ಮೈಸೂರಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಅದ್ಧೂರಿ ಬಿಡುಗಡೆ
ಮೈಸೂರು

ಮೈಸೂರಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಅದ್ಧೂರಿ ಬಿಡುಗಡೆ

January 20, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಶನಿವಾರ ಮೈಸೂರಿನಲ್ಲಿ ಅದ್ಧೂರಿ ಯಾಗಿ ನೆರವೇರಿತು.

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಬೆಳಕಿನ ಚಿತ್ತಾರದೊಂದಿಗೆ ತೆರೆ ಬೀಳುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿಂದು ನಡೆದ ಸೀತಾರಾಮ ಕಲ್ಯಾಣೋತ್ಸವ’ಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರ ತಾಯಿ ಚೆನ್ನಮ್ಮ, ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ತೋಟಗಾರಿಕೆ ಸಚಿವ ಎಂ.ಸಿ.ಮನುಗೂಳಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಸಂಸದ ಶಿವರಾಮೇಗೌಡ, ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಅಶ್ವಿನ್‍ಕುಮಾರ್, ಬೋಜೇಗೌಡ, ಮುಖಂಡ ಪ್ರೊ.ಕೆ.ಎಸ್.ರಂಗಪ್ಪ, ಜೆಡಿಎಸ್ ಯುವ ನಾಯಕ ಜಿ.ಡಿ.ಹರೀಶ್‍ಗೌಡ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಅನೇಕ ಶಾಸಕರು, ಮುಖಂಡರು, ಕಲಾವಿದರು, ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.

ಆಕರ್ಷಕ ನೃತ್ಯ, ಹೃನ್ಮನ ತಣಿಸಿದ ಸುಮಧುರ ಗಾಯನ, ಅಭಿಮಾನಿಗಳ ಹರ್ಷೋದ್ಘಾರದ ನಡುವೆ `ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತು. ದೇಶದ ಬೆನ್ನೆಲುಬು ರೈತನ ಘನತೆ, ಸಂಬಂಧಗಳ ಮೌಲ್ಯ, ಪ್ರೀತಿಯ ಸೆಳೆತ ಹೀಗೆ ಸಮಾಜಕ್ಕೆ ಸಂದೇಶ ನೀಡುವ ರೀತಿಯಲ್ಲಿರುವ ಟ್ರೇಲರ್ ವೀಕ್ಷಿಸಿದ ಜನ, ಶಿಳ್ಳೆ, ಚಪ್ಪಾಳೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಚ್‍ಡಿಕೆ ಹಾಗೂ ನಿಖಿಲ್ ಕುಮಾರ್ ಫೋಟೋಗಳನ್ನು ಪ್ರದರ್ಶಿಸಿ, ಸಂಭ್ರಮಿಸಿದರು.

ಹೆಚ್‍ಡಿಕೆ ಸ್ವಾಗತಿಸಿದ ರೈತರು: ತಮ್ಮ ಚನ್ನಾಂಬಿಕಾ ಫಿಲಂಸ್ ಮೂಲಕ ಸೀತಾರಾಮ ಕಲ್ಯಾಣ’ ಚಿತ್ರವನ್ನು ಅರ್ಪಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವರ್ಣರಂಜಿತ ವೇದಿಕೆಗೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಹಸಿರು ಶಾಲು ಹೊದ್ದ ಶ್ವೇತ ವಸ್ತ್ರಧಾರಿಗಳಾಗಿದ್ದ ಹತ್ತಾರು ರೈತರು, ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್‍ಡಿಕೆ, ಮೈಸೂರಿನ ನಜರ್‍ಬಾದ್‍ನಲ್ಲಿರುವ ಮದ್ವೇಶ ಕಾಂಪ್ಲೆಕ್ಸ್ ನ ಸಣ್ಣ ಕೊಠಡಿಯಲ್ಲಿ ಚನ್ನಾಂಬಿಕಾ ಫಿಲಂಸ್ ಆರಂಭಿಸಿದೆ. ಹಾಗಾಗಿ ಮೈಸೂರಿನೊಂದಿಗೆ ಅವಿನಾಭಾವ ಸಂಬಂಧವಿದೆ.

