ಚಾಮರಾಜನಗರ ನಗರಸಭೆ: ಅಧ್ಯಕ್ಷ ಸ್ಥಾನ-ಎಸ್‍ಸಿ, ಉಪಾಧ್ಯಕ್ಷ-ಸಾಮಾನ್ಯ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್, ಎಸ್‍ಡಿಪಿಐ ಕಸರತ್ತು
ಚಾಮರಾಜನಗರ

ಚಾಮರಾಜನಗರ ನಗರಸಭೆ: ಅಧ್ಯಕ್ಷ ಸ್ಥಾನ-ಎಸ್‍ಸಿ, ಉಪಾಧ್ಯಕ್ಷ-ಸಾಮಾನ್ಯ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್, ಎಸ್‍ಡಿಪಿಐ ಕಸರತ್ತು

September 5, 2018

ಚಾಮರಾಜನಗರ: ಚಾಮರಾಜ ನಗರ ನಗರಸಭೆಯ ಅಧ್ಯಕ್ಷ ಸ್ಥಾನ ಪರಿ ಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ‘ಅತಂತ್ರ’ವಾಗಿರುವ ನಗರಸಭೆಯ ಅಧಿಕಾರವನ್ನು ಯಾವ ಪಕ್ಷ ತನ್ನದಾಗಿಸಿಕೊಳ್ಳುತ್ತದೆ. ಅಧ್ಯಕ್ಷ ಯಾರಾಗುತ್ತಾರೆ? ಉಪಾಧ್ಯಕ್ಷರ್ಯಾರು? ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

31 ಸದಸ್ಯರ ಬಲವುಳ್ಳ ಇಲ್ಲಿನ ನಗರ ಸಭೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8, ಎಸ್‍ಡಿಪಿಐ 6, ಬಿಎಸ್‍ಪಿ 1, ಪಕ್ಷೇತರ 1 ಸ್ಥಾನ ಗಳಿಸಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣಾ ಸಂದರ್ಭದಲ್ಲಿ ಸ್ಥಳೀಯ ಸಂಸದರು ಹಾಗೂ ಸ್ಥಳೀಯ ಶಾಸಕರು ಮತ ಚಲಾ ಯಿಸಲು ಅರ್ಹರಾಗಿದ್ದಾರೆ. (31+2=33) ಹೀಗಾಗಿ ಅಧಿಕಾರ ಹಿಡಿಯಬೇಕಾದ ಪಕ್ಷ 17 ಸ್ಥಾನ ಗಳಿಸಬೇಕಾಗಿದೆ. ಆದರೆ ಇಷ್ಟು ಸಂಖ್ಯೆಯ ಸದಸ್ಯರನ್ನು ಯಾವುದೇ ಪಕ್ಷ ಹೊಂದಿಲ್ಲ. ಹೀಗಾಗಿ ಪಕ್ಷಗಳ ನಡುವೆ ಹೊಂದಾಣಿಕೆ ಆಗಲೇ ಬೇಕಾಗಿದೆ. ಯಾವ ಪಕ್ಷ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಯಾರು ಅಧ್ಯಕ್ಷರಾಗುತ್ತಾರೆ. ಉಪಾಧ್ಯಕ್ಷರ ಗಾದಿ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ವಿಷಯ ಈಗ ನಗರ ದಲ್ಲಿ ಪ್ರಮುಖವಾಗಿ ಚರ್ಚೆ ಆಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಯಾರು ಅರ್ಹರು: 31 ಸದಸ್ಯರ ಪೈಕಿ 8 ಸದಸ್ಯರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಕಾಂಗ್ರೆಸ್‍ನಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿರುವ ಆರ್.ಎಂ.ರಾಜಪ್ಪ, ಮಾಜಿ ಅಧ್ಯಕ್ಷೆ ಚಿನ್ನಮ್ಮ, ಹ್ಯಾಟ್ರಿಕ್ ಜಯ ಗಳಿಸಿರುವ ಆರ್.ಪಿ. ನಂಜುಂಡಸ್ವಾಮಿ, ಎಂ.ಕಲಾವತಿ, ಎರ ಡನೇ ಬಾರಿಗೆ ಆಯ್ಕೆಯಾಗಿರುವ ಎಸ್. ನೀಲಮ್ಮ, ಬಿಜೆಪಿಯಿಂದ ಎರಡನೇ ಬಾರಿಗೆ ಸದಸ್ಯರಾಗಿರುವ ರಾಮ ಸಮುದ್ರದ ಮಹದೇವಯ್ಯ, ಪ್ರಥಮ ಬಾರಿಗೆ ಸದಸ್ಯರಾಗಿರುವ ಎಂ.ಎಸ್.ಕುಮುದಾ ಕೇಶವಮೂರ್ತಿ ಅರ್ಹರಾಗಿದ್ದಾರೆ. ಎಸ್‍ಡಿಪಿಐ ನಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿರುವ ಎಂ.ಮಹೇಶ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನ: ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದ ರಿಂದ 31 ಸದಸ್ಯರೂ ಸಹ ಆ ಗಾದಿಗೆ ಅರ್ಹರಾಗಿದ್ದಾರೆ. ಆದರೆ ಯಾವ ಪಕ್ಷ ಅಧ್ಯಕ್ಷ ಗಾದಿಯನ್ನು ಅಲಂಕರಿಸುತ್ತದೆ ಎಂಬು ದರ ಮೇಲೆ ಉಪಾಧ್ಯಕ್ಷ ಸ್ಥಾನವನ್ನು ಯಾವ ಪಕ್ಷ ಮತ್ತು ಯಾರು ಅಲಂಕರಿ ಸುತ್ತಾರೆ ಎಂಬುದು ನಿರ್ಧಾರ ಆಗಲಿದೆ.

