ಜನತೆಗೆ ಸರ್ಕಾರದ ಸಾಧನೆ ಮನದಟ್ಟು ಮಾಡಿ
ಮೈಸೂರು

ಜನತೆಗೆ ಸರ್ಕಾರದ ಸಾಧನೆ ಮನದಟ್ಟು ಮಾಡಿ

April 2, 2019

ಸ್ಥಳೀಯ ಜನಪ್ರತಿನಿಧಿಗಳಿಗೆ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ
ತಿ.ನರಸೀಪುರ: ಕಾಂಗ್ರೆಸ್ ಅಭಿವೃದ್ಧಿ ಮಾನದಂಡದ ಮೇಲೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳಾದ ಪುರಸಭಾ ಸದಸ್ಯರು ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಅಧಿಕ ಮತಗಳ ಪಡೆಯಬೇಕು ಎಂದು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ಮಾಡಿದರು.

ಪಟ್ಟಣದ ಶ್ರೀ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಸೋಮವಾರ ನಡೆದ ಪುರಸಭೆ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಆಡಳಿತವನ್ನು ನಡೆಸಿದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸರ್ಜಿಕಲ್ ಸ್ಟ್ರೈಕ್ ಹಾಗೂ ರೈತರ ಖಾತೆಗೆ 6 ಸಾವಿರ ರೂ.ಗಳನ್ನು ಹಾಕುವ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಬಿಜೆಪಿ ಬೆಂಬಲಿಸುವ ಯುವಕರ ಮನಸ್ಸು ಪರಿವರ್ತಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ರೈತಪರ ಮತ್ತು ಬಡವರ ಯೋಜನೆಗಳಿಗೆ ಆದ್ಯತೆ ನೀಡಿದರು. ಅಲ್ಲದೆ ವಿಶೇಷ ಅನುದಾನದ ಮೂಲಕ ನರಸೀಪುರ ಪಟ್ಟಣದ ಸಮಗ್ರ ಅಭಿವೃದ್ಧಿಗೂ ಶಾಶ್ವತ ಯೋಜನೆ ನೀಡಿದ್ದಾರೆ. ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಸಾಲಮನ್ನಾ, ಬೀದಿ ಬದಿ ವ್ಯಾಪಾರಿಗಳಿಗೆ ನೇರ ಸಾಲ ಸೌಲಭ್ಯ ಕಲ್ಪಿಸುವ ಬಡವರ ಬಂಧು ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ವರುಣಾ ಶಾಸಕರು ಕೂಡ ನಿಮ್ಮೊಂದಿಗೆ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮತ್ತಷ್ಟು ಯೋಜನೆಗಳನ್ನು ತರಲು ದುಡಿಯೋಣ ಎಂದು ಆರ್.ಧ್ರುವನಾರಾಯಣ್ ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ್‍ರನ್ನು ಬೆಂಬಲಿಸಿ, ಪುನರಾಯ್ಕೆ ಮಾಡಲು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಆಯಾಯ ಬೂತ್‍ಗಳ ಮಟ್ಟದಲ್ಲಿ ಖುದ್ದಾಗಿ ನಿಂತುಕೊಂಡು ಜಾಗೃತಿಯಿಂದ ಕೆಲಸ ಮಾಡಬೇಕು. ಪ್ರಚಾರದ ನೆಪದಲ್ಲಿ ಎಲ್ಲೆಡೆ ಹೋಗುವುದು ಬೇಡ. ಜನರೊಂದಿಗೆ ಇದ್ದುಕೊಂಡು ಮನವೊಲಿಸಿ. ಕಾಂಗ್ರೆಸ್‍ಗೆ ಮತ ಹಾಕಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಪುರಸಭಾ ಸದಸ್ಯ ಸಿ.ಪ್ರಕಾಶ್, ಪಪಂ ಮಾಜಿ ಅಧ್ಯಕ್ಷ ವೀರೇಶ್ ಹಾಗೂ ಹಿರಿಯ ಮುಖಂಡ ಪಿ.ಸ್ವಾಮಿನಾಥ್‍ಗೌಡ ಮಾತನಾಡಿದರು. ಜಿಪಂ ಸದಸ್ಯ ಮಂಜುನಾಥನ್, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯೆ ಸುಧಾಮಣಿ, ತಾಪಂ ಸದಸ್ಯ ರಾಮಲಿಂಗಯ್ಯ, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎನ್.ಸೋಮು, ಅಹ್ಮದ್ ಸಯೀದ್, ಬಾದಾಮಿ ಮಂಜು, ಆರ್.ನಾಗರಾಜು, ಎಸ್.ಮದನ್ ರಾಜ್, ಮಾಜಿ ಸದಸ್ಯ ರಾಘವೇಂದ್ರ, ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಕುರುಬರ ಸಂಘದ ಉಪಾಧ್ಯಕ್ಷ ಪುಳ್ಳಾರಿ ಮಾದೇಶ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್ ಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಕಗ್ಗಲೀಪುರ ಎಂ.ರಾಜು, ಮುಖಂಡರಾದ ಮಹದೇವ, ಪಿ.ಪುಟ್ಟರಾಜು, ಡಾ.ಬಿ.ಪ್ರದೀಪ, ಎ.ಜೆ.ವೆಂಕಟೇಶ್, ಮಹದೇವಮ್ಮ, ನಾಗರತ್ನಮ್ಮ, ಜಯಲಕ್ಷ್ಮಿ ಹಾಗೂ ಇನ್ನಿತರರಿದ್ದರು.

ತಿ.ನರಸೀಪುರದ ಶ್ರೀ ಚಿಕ್ಕಮ್ಮ ತಾಯಿ ಯಾತ್ರಿ ಭವನದಲ್ಲಿ ನಡೆದ ಪುರಸಭೆ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿದರು.

Translate »