ಚನ್ನಾಂಬಿಕ ಫಿಲಂಸ್ ಲಾಂಛನದಲ್ಲೇ ನಿರ್ಮಿಸಿರುವಸೀತಾರಾಮ ಕಲ್ಯಾಣ’ ಚಿತ್ರ ಜ.25ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿಂದು ಇಂದು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ನಾಡಿನ ಜನರ ಆಶೀರ್ವಾದ ಈ ಚಿತ್ರದ ಮೇಲಿರಲಿ. ಕನ್ನಡ ಚಿತ್ರಗಳನ್ನು ಉಳಿಸಿ, ಬೆಳೆಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ನಿಖಿಲ್‍ನ ಮೊದಲ ಚಿತ್ರ ಜಾಗ್ವಾರ್’ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನನಗೆ ರಾಜಕೀಯ ಶಕ್ತಿ ತುಂಬಿದ ಮಂಡ್ಯದಲ್ಲಿ ನಡೆದಿತ್ತು. 2ನೇ ಚಿತ್ರಸೀತಾರಾಮ ಕಲ್ಯಾಣ’ ಚಿತ್ರದ ಕಾರ್ಯಕ್ರಮ ಸಿನಿಮಾ ವೃತ್ತಿ ಜೀವನ ಆರಂಭಿಸಿದ ಮೈಸೂರಿನಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ ಎಂದರು.

ನಟ, ನಿರೂಪಕ ಮಾಸ್ಟರ್ ಆನಂದ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾಡಿನ ರೈತ ಬಂಧುಗಳಲ್ಲಿ ಆತ್ಮವಿಶ್ವಾಸವಿರಬೇಕು. ರೈತರ ಬಗ್ಗೆ ನನ್ನಲ್ಲಿರುವ ಭಾವನೆಗಳನ್ನು ನಿಖಿಲ್ ಚಿತ್ರದಲ್ಲಿ ಪ್ರಕಟಿಸಿದ್ದಾರೆ. ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ರೈತನಿಗೆ ಆತ್ಮಸ್ಥೈರ್ಯ ತುಂಬುವಂತಹ ಹಲವು ಸನ್ನಿವೇಶಗಳಿವೆ. ರೈತರಿದ್ದರೇ ದೇಶ ಎಂಬ ಮಹತ್ವದ ಸಂದೇಶ ಸಾರುತ್ತದೆ. ಇಂದಿನ ಮೈತ್ರಿ ಸರ್ಕಾರ ರಾಜ್ಯದ ಆರೂವರೆ ಕೋಟಿ ಜನರ ಸರ್ಕಾರ. ರೈತರು, ಬಡವರ ನೆಮ್ಮದಿ, ಸ್ವಾಭಿಮಾನದ ಬದುಕಿಗಾಗಿ ಹಲವು ಕಾರ್ಯಕ್ರಮಗಳನ್ನು ತರುವ ಗುರಿ ಹೊಂದಿದ್ದೇನೆ. ತಾಯಿ ಚಾಮುಂಡೇಶ್ವರಿ, ನನ್ನ ತಾಯಿ ಚನ್ನಮ್ಮ, ನಾಡಿನ ಜನರ ಆಶೀರ್ವಾದದಿಂದ ಕೆಲಸ ಮಾಡುತ್ತೇನೆ. ನಾನು ಸಿನಿಮಾ ನಿರ್ಮಾಣಕ್ಕೆ ಗಮನ ಕೊಡಲು ಸಾಧ್ಯವಾಗಲಿಲ್ಲ.ನಿಖಿಲ್ ಒನ್ ಮ್ಯಾನ್ ಶೋ’ನಂತೆ ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಗೆ ಆಗಮಿಸಿದ ಚಿತ್ರದ ನಿರ್ಮಾಪಕಿಯೂ ಆದ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ನಿಖಿಲ್‍ನ ಮೊದಲ ಸಿನಿಮಾ ಜಾಗ್ವಾರ್’ನಲ್ಲಿ ಆತನ ಡ್ಯಾನ್ಸ್ ಮೆಚ್ಚಿ, ಆಶೀರ್ವದಿಸಿದ್ದೀರಿ. ಇದೀಗ 2ನೇ ಸಿನಿಮಾಸೀತಾರಾಮ ಕಲ್ಯಾಣ’ದಲ್ಲಿ ಡ್ಯಾನ್ಸ್, ಫೈಟ್, ಪರ್ಫಾರ್ಮೆನ್ಸ್ ಚೆನ್ನಾಗಿದೆ. ಕನ್ನಡ ಚಿತ್ರಗಳನ್ನು ಉಳಿಸಿ, ಬೆಳೆಸಬೇಕು. ಪ್ರತಿಭಾವಂತ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಜ.25ರಂದು ಚಿತ್ರ ಬಿಡುಗಡೆಯಾಗಲಿದ್ದು, ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಭರಪೂರ ಮನೋರಂಜನೆ: ಸೀತಾರಾಮ ಕಲ್ಯಾಣ’ದ ನಾಯಕಿ ರಚಿತಾರಾಮ್, ನವಿಲಿನಾಕಾರದ ಪಲ್ಲಕ್ಕಿಯಲ್ಲಿ ಬಂದು,ಏನಮ್ಮಿ ಏನಮ್ಮಿ…’ ಗೀತೆಗೆ ಹೆಜ್ಜೆ ಹಾಕಿ ರಂಜಿಸಿದರು. ರ್ಯಾಂಬೋ-2’ ಖ್ಯಾತಿಯ ಆಶಿಕಾ ರಂಗನಾಥ್ಚುಟು ಚುಟು ಅಂತೈತಿ…’ ರಾಗಿಣಿ ದ್ವಿವೇದಿಯಕ್ಕಾ ನಿನ್ ಮಗ್ಳು ಚಿಕ್ಕೋಳಾಗಲ್ವ…’ ಹಾಡಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಖ್ಯಾತ ಗಾಯಕ ವಿಜಯ ಪ್ರಕಾಶ್, ಸಂಗೀತ ರಸಧಾರೆ ಹರಿಸಿದರು. ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ…’ ಹಾಡುತ್ತಿದ್ದಂತೆ ನೆರೆದಿದ್ದವರ ಪುಳಕಿತರಾದಂತೆ ಕುಣಿದರು.ಒಳಿತು ಮಾಡು ಮನುಷ, ನೀನಿರೋದು ಮೂರು ದಿವಸ…’ ಹಾಡುವ ಮೂಲಕ ಕ್ಷಣಕಾಲ ಮಂತ್ರಮುಗ್ಧರನ್ನಾಗಿಸಿದರು. ಮುಗ್ಧತೆಯಿಂದಲೇ ಕನ್ನಡಿಗರ ಹೃದಯ ಗೆದ್ದಿರುವ ಸರಿಗಮಪ’ ಸ್ಪರ್ಧಿ ಹನುಮಂತಪ್ಪನೊಂದಿಗೆಅಳ್ಳಾಡ್ಸ್ ಅಳ್ಳಾಡ್ಸ್…’ ಹಾಡನ್ನು ಹಾಡಿ, ಕುಣಿದರು. ಸೀತಾರಾಮ ಕಲ್ಯಾಣ’ದನಿನಗೆ ರಾಜ ನಾನು, ನನಗೆ ರಾಣಿ ನೀನು…’ ಗೀತೆಯನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಹೀಗೆ ವಿಭಿನ್ನ ಶೈಲಿಯ ಹಲವು ಗೀತೆಗಳೊಂದಿಗೆ ಹಾಡಿ, ರಂಜಿಸಿದರು.

ಅಭಿನಂದನೆ: ಮಾಯಾನಗರಿಗೆ ಬಂದರೂ ತನ್ನ ಮುಗ್ಧತೆಗೆ ಘಾಸಿ ಮಾಡಿಕೊಳ್ಳದೆ, ತನ್ನಷ್ಟಕ್ಕೆ ತಾನು ಜಾನಪದ ಧ್ವನಿಯಲ್ಲಿ ಹಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ಸರಿಗಮಪ ಸ್ಪರ್ಧಿ ಹನುಮಂತಪ್ಪ ಹಾಗೂ ಕೃಷಿ ಕ್ಷೇತ್ರಕ್ಕೆ ನೆರವಾಗುವ ನಿಟ್ಟಿನಲ್ಲಿ `ಡ್ರೋಣ್’ ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿರುವ ಎನ್.ಎಂ.ಪ್ರತಾಪ್ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂಧಿಸಿದರು.

