ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಧಾನ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಧಾನ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ

April 2, 2019

ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಭವಿಷ್ಯ
ನಂಜನಗೂಡು: ಈ ಬಾರಿಯ ಲೋಕಸಭೆ ಚುನಾವಣೆಯನ್ನು ಇಡೀ ಜಗತ್ತೇ ಗಮನಿಸುತ್ತಿದ್ದು, 5 ವರ್ಷ ಸ್ಥಿರ ಸರ್ಕಾರ ನೀಡುವುದರೊಂದಿಗೆ ದೇಶವನ್ನು ಕಾಂತ್ರಿಕಾರಿಕವಾಗಿ ಬದಲಾವಣೆ ಮಾಡಿ, ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಭವಿಷ್ಯ ನುಡಿದಿದ್ದಾರೆ.

ನಗರದ ಎಸ್‍ಎಲ್‍ವಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 9ನೇ ಲೋಕಾಸಭಾ ಚುನಾವಣೆ ಎದುರಿಸುತ್ತಿದ್ದು, ಯಾವ ಯಾವ ಚುನಾವಣೆಯನ್ನು ಹೇಗೆ ನಡೆಸಬೇಕೆಂಬ ಅನುಭವವಿದೆ. 46 ವರ್ಷ ರಾಜಕೀಯ ಅನುಭವ ಇರುವ ನಾನು ಯಾವುದೇ ಕಪ್ಪುಚುಕ್ಕಿ ಇಲ್ಲದೆ ರಾಜಕೀಯ ಮಾಡಿದ್ದೇನೆ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರಲ್ಲದೆ, ಉಪಚುನಾವಣೆಯಲ್ಲಿ ನನ್ನನ್ನು ವಾಮ ಮಾರ್ಗದಿಂದ ಸೋಲಿಸಿದವರಿಗೆ ಕಳೆದ ವಿಧಾನಸಭೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಸ್ಪರ್ಧೆ ಇಚ್ಛೆ ಇರಲಿಲ್ಲ: ಚುನಾವಣಾ ರಾಜಕೀಯ ಸಾಕು ಎಂದು ತೀರ್ಮಾನಿಸಿದ್ದೆ. ಸಾವಿರಾರು ಕಾರ್ಯಕರ್ತರು ಮನೆಗೆ ಬಂದು ನೀವು ಈ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು. ನಿಮಗೆ ಅನ್ಯಾಯ ಮಾಡಿದವರೆಲ್ಲ ಸೋತಿದ್ದಾರೆ. ಇನ್ನೊಬ್ಬರು ಮಾತ್ರ (ಆರ್.ಧ್ರುವನಾರಾಯಣ್) ಉಳಿದಿದ್ದಾರೆ. ಅವಗೂ ಪಾಠ ಕಲಿಸಬೇಕು ಎಂದು ಒತ್ತಡ ತಂದರು. ಅಲ್ಲದೆ ಬಿಜೆಪಿ ನಾಯಕರೂ ಸ್ಪರ್ಧಿಸುವಂತೆ ಸೂಚಿಸಿದ ಅನಿವಾರ್ಯ ಚುನಾವಣಾ ಕಣಕ್ಕೆ ಬರಬೇಕಾಯಿತು ಎಂದ ಅವರು, ಸದ್ಯ ಎಲ್ಲೆಡೆ ಮೋದಿ ಅವರ ಅಲೆÉ ಇದ್ದು, ಮೈಸೂರು ಮತ್ತು ಚಾಮರಾಜನಗರ ಲೋಕಾಸಭಾ ಕ್ಷೇತ್ರ ಬಿಜೆಪಿ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿಡಿದರು.

ದೋಸ್ತಿಯಲ್ಲೇ ಗಲಾಟೆ: ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದ್ದು, ಸಮ್ಮಿಶ್ರ ಸರ್ಕಾರದ ದೋಸ್ತಿ ಸರ್ಕಾರದಲ್ಲೇ ಗಲಾಟೆಗಳಾಗಿವೆ. ಈ ಚುನಾವಣೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಇನ್ನೂ ಒಂದಾಗಿಲ್ಲ. ಇದರಿಂದÀ ಜನತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.

ಮತದಾರರೊಂದಿಗೆ ಬಾಂಧವ್ಯ: ಈ ಹಿಂದೆ ಸಂಸದನಾಗಿದ್ದ ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ರಾಜ್ಯದಲ್ಲೇ ಅತಿಹೆಚ್ಚು ಸಮುದಾಯ ಭವನ ಹೊಂದಿದ್ದ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ಜೊತೆಗೆ ಚಾಮರಾಜನಗರ ಬ್ರಾಡ್‍ಗೇಜ್ ರೈಲು ಮಾರ್ಗದ ಅಭಿವೃದ್ಧಿ ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಚಾಮರಾಜನಗರಕ್ಕೆ ನೀಡಲಾಗಿದ್ದು, ಹೀಗಾಗಿ ಕ್ಷೇತ್ರದ ಮತದಾರರು ಈಗಲೂ ನನ್ನೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಹರ್ಷವರ್ಧನ್, ಚಾಮರಾಜನಗರದ ಉಸ್ತುವಾರಿ ರಾಜೇಂದ್ರ, ಮಾಜಿ ಮೂಡಾ ಅಧ್ಯಕ್ಷ ಸಿ.ಬಸವೇಗೌಡ, ಯು.ಎನ್.ಪದ್ಮನಾಭರಾವ್, ಜಿಪಂ ಸದಸ್ಯ ಮಂಗಳಾ ಸೋಮಶೇಖರ್, ರಾಜ್ಯ ಬಿಜೆಪಿ ಮುಖಂಡ ಸುಬ್ಬಣ್ಣ, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಧೀರಜ್ ಕುಮಾರ್, ವಳಗೆರೆ ಪುಟ್ಟಸ್ವಾಮಿ, ಜಿ.ಬಸವರಾಜು, ಹೆಮ್ಮರಗಾಲ ಸೋಮಣ್ಣ, ಜಿಲ್ಲಾ ಕಾರ್ಯಕಾರಿ ಮಹದೇವಪ್ಪ ಉಪಸ್ಥಿತರಿದ್ದರು.

ನಂಜನಗೂಡು ಎಸ್‍ಎಲ್‍ವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಮಾತನಾಡಿದರು.

Translate »