ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬ: ನಾಳೆ `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಸಂವಾದ
ಮೈಸೂರು

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬ: ನಾಳೆ `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಸಂವಾದ

August 5, 2019

ಮೈಸೂರು,ಆ.4(ಎಂಟಿವೈ)- ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ 72ನೇ ಹುಟ್ಟುಹಬ್ಬದ ಹಿನ್ನೆಲೆ ಯಲ್ಲಿ ಆ.6ರಂದು ಬೆಳಿಗ್ಗೆ 11ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ `ನಮ್ಮ ನಡಿಗೆ ಸಮಾ ನತೆಯ ಕಡೆಗೆ’ ಮುಕ್ತ ಸಂವಾದ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ವಿ.ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಸಿ.ಬಸವರಾಜು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜ್ಜನ ರಾಜಕಾರಣಿ ಯಾಗಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಮೌಲ್ಯಾ ಧಾರಿತ ರಾಜಕಾರಣದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಮುಕ್ತ ಸಂವಾದದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಸಂವಾದದಲ್ಲಿ ಪ್ರಜ್ಞಾವಂತ ಯುವಕರು, ಅಧ್ಯಾಪಕರು, ಹಿತೈಷಿಗಳು, ಅಭಿಮಾನಿಗಳು ಪಾಲ್ಗೊಳ್ಳಲಿದ್ದು, ಪ್ರಸಾದ್ ಅವರು ಬಾಲ್ಯದಿಂದ ಈ ವರೆಗೆ ನಡೆದುಬಂದ ಹಾದಿ, ಕೈಗೊಂಡ ಕಾರ್ಯಕ್ರಮಗಳು, ಯೋಜನೆಗಳು, ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ ವಿಷಯಗಳ ಬಗ್ಗೆ ಹಂಚಿಕೊಳ್ಳಲಿದ್ದಾರೆ. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಭಂತೆ ಕಲ್ಯಾಣ ಸಿರಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ, ಮೈಸೂರು ವಿವಿ ಕಾನೂನು ಶಾಲೆಯ ನಿರ್ದೇಶಕ ಡಾ.ಸಿ.ಬಸವರಾಜು ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಇದೇ ವೇಳೆ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಮತ್ತೊಬ್ಬ ಅಧ್ಯಕ್ಷ ಪಿ.ನಂದಕುಮಾರ್ ಮಾತನಾಡಿ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಸೋಂಕು ಅಂಟಿಸಿಕೊಳ್ಳದೆ ಶುದ್ಧ ರಾಜಕಾರಣ ಮಾಡಿ ಜನರ ಮನ ಗೆದ್ದಿದ್ದಾರೆ. ಸಂಸದರಾಗಿ, ಕೇಂದ್ರದ ಸಚಿವರಾಗಿ, ಶಾಸಕರಾಗಿ, ರಾಜ್ಯದ ಮಂತ್ರಿಯಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ. ಆ.6ರಂದು 72ನೇ ವಸಂತಕ್ಕೆ ಕಾಲಿಡುತ್ತಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಅಂದು ಬೆಳಗ್ಗೆ 9ಕ್ಕೆ ಒಡನಾಡಿ ಸೇವಾ ಸಂಸ್ಥೆಯ ಮಕ್ಕಳೊಂದಿಗೆ ಕಳೆಯುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳಲಿ ದ್ದಾರೆ. ನಂತರ `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲ್ಯದಿಂದ ಇಂದಿನವರೆಗೂ ಬೆಳೆದು ಬಂದ ಹಾದಿ, ರಾಜಕೀಯ, ಸಾಂಸ್ಕøತಿಕ, ಶೈಕ್ಷಣಿಕ ಹಾಗೂ ಬೌದ್ಧಿಕವಾಗಿ ಬೆಳೆದು ಬಂದ ಹಾದಿಯ ಬಗ್ಗೆ ವಿದ್ಯಾರ್ಥಿಗಳು, ಯುವ ಪೀಳಿಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಪದಾಧಿಕಾರಿಗಳಾದ ಡಾ.ಮುಳ್ಳೂರು ನಂಜುಂಡಸ್ವಾಮಿ, ಸಿ.ಜಿ.ಶಿವಕುಮಾರ್ ಭರತ್ ಹಾಗೂ ಇನ್ನಿತರರು ಇದ್ದರು.

Translate »