ಸ್ಥಾಪನೆ ಧಾರ್ಮಿಕ ವಿಧಿ ಗಳನ್ನು ಪ್ರತಿಷ್ಠಾಚಾರ್ಯ ಎಸ್.ಪಿ.ಉದಯ ಕುಮಾರ್ ಶಾಸ್ತ್ರಿ, ಎಸ್.ಡಿ.ನಂದಕುಮಾರ್ ನಿರ್ವ ಹಿಸಿದರು. ಕಾರ್ಯಕ್ರಮದಲ್ಲಿ ವಿಶುದ್ಧಮತಿ ಮಾತಾಜಿ ಕಂಬದಹಳ್ಳಿ ಜೈನಮಠದ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿ ಸೋಮ್ದೇವ್ ಭಯ್ಯಾ, ಬನಾರಸನ ಪೂಲ್ಚಂದ್ರ ಪ್ರೇಮಿ, ಸ್ಥಳೀಯ ಜೈನ ಸಮಾಜ, ಕೂಷ್ಮಾಂಡಿನಿ ಮಹಿಳಾ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »