ರಾಜ್ಯದಲ್ಲಿ ರಾಜಕೀಯ ಮೇಲಾಟ, ಜನತೆಯ ತೊಳಲಾಟ
ಮೈಸೂರು

ರಾಜ್ಯದಲ್ಲಿ ರಾಜಕೀಯ ಮೇಲಾಟ, ಜನತೆಯ ತೊಳಲಾಟ

January 20, 2019

ಬೆಂಗಳೂರು: ವಿರೋಧ ಪಕ್ಷ ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮದಲ್ಲಿನ ರೆಸಾರ್ಟ್ ನಲ್ಲಿ, ಆಡಳಿತ ಪಕ್ಷದ ಭಾಗವಾಗಿರುವ ಕಾಂಗ್ರೆಸ್ ಶಾಸಕರು ಬಿಡದಿ ರೆಸಾರ್ಟ್‍ನಲ್ಲಿ, ಇವರನ್ನೆಲ್ಲ ನಂಬಿ ಮತ ಹಾಕಿದ ಜನ ಬೀದಿ ಯಲ್ಲಿ…! ಎಲ್ಲಿಗೆ ಬಂತು ಪ್ರಜಾಪ್ರಭುತ್ವ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ ಶಾಸಕರ ಕಚ್ಚಾಟದಿಂದ ರಾಜ್ಯದ ಜನರಿಗೆ ಪೀಕಲಾಟ ಶುರು ವಾಗಿದೆ. ಆದರೆ ಅಧಿಕಾರಿಗಳಿಗೆ ಮಾತ್ರ ಹಬ್ಬದ ವಾತಾವರಣ ಉಂಟಾಗಿದೆ. ಸರ್ಕಾರ ಉರುಳಿಸುವ-ಉಳಿಸಿಕೊಳ್ಳುವ ಪ್ರಯತ್ನ ಸರ್ಕಾರ ರಚನೆಯಾದ ಏಳು ತಿಂಗಳಿ ನಿಂದಲೂ ನಡೆಯುತ್ತಿದೆ. ಇನ್ನು ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ. ಆಡಳಿತ ಪಕ್ಷದಷ್ಟೇ ಜವಾಬ್ದಾರಿ ಪ್ರತಿಪಕ್ಷಗಳಿಗೂ ಇರಬೇಕಿತ್ತು. ಆದರೆ ಆಡಳಿತ, ಪ್ರತಿಪಕ್ಷ ಗಳ ಶಾಸಕರು ವೈಭವಯುತ ರೆಸಾರ್ಟ್ ಸೇರಿಕೊಂಡಿದ್ದಾರೆ. ಎಲ್ಲರೂ ನೈತಿಕತೆಯ ಮಾತನಾಡುತ್ತಿದ್ದಾರೆ. ರೆಸಾರ್ಟ್ ರಾಜ ಕಾರಣವನ್ನು ಕಾಂಗ್ರೆಸ್, ಬಿಜೆಪಿ ಸಮರ್ಥಿಸಿ ಕೊಳ್ಳುತ್ತಿವೆ. ನಾವು ಲೋಕಸಭೆ ಚುನಾ ವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಒಂದೆಡೆ ಸೇರಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಇತ್ತ ಬಿಜೆಪಿ ನಾಯಕರ ಆಪರೇಷನ್ ಕಮಲದ ಭೀತಿಯಿಂದ ಬಿಡದಿ ರೆಸಾರ್ಟ್‍ನಲ್ಲಿ ನಾವು ಒಂದೆಡೆ ಸೇರಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿ 156 ತಾಲೂಕುಗಳಲ್ಲಿ ಬರಗಾಲವಿದೆ. ಮಡಿಕೇರಿಯಲ್ಲಿ ಭಾರೀ ಮಳೆಯಿಂದ ಕೊಚ್ಚಿ ಹೋದ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಕುಡಿಯುವ ನೀರಿನ ಬಗ್ಗೆ ಚರ್ಚೆಯಾಗಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸಬೇಕು, ಸ್ಥಳೀಯ ಶಾಸಕರು ಕ್ಷೇತ್ರದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ಕಳೆದ ಹತ್ತು ದಿನಗಳಿಂದ ಇದ್ಯಾವುದೂ ಆಗುತ್ತಿಲ್ಲ. ರೆಸಾರ್ಟ್‍ಗಳಲ್ಲಿ ಸೇರಿರುವವರು ಇದ್ಯಾವುದರ ಬಗ್ಗೆಯೂ ಚರ್ಚೆ ನಡೆಸುತ್ತಿಲ್ಲ. ಕೇವಲ ಅಧಿಕಾರಕ್ಕೋಸ್ಕರ ರಾಜಕೀಯ ನಾಟಕಗಳನ್ನು ಆಡುತ್ತಿದ್ದಾರೆ. ನಾ ಮೇಲು, ತಾ ಮೇಲು ಎಂದು ತಮ್ಮನ್ನೇ ತಾವು ವೈಭವೀಕರಿಸಿಕೊಳ್ಳುತ್ತಿದ್ದಾರೆ.

ದೀನ ದಲಿತರಿಗೆ, ಬಡವರಿಗೆ ನೆರವಾಗಬೇಕಾಗಿದ್ದ ಜನಪ್ರತಿನಿಧಿಗಳು ತಮ್ಮ ಬುದ್ಧಿಶಕ್ತಿಯನ್ನು ಬ್ಲಾಕ್‍ಮೇಲ್ ರಾಜಕಾರಣಕ್ಕೆ ಮೀಸಲಿಟ್ಟಿದ್ದಾರೆ. ಇದರಿಂದ ಪ್ರಾಮಾ ಣಿಕ ರಾಜಕಾರಣಿಗಳು, ನವ ಜನಪ್ರತಿನಿಧಿಗಳು, ಪಕ್ಷನಿಷ್ಠರು ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂದು ಯಡಿಯೂರಪ್ಪ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನ ಫಲಿಸಲು ಅವಕಾಶ ನೀಡಬಾರದೆಂದು ಜೆಡಿಎಸ್-ಕಾಂಗ್ರೆಸ್ ಮುಖಂಡರು ಪ್ರಯತ್ನ ಮುಂದುವರೆಸಿದ್ದಾರೆ. ಸಂವಿಧಾನಾತ್ಮಕವಾಗಿ ರಚನೆಯಾದ ಯಾವುದೇ ಸರ್ಕಾರವನ್ನು ಕೆಡವಬೇಕಾದರೆ ಅಥವಾ ಅಸ್ಥಿರಗೊಳಿಸಿ ಬೇರೆ ಸರ್ಕಾರ ರಚನೆ ಮಾಡಬೇಕಾದರೆ ಸ್ವಂತ ಶಕ್ತಿ ಇರಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೊರೆಯಾಗುತ್ತದೆ. ಪ್ರಸ್ತುತ, ಸಾರ್ವಜನಿಕರ ಸಮಸ್ಯೆಗಳ ಅರಿವು ಯಾವ ಪಕ್ಷದ ಜನಪ್ರತಿನಿಧಿಗಳಿಗೂ ಇದ್ದಂತಿಲ್ಲ. ದ್ವೇಷ ರಾಜಕಾರಣ, ಅಧಿಕಾರದ ಲಾಲಸೆ ಅಷ್ಟೇ ಮುಖ್ಯವಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬುದಷ್ಟೇ ಮುಖ್ಯವಾಗಿದೆ.

Translate »