ಬಿಜೆಪಿ ಕಸರತ್ತು: 15 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನ ಹಿಡಿಯಲು ಎಲ್ಲಾ ರೀತಿಯ ಕಸರತ್ತಿನಲ್ಲಿ ತೊಡಗಿದೆ ಎನ್ನಲಾಗಿದೆ. ಇದಕ್ಕೆ ಅಗತ್ಯ ವಾಗಿ ಬೇಕಾಗಿರುವ ಇಬ್ಬರು ಸದಸ್ಯರನ್ನು ತನ್ನತ್ತ ಸೆಳೆಯಲು ಪಕ್ಷದ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಬಿಎಸ್‍ಪಿ ಸದಸ್ಯ ವಿ.ಪ್ರಕಾಶ್, ಪಕ್ಷೇತರ ಸದಸ್ಯ ಸಿ.ಎ.ಬಸವಣ್ಣ ಅವರ ಬೆಂಬಲ ಪಡೆಯಲು ಪಕ್ಷದ ನಾಯಕರು ಎಲ್ಲಾ ರೀತಿಯ ಪ್ರಯತ್ನವನ್ನೂ ಸಹ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಬಿಎಸ್‍ಪಿ ಹಾಗೂ ಪಕ್ಷೇತರ ಸದಸ್ಯ (ಇಬ್ಬರು)ರನ್ನು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ನಗರಸಭೆಯ ಅಧಿ ಕಾರ ಹಿಡಿಯುವುದು ನಿರ್ಧಾರ ಆಗಲಿದೆ.

