ಲಂಡನ್‍ನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಫೆಲೊಷಿಪ್ ಪಡೆದ ಮೊದಲ ಭಾರತೀಯ ಟಿ.ಪಿ.ಕೈಲಾಸಂ
ಮೈಸೂರು

ಲಂಡನ್‍ನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಫೆಲೊಷಿಪ್ ಪಡೆದ ಮೊದಲ ಭಾರತೀಯ ಟಿ.ಪಿ.ಕೈಲಾಸಂ

August 5, 2019

ಮೈಸೂರು,ಆ.4(ಆರ್‍ಕೆಬಿ)-ಲಂಡನ್‍ನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಫೆಲೊಷಿಪ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಟಿ.ಪಿ.ಕೈಲಾಸಂ ಅವರದ್ದು ಎಂದು ರಂಗ ಚಿಂತಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಹೆಚ್.ಎ. ಪಾಶ್ರ್ವ ನಾಥ್ ನೆನಪಿಸಿಕೊಂಡರು. ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹೇಮಗಂಗಾ ಕಾವ್ಯ ಬಳಗದ ಆಶ್ರಯ ದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡದ ಪ್ರಹಸನ ಪಿತಾಮಹ `ಟಿ.ಪಿ.ಕೈಲಾಸಂ ಬದುಕು-ಬರಹ’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಟಿ.ಪಿ.ಕೈಲಾಸಂ ಮೂಲ ತಮಿಳುನಾಡು. ಶೇಷಾದ್ರಿ ಅಯ್ಯರ್ ಕಾಲದಲ್ಲಿ ಕೈಲಾಸಂ ವಂಶಜರು ಮೈಸೂರಿಗೆ ಬಂದರು. ಮನೆಯ ಮಾತು ತಮಿಳು. ತಂದೆ ನ್ಯಾಯಾ ಧೀಶರು. ಮೈಸೂರಿನಲ್ಲಿ ಹುಟ್ಟಿದ ಕೈಲಾಸಂ, ಹಾಸನದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಬಿಎಂಶ್ರೀ ಅವರೊಂದಿಗೆ ಹಾಸ್ಟೆಲ್‍ನಲ್ಲೂ ಇದ್ದರು ಎಂದು ಹೇಳಿದರು.

ಭೂಗರ್ಭ ವಿಜ್ಞಾನಿಯಾಗಿ ಸರ್ಕಾರಿ ಕೆಲಸ ಪಡೆದ ಕೈಲಾಸಂ, ಕೆಲ ಕಾಲದ ಬಳಿಕ ರಾಜೀನಾಮೆ ನೀಡಿ ಹೊರಬಂದು, ಬಳಗದಿಂದ ದೂರ ಉಳಿಯುತ್ತಾರೆ. ಇಂಗ್ಲಿಷ್ ನಲ್ಲಿ ಭಾರತೀಯ ಸಾಹಿತ್ಯ ಬರೆದರು. `ಸಿರಿಗನ್ನಡಂ ಗೆಲ್ಗೆÉ’ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಕೈಲಾಸಂ `ನಗೆಗನ್ನಡಂ ಗೆಲ್ಗೆ’ ಎಂದಿದ್ದರು ಎಂದು ತಿಳಿಸಿದರು.

ವಿಚಾರಗೋಷ್ಠಿಗೆ ಚಾಲನೆ ನೀಡಿ, `ಟಿ.ಪಿ.ಕೈಲಾಸಂ ರಂಗ ಸಾಹಿತ್ಯ’ ವಿಷಯ ಕುರಿತು ಮಾತನಾಡಿದ ರಂಗ ನಿರ್ದೇಶಕ ಪ್ರೊ.ಹೆಚ್.ಎಸ್.ಉಮೇಶ್, ಕೈಲಾಸಂ ಅವರನ್ನು ಬೇರೆ ಬೇರೆ ದೃಷ್ಟಿಕೋನದಿಂದ ಓದಿಕೊಳ್ಳಬೇಕು. ಅವರ ಕೃತಿಗಳನ್ನು ಓದುವ ಮುಖಾಂತರ ಅವರನ್ನು ಅರ್ಥೈಸಿಕೊಳ್ಳಬೇಕು. ಆದರೆ ಓದುಗರು ಅವರನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿಲ್ಲ ಎಂದರು. ಕನ್ನಡ ಹೇಗೆ ಆಂಗ್ಲಮಯ ವಾಗುತ್ತಿದೆ ಎಂದು ತಿಳಿದಿದ್ದರಿಂದಲೇ ಅವರು ಆಡು ಭಾಷೆಯನ್ನೇ ತಮ್ಮ ಸಾಹಿತ್ಯದಲ್ಲಿ ಬಳಕೆ ಮಾಡಿದ್ದಾರೆ ಎಂದು ತಿಳಿಸಿದರು. ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಹೇಮಗಂಗಾ ಕಾವ್ಯ ಬಳಗದ ಅಧ್ಯಕ್ಷೆ ಎ.ಹೇಮಗಂಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕವಿ ಜಯಪ್ಪ ಹೊನ್ನಾಳಿ ಉಪಸ್ಥಿತರಿದ್ದರು.

Translate »