ತಂದೆಯೇ ನಿಜ ಜೀವನದ ಹೀರೋ

ಪಾರಂಪರಿಕ ಉಡುಗೆಯೊಂದಿಗೆ ವೇದಿಕೆಗೆ ಬಂದ ನಟ ನಿಖಿಲ್ ಕುಮಾರ್, ನಿನ್ನ ರಾಜ ನಾನು… ನನ್ನ ರಾಣಿ ನೀನು…’ ಗೀತೆಗೆ ಹೆಜ್ಜೆ ಹಾಕಿದರು. ಕುಮಾರಸ್ವಾಮಿ ಅವರನ್ನು ವಿಶೇಷ ವಾಗಿ ವೇದಿಕೆಗೆ ಸ್ವಾಗತಿಸಿದ್ದರಿಂದ ಬೇಸರವಾಗಿರ ಬಹುದೆಂದು ಭಾವಿಸಿ, ಈ ರೀತಿಯ ದೊಡ್ಡ ಮಟ್ಟದ ಪ್ರೆಸೆಂಟ್‍ನಿಂದ ತಂದೆಯವರಿಗೆ ಬೇಸರವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು. ಆಗ ಕುಮಾರಸ್ವಾಮಿ ಅವರು ಕುಳಿತಲ್ಲೇ ಕೈಸನ್ನೆ ಯಲ್ಲಿ ಬೇಸರವಾಗಿಲ್ಲ ಎಂದು ಪ್ರತಿಕ್ರಿಯಿಸಿದರು. ನಾನು ಏನೇ ಮಾಡಿದರೂ ತಂದೆಯೊಂದಿಗೆ ಚರ್ಚೆ ಮಾಡಿ, ನಿರ್ಧಾರಕ್ಕೆ ಬರುತ್ತೇನೆ. ಚಿತ್ರದ ಕತೆ ಆಯ್ಕೆಯಲ್ಲೂ ಅವರೊಂದಿಗೆ ಚರ್ಚಿಸಿದ್ದೆ. ದಶಕದಿಂದ ಸಾಮಾಜಿಕ ಮೌಲ್ಯವುಳ್ಳ ಚಿತ್ರಗಳು ಹೆಚ್ಚಾಗಿ ಬಂದಿಲ್ಲ. ಹಾಗಾಗಿಸೀತಾರಾಮ ಕಲ್ಯಾಣ’ ವನ್ನು ನಿರ್ದೇಶಕ ಹರ್ಷ ಅವರೊಂದಿಗೆ ಸೇರಿ ಉತ್ತಮವಾಗಿ ನಿರ್ಮಿಸಿದ್ದೇವೆ. ಪರಭಾಷಾ ಚಿತ್ರಗಳಿಗಿಂತ ಕನ್ನಡ ಚಿತ್ರಗಳು ಕಡಿಮೆಯೇನಲ್ಲ. ನಮ್ಮ ತಂದೆ ಆಕಸ್ಮಿಕವಾಗಿ ಸಿಎಂ ಆಗಿದ್ದ ಸಂದರ್ಭಕ್ಕೂ, ಪ್ರಸ್ತುತಕ್ಕೂ ವ್ಯತ್ಯಾಸವಿದೆ. ಅವರ ಅನುಭವ, ರೈತರು, ಬಡವರ ಬಗ್ಗೆ ಅವರಲ್ಲಿರುವ ವಿಷನ್ ನೋಡಿದರೆ ಹೆಮ್ಮೆಯಾಗುತ್ತದೆ. ಸ್ವಾರ್ಥ ಕ್ಕಾಗಿ ಅಲ್ಲ ಜನರ ಒಳಿತಿಗಾಗಿ ಅವರು 5 ವರ್ಷ ಮುಖ್ಯಮಂತ್ರಿಯಾಗಿರಬೇಕು. ನನ್ನ ಜೀವನದ ನಿಜವಾದ ಹೀರೋ, ನನ್ನ ಪಾಲಿನ ದೇವರು ನಮ್ಮಪ್ಪ ಎಂದು ಹೇಳಿದರು.

Translate »