ಭೀಮ ಸಂಭ್ರಮ-2018 ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ

ಭೀಮ ಸಂಭ್ರಮ-2018 ಕ್ರೀಡಾಕೂಟಕ್ಕೆ ಚಾಲನೆ

June 10, 2018

ಚಾಮರಾಜನಗರ:  ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಂಬೇಡ್ಕರ್ ಅವರ 127ನೇ ಜನ್ಮದಿನದ ಅಂಗವಾಗಿ ಕರ್ನಾಟಕ ವಿದ್ಯುತ್ ಮಂಡಳಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಭೀಮ ಸಂಭ್ರಮ-2018 ಕ್ರಿಕೆಟ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿದ್ಯುತ್ ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಭಾಸ್ಕರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗಿದೆ. ವಿಭಾಗೀಯ ಕಚೇರಿಯ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಎಲ್ಲ ನೌಕರರು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಸದಾ ಕೆಲಸಗಳ ಒತ್ತಡದಲ್ಲಿರುವ ನೌಕರರು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಕ್ರೀಡಾಕೂಟದ ಪಾಲ್ಗೊಳ್ಳುವ ನೌಕರರನ್ನು ಪ್ರೋತ್ಸಾಹಿಸಲು ಬಹುಮಾನ ನೀಡಲಾಗುವುದು ಎಂದರು.
ಭೀಮ್ ಸಂಭ್ರಮ-2018ರ ಕಪ್‍ಗೆ ಹರದನಹಳ್ಳಿ, ರಾಮಸಮುದ್ರ, ಚಾಮರಾಜನಗರ ವಿಭಾಗೀಯ ಕಚೇರಿ, ಕುದೇರು, ತೆರಕಣಾಂಬಿ, ಗುಂಡ್ಲುಪೇಟೆ, ಅರಕಲವಾಡಿ ಸೇರಿದಂತೆ ವಿದ್ಯುತ್ ಜಾಗೃತದಳ ಸೇರಿದಂತೆ ಇತರೆ ತಂಡಗಳು ಭಾಗವಹಿಸಿದವು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಯಕಾರಿಣ ಸಮಿತಿಯ ಮಹೇಶ್, ಎಂಜಿನಿಯರ್ ನಂಜುಂಡಸ್ವಾಮಿ, ಎನ್.ಮಹೇಶ್, ಮಾಜಿ ನಿರ್ದೇಶಕ ಚಿಕ್ಕಸಿದ್ದಶೆಟ್ಟಿ, ಮುಖಂಡರಾದ ಬಸವಣ್ಣ, ದೇವರಾಜಯ್ಯ, ಶಿವಶಂಕರ್, ಮಲ್ಲೇಶ್, ರಮೇಶ್, ಪ್ರಶಾಂತ್, ಆರ್.ಡಿ.ನಾಗರಾಜ್ ಹಾಜರಿದ್ದರು.

Translate »