ಬಿಜೆಪಿಯು 6 ಸ್ಥಾನ ಗಳಿಸಿರುವ ಎಸ್‍ಡಿಪಿಐನೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಒಟ್ಟಾರೆ ಬಿಜೆಪಿ ನಗರಸಭೆಯಲ್ಲಿ ‘ಕಮಲ’ ಅರಳಿಸಬೇಕಾದರೆ ತನ್ನತ್ತ ಇಬ್ಬರು ಸದಸ್ಯರನ್ನು ಸೆಳೆಯಬೇಕು. ಇಲ್ಲವೇ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಸಂದ ರ್ಭದಲ್ಲಿ ಇತರ ಪಕ್ಷದ ಇಬ್ಬರು ಸದಸ್ಯ ರನ್ನು ಗೈರು ಹಾಜರು ಮಾಡಬೇಕಾಗಿದೆ. ಈ ಪ್ರಯತ್ನವೂ ಸಹ ಸಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್ ಮೈತ್ರಿಗೆ ಒಲವು: 8 ಸ್ಥಾನ ಗಳಿಸಿ ಎರಡನೇ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಇತರ ಪಕ್ಷಗಳೊಂದಿಗೆ ಮೈತ್ರಿಗೆ ಒಲವು ತೋರಿದೆ. 6 ಸ್ಥಾನ ಗಳಿಸಿರುವ ಎಸ್‍ಡಿಪಿಐ ಹಾಗೂ ಬಿಎಸ್‍ಪಿ ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆದು ಈ ಹಿಂದಿನಂತೆ ಅಧಿಕಾರಕ್ಕೆ ಏರಲು (8+6+1+1+2=18) ಎಲ್ಲಾ ರೀತಿಯ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಈ ಪ್ರಯತ್ನದಲ್ಲಿ ಪಕ್ಷದ ನಾಯಕರು ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಸ್‍ಡಿಪಿಐ ಕಾಂಗ್ರೆಸ್‍ನೊಂದಿಗೆ ‘ಕೈ’ ಜೋಡಿಸುವುದು ಖಚಿತ ಎನ್ನಲಾಗುತ್ತಿದೆ. ಈ ವೇಳೆ ಎಸ್‍ಡಿಪಿಐ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟರೂ ಆಶ್ಚರ್ಯವಿಲ್ಲ. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದರೆ ಎಂ. ಮಹೇಶ್ ಅಧ್ಯಕ್ಷರಾಗಲಿದ್ದಾರೆ. ಎಸ್‍ಡಿಪಿಐಗೆ ಅಧ್ಯಕ್ಷ ಸ್ಥಾನ ನೀಡಲು ಒಪ್ಪದೇ ಉಪಾಧ್ಯಕ್ಷ ಸ್ಥಾನ ನೀಡಿದರೆ ಆ ಪಕ್ಷದ 6 ಸದಸ್ಯರ ಪೈಕಿ ಯಾರಾದರೂ ಉಪಾಧ್ಯಕ್ಷರಾಗಬಹುದಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದರೆ ಉಪಾಧ್ಯಕ್ಷ ಸ್ಥಾನ ಎಸ್‍ಡಿಪಿಐಗೆ ಒಲಿಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಎಸ್‍ಡಿಪಿಐ ಪಟ್ಟು ಹಿಡಿದು ಅದರಲ್ಲಿ ಯಶ ಕಂಡರೆ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಲ್ಲಿ ಯಾವ ಪಕ್ಷ ಅಧ್ಯಕ್ಷ ಸ್ಥಾನ ಅಲಂಕರಿಸುತ್ತದೆ ಎಂಬುದರ ಮೇಲೆ ಉಪಾಧ್ಯಕ್ಷ ಸ್ಥಾನಕ್ಕೆ ಏರುವ ಪಕ್ಷ ತೀರ್ಮಾನ ಆಗುತ್ತದೆ ಎಂದು ಹೇಳಲಾಗುತ್ತಿದೆ.

‘ಅತಂತ್ರ’ವಾಗಿರುವ ಚಾಮರಾಜನಗರ ನಗರಸಭೆಯ ಅಧಿಕಾರ ಹಿಡಿಯಲು ಕಾಂಗ್ರೆಸ್, ಎಸ್‍ಡಿಪಿಐ ಹಾಗೂ ಬಿಜೆಪಿಗೆ ಅವಕಾಶ ಇದೆ. ಕಾಂಗ್ರೆಸ್ ತೆಗೆದು ಕೊಳ್ಳುವ ತೀರ್ಮಾನದ ಮೇಲೆ ಎಸ್‍ಡಿಪಿಐ ಭವಿಷ್ಯ ನಿಂತಿದೆ. ಹಾಗೆಯೇ ಎಸ್‍ಡಿಪಿಐ ಬೇಡಿಕೆ ಹೇಗಿರುತ್ತದೆ ಎಂಬುದರ ಮೇಲೆ ಕಾಂಗ್ರೆಸ್ ಭವಿಷ್ಯ ನಿರ್ಧಾರ ಆಗುತ್ತದೆ. ಬಿಎಸ್‍ಪಿ ಹಾಗೂ ಪಕ್ಷೇತರ ಸದಸ್ಯರ ತೀರ್ಮಾನದ ಮೇಲೆ ಬಿಜೆಪಿ ಭವಿಷ್ಯ ಅಡ ಗಿದೆ. ಯಾವ ಪಕ್ಷ ಮತ್ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಯಾರು ಅಧ್ಯಕ್ಷ ಆಗುತ್ತಾರೆ. ಉಪಾಧ್ಯಕ್ಷರ್ಯಾರು? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Translate »