ಕಾಂಗ್ರೆಸ್‍ಗೆ ಸಿಎಂ ಪಟ್ಟ
ಮೈಸೂರು

ಕಾಂಗ್ರೆಸ್‍ಗೆ ಸಿಎಂ ಪಟ್ಟ

July 22, 2019

ಬೆಂಗಳೂರು,ಜು.21- ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಕಸರತ್ತು ನಡೆ ಸುತ್ತಿದ್ದು, ಸರ್ಕಾರ ಉಳಿವಿಗಾಗಿ ಕಾಂಗ್ರೆಸ್‍ಗೆ ಮುಖ್ಯ ಮಂತ್ರಿ ಪಟ್ಟ ಕಟ್ಟಲು ಜೆಡಿಎಸ್ ಮುಂದಾ ಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಅವರಲ್ಲಿ ಯಾರಾದರೊಬ್ಬರು ಸಿಎಂ ಆಗಲಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಕಾಂಗ್ರೆಸ್‍ಗೆ ಜೆಡಿಎಸ್ ಸಿಎಂ ಸ್ಥಾನದ ಆಫರ್ ನೀಡಿರುವುದನ್ನು ಖಚಿತಪಡಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನವರು ಯಾರಾದರೂ ಮುಖ್ಯ ಮಂತ್ರಿಯಾಗಲಿ ಎಂದು ಜೆಡಿಎಸ್‍ನವರು ಮುಕ್ತಕಂಠದಿಂದ ಹೇಳಿದ್ದಾರೆ. ಈ ಕುರಿತು ನಮ್ಮ ಹೈಕಮಾಂಡ್‍ಗೂ ಕೂಡಾ ಜೆಡಿಎಸ್ ನಾಯಕರು ತಿಳಿಸಿದ್ದಾರೆ ಎಂದರು.

ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅಥವಾ ನಾನು (ಡಿ.ಕೆ.ಶಿವಕುಮಾರ್) ಇಲ್ಲವೇ ಡಾ. ಜಿ.ಪರಮೇಶ್ವರ್ ಯಾರಾದರೂ ಮುಖ್ಯಮಂತ್ರಿ ಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್ ನಾಯ ಕರು ಕೇಳಿಕೊಂಡಿದ್ದಾರೆ ಎಂದು ಶಿವ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಶಾಸಕರಲ್ಲಿ ಬಹುತೇಕರು ಸಿದ್ದ ರಾಮಯ್ಯ ಅವರ ಆಪ್ತರಾಗಿದ್ದು, ಸಿದ್ದ ರಾಮಯ್ಯನವರನ್ನೇ ಮುಖ್ಯಮಂತ್ರಿ ಮಾಡಿ ದರೆ ಅವರೆಲ್ಲಾ ವಾಪಸ್ ಬಂದು ರಾಜೀ ನಾಮೆ ಹಿಂಪಡೆದು ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಾರೆ ಎಂಬ ವಿಶ್ವಾಸದಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ನಾಳೆ ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚಿಸಲಿದ್ದಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಡಿ.ಕೆ.ಶಿವ ಕುಮಾರ್, ನಾವು ನಮ್ಮ ಶಾಸಕರ ಮನ ವೊಲಿಸುತ್ತೇವೆ. ಅವರು ಬರುತ್ತಾರೆ ಎಂಬ ವಿಶ್ವಾಸವಿದೆ. ನಾನು ಸ್ಟಂಟ್ ಮಾಡುತ್ತಿ ದ್ದೇನೆ, ತೋರಿಕೆಗಾಗಿ ಓಡಾಡುತ್ತಿದ್ದೇನೆ, ಏನೂ ಕೆಲಸ ಮಾಡುತ್ತಿಲ್ಲ ಎಂದು ಕೆಲ ವರು ಟೀಕಿಸುತ್ತಾರೆ. ಆ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ವನ್ನು ನಾನು ಪ್ರಾಮಾಣಿಕವಾಗಿ ಮಾಡು ತ್ತೇನೆ. ಸರ್ಕಾರ ಉಳಿಸಿಕೊಳ್ಳುವುದರಲ್ಲಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ ಎಂದು ಹೇಳಿದರು. ಅತೃಪ್ತ ಶಾಸಕರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದ್ದಾಗ ಹೇಗಾದರೂ ಮಾಡಿ ಸರ್ಕಾರ ಉಳಿಸಲು ಮೈತ್ರಿ ನಾಯಕರು ಕಾಂಗ್ರೆಸ್‍ಗೆ ಸಿಎಂ ಪಟ್ಟ ಎಂಬ ಕೊನೆ ದಾಳವನ್ನು ಉರುಳಿಸಿದ್ದಾರೆ. ಮೈತ್ರಿ ಪಕ್ಷದ 17 ಶಾಸಕರು ಗೈರಾಗುವ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವುದು ಕಷ್ಟ ಎನ್ನುವುದು ಹೆಚ್.ಡಿ.ದೇವೇಗೌಡರಿಗೆ ಗೊತ್ತಾಗಿದೆ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

Translate »