ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ: ಮಂಜುನಾಥ್
ಚಾಮರಾಜನಗರ

ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ: ಮಂಜುನಾಥ್

June 10, 2018

ಹನೂರು:  ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಕೃತಜ್ಞತಾ ಸಭೆಯನ್ನು ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಮನೆ ಮಗನಂತೆ ಸ್ವಾಗತಿಸಿದರು. ನನಗೆ ತೋರಿದ ಅಭೂತಪೂರ್ವವಾದ ಬೆಂಬಲ ನನ್ನ ಜೀವನದಲ್ಲಿ ಸ್ಮರಣ ೀಯವಾದದ್ದು, ಕ್ಷೇತ್ರದ ಜನತೆ ಬದಲಾವಣೆ ಬಯಸಿ ನನಗೆ ಸುಮಾರು 45 ಸಾವಿರ ಮತಗಳನ್ನು ನೀಡಿದ್ದಾರೆ. ಸೋಲಿಗೆ ಧೃತಿಗೆಡದೆ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಂತು ಮುಂಬರುವ ಎಲ್ಲ ಚುನಾವಣೆಗಳಿಗೆ ಪಕ್ಷದ ಸಂಘಟನೆಯನ್ನು ಮಾಡುತ್ತೇನೆ ಎಂದರು.

ಕ್ಷೇತ್ರದ ಜನರು ಕೂಲಿ ಸಿಗದೇ ಗುಳೆ ಹೋಗುವುದನ್ನು ತಪ್ಪಿಸಲು ಇಲ್ಲಿಯೇ ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನು ಕಾರ್ಯಕರ್ತರ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.

ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರಿ ಸೌಲಭ್ಯ ವಂಚಿತರನ್ನು ಗುರುತಿಸಿ ಅವರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು. ಕ್ಷೇತ್ರದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿ ಪಕ್ಷ ಸಂಘಟನೆಗೆ ತಳಮಟ್ಟದಿಂದ ಒತ್ತು ನೀಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕಾಮರಾಜು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯ ನಾಗೇಂದ್ರ ಬಾಬು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜು, ಮುಖಂಡರಾದ ಮುಳ್ಳೂರು ಶಿವಮಲ್ಲು, ಪೊನ್ನಾಚ ಮಹದೇವಸ್ವಾಮಿ, ಪಾಳ್ಯ ಜಯಸುಂದರ್, ಸಿಂಗನಲ್ಲೂರು ರಾಜಣ್ಣ, ದತ್ತಾತ್ರೇಯ ಪಂಚಾಕ್ಷರಿ, ಬಸವರಾಜು, ಮಣಗಳ್ಳಿ ಶಿವಪ್ಪ, ಮಂಜೇಶ್, ನಾಗೇಂದ್ರ, ಲೋಕೇಶ್, ಶಿವರಾಮೇಗೌಡ, ಗೋವಿಂದರಾಜು ಇದ್ದರು.

Translate »