ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಮಂಡನೆಗಾಗಿ ಕರೆಯಲಾಗುವ ವಿಧಾನಸಭಾ ಅಧಿವೇಶನ ಸಂದರ್ಭದಲ್ಲೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನಿರ್ಧರಿಸಿದೆ.
ಈ ಸಂಬಂಧ ಸಮಾಲೋಚನೆ ನಡೆಸಲು ರಾಜ್ಯ ಬಿಜೆಪಿ ನಾಯಕರು ಮತ್ತು ಪ್ರಮುಖ ಶಾಸಕರು ಸಭೆ ನಡೆಸಲಿದ್ದಾರೆ. ಮತ್ತೊಮ್ಮೆ ಆಪರೇಷನ್ ಕಮಲದ ಯತ್ನ ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ಕಾರ್ಯತಂತ್ರ ಬದಲಿಸಿರುವ ಬಿಜೆಪಿ ಕೊನೆಯ ಅಸ್ತ್ರವಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದೆ. ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗಿದ್ದ ಕಾಂಗ್ರೆಸ್‍ನ ಅತೃಪ್ತ ಶಾಸಕರು ಕೊನೆ ಗಳಿಗೆಯಲ್ಲಿ ಸದಸ್ಯತ್ವ ಅನರ್ಹತೆಗೆ ಹೆದರಿ ಹಿಂದೆ ಸರಿದಿದ್ದಾರೆ. ಇದು ತಾತ್ಕಾಲಿಕ, ವಿಧಾನಸಭೆಯಲ್ಲೇ ಅವಿಶ್ವಾಸ ಮಂಡನೆ ಮಾಡುವ ಸಂದರ್ಭದಲ್ಲಿ ನಮಗೆ ಭರವಸೆ ನೀಡಿರುವ ಶಾಸಕರು ನೆರವಿಗೆ ಬರುತ್ತಾರೆ ಎಂಬ ಅಧಮ್ಯ ವಿಶ್ವಾಸದಿಂದ ಬಿ.ಎಸ್.ಯಡಿಯೂರಪ್ಪ ಅವರು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ, ಏಕಾಏಕಿ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಕೈ ಹಾಕುವುದಿಲ್ಲ. ತಾನಾಗಿಯೇ ಬಿದ್ದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾರ್ಮಿಕ ವಾಗಿ ನುಡಿದಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿ ಸರ್ಕಾರ ಇಳಿಸಿ, ಬಿಜೆಪಿಯ ಕೇಸರಿ ಆಡಳಿತ ತರಲು ಕೊನೆಯ ಅಸ್ತ್ರ ಉಳಿದಿರುವುದು ವಿಧಾನ ಸಭೆ ಅಂಗಳ. ಅಸ್ತ್ರ ಬಳಕೆಗೆ ಅಗತ್ಯವಿರುವ ಸದಸ್ಯರನ್ನು ಕಲೆ ಹಾಕಿ ವಿಧಾನಸಭೆಯಲ್ಲೇ ಸರ್ಕಾರಕ್ಕೆ ಮಣ್ಣು ಮುಕ್ಕಿಸಲು ಕಮಲ ಪಾಳೆಯದಲ್ಲಿ ಭಾರೀ ಯೋಜನೆಗಳೇ ಸಿದ್ಧಗೊಂಡಿವೆ. ಯುದ್ಧಕ್ಕೂ ಮುನ್ನ ತಮ್ಮ ಸದಸ್ಯರು ಪ್ರತಿಪಕ್ಷದ ಪಾಳೆಯದಲ್ಲಿ ಗುರುತಿಸಿಕೊಳ್ಳಬಾರದೆಂಬ ಉದ್ದೇಶದಿಂದ ರಾಜಧಾನಿ ಕಡೆ ಮುಖ ಮಾಡದಂತೆ ಎಲ್ಲಾ ಬಿಜೆಪಿ ಶಾಸಕರಿಗೂ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯ ಹೊಸ ತಂತ್ರದ ಸುಳಿವು ಪಡೆದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸವಾಲನ್ನು ಸ್ವೀಕರಿಸಲು ವಿಧಾನಮಂಡಲದ ಕಲಾಪವನ್ನು ಈ ತಿಂಗಳ ಅಂತ್ಯದಲ್ಲೇ ಕರೆಯುವ ಬಗ್ಗೆ ತೀರ್ಮಾನ ಕೈಗೊಂಡಂತಿದೆ. ಈ ಸಂಬಂಧ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿ, ಮೊದಲು ಜಂಟಿ ಅಧಿವೇಶನ ಕರೆದು ಫೆಬ್ರವರಿ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಕರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಧಿವೇಶನ ಕರೆಯುವುದಕ್ಕೂ ಮುನ್ನವೇ ಬಿಜೆಪಿ ಪಾಳೆಯದಿಂದ ಕೆಲವು ಸದಸ್ಯರನ್ನು ಸೆಳೆದುಕೊಂಡು ಅಸ್ತ್ರಕ್ಕೆ ಪ್ರತಿ ಅಸ್ತ್ರ ಸಿದ್ಧಪಡಿಸಲೂ ಜೆಡಿಎಸ್ ಸಜ್ಜಾದಂತಿದೆ.