ಎಸ್.ಎಲ್.ಭೈರಪ್ಪ ಅವರು ಕುಮಾರವ್ಯಾಸ, ವಾಲ್ಮೀಕಿ ಸಮನಾದ ಖ್ಯಾತನಾಮರು
ಮೈಸೂರು

ಎಸ್.ಎಲ್.ಭೈರಪ್ಪ ಅವರು ಕುಮಾರವ್ಯಾಸ, ವಾಲ್ಮೀಕಿ ಸಮನಾದ ಖ್ಯಾತನಾಮರು

January 20, 2019

ಮೈಸೂರು: ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ `ವಂಶ ವೃಕ್ಷ’ ಸೇರಿದಂತೆ ಹಲವು ಕಾದಂಬರಿಗಳು ಮರೆಯಾಗುತ್ತಿದ್ದ ಭಾರತೀಯರ ಅಸ್ಮಿತೆಯನ್ನು ಎತ್ತಿಹಿಡಿದು, ಕ್ರಾಂತಿಯನ್ನೇ ಉಂಟು ಮಾಡಿವೆ. ಕುಮಾರವ್ಯಾಸ ಹಾಗೂ ವಾಲ್ಮೀಕಿಯವರಿಗೆ ಸಮನಾದ ಖ್ಯಾತನಾಮವನ್ನು ಭೈರಪ್ಪ ಹೊಂದಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಮಾನ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ 2 ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಬ್ರಿಟಿಷ್ ಭಾರತದಲ್ಲಿ ಭಾರತೀಯರ ಅಸ್ಮಿತೆ ಮರೆಯಾಗಿದ್ದ ಸಂದರ್ಭ ದಲ್ಲಿ ಅನೇಕ ಸಾಹಿತಿಗಳು ತಮ್ಮ ಬರ ವಣಿಗೆಯಲ್ಲಿ ಭಾರತೀಯರಲ್ಲಿ ಉಂಟಾದ ಕೀಳರಿಮೆಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಅದೇ ರೀತಿ ಕನ್ನಡದಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪ ಅವರವಂಶವೃಕ್ಷ’ ಸೇರಿದಂತೆ ಇನ್ನಿತರೆ ಕಾದಂಬರಿಗಳು ಭಾರತೀಯರ ಅಸ್ಮಿತೆ ಎತ್ತಿ ಹಿಡಿದಿವೆ ಎಂದು ನುಡಿದರು. ಮೆಕಾಲೆ ಭಾರತಕ್ಕೆ ಬಂದ ಕೂಡಲೇ ಭಾರತೀಯರಿಗೆ ಯಾವ ಮಾದರಿ ಶಿಕ್ಷಣ ನೀಡಬೇಕೆಂದು ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಸಮಿತಿಗೆ ನಾಲ್ವರು ಬ್ರಿಟಿಷ್ ಸದಸ್ಯರೊಂದಿಗೆ ರಾಜಾರಾಮ್ ಮೋಹನ್‍ರಾಯ್ ಒಳಗೊಂಡಂತೆ ನಾಲ್ವರು ಭಾರತೀಯರನ್ನೂ ಸದಸ್ಯರಾಗಿ ನೇಮಿಸಲಾಗುತ್ತದೆ. ಬ್ರಿಟಿಷ್ ಸದಸ್ಯರು ಭಾರತೀಯರಿಗೆ ಭಾರತೀಯ ಮಾದರಿ ಶಿಕ್ಷಣ ನೀಡಬೇಕೆಂದು ಅಭಿಪ್ರಾಯಪಟ್ಟರೆ, ರಾಜಾರಾಮ್ ಮೋಹನ್‍ರಾಯ್ ನೇತೃತ್ವದ ಭಾರತೀಯ ಸದಸ್ಯರು ಇಂಗ್ಲಿಷ್ ಮಾದರಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸುತ್ತಾರೆ. ಅಂತಿಮವಾಗಿ ರಾಜಾರಾಮ್ ಮೋಹನ್‍ರಾಯ್ ಅವರ ಒತ್ತಾಯಕ್ಕೆ ಮಣಿದ ಮೆಕಾಲೆ ಇಂಗ್ಲಿಷ್ ಮಾದರಿ ಶಿಕ್ಷಣವನ್ನು ಎಲ್ಲಾ ಭಾರತೀಯರಿಗೂ ನೀಡಲು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಹಳ್ಳಿಗೊಬ್ಬ ಇರುತ್ತಿದ್ದ ಬ್ರಾಹ್ಮಣ ಮಾತ್ರ ವಿದ್ಯಾವಂತನಾಗಿದ್ದ ಅಂದು ಬ್ರಿಟಿಷರು ಎಲ್ಲರಿಗೂ ಶಿಕ್ಷಣ ಕೊಡುತ್ತೇವೆ ಎಂದಾಗ ಇಡೀ ಭಾರತದಲ್ಲಿ ರೋಮಾಂಚನಕಾರಿ ವಾತಾವರಣ ಉಂಟಾಯಿತು. ಬ್ರಿಟಿಷರ ಒಂದೊಂದು ಚಟುವಟಿಕೆಯೂ ಭಾರತೀಯರನ್ನು ಚಕಿತಗೊಳಿಸಿತು. ಸಂಸ್ಕೃತದಲ್ಲಿ ಇರುವುದೆಲ್ಲ ಮೌಢ್ಯ ಎಂದು ಬ್ರಿಟಿಷರು ಟೀಕಿಸಿದರೆ ನಮ್ಮವರು ಹೌದು ಸ್ವಾಮಿ’ ಎನ್ನುವಂತಾಯಿತು. ಇದೇ ಪರಿಪಾಠ ಮುಂದುವರೆದು ಭಾರತೀಯರ ಅಸ್ಮಿತೆಯೇ ಮರೆಯಾಗುವ ಆತಂಕ ಎದುರಾಯಿತು. ಇದನ್ನು ಕಂಡು ಅಂದಿನ ನಮ್ಮ ಸಾಹಿತಿಗಳು ನಮ್ಮಲ್ಲಿ ಉಂಟಾಗಿದ್ದ ಕೀಳರಿಮೆಯನ್ನು ತಮ್ಮ ಸಾಹಿತ್ಯದ ಮೂಲಕ ಅಭಿವ್ಯಕ್ತಿಗೊಳಿಸಿ, ಎಷ್ಟರ ಮಟ್ಟಿಗೆ ಪಶ್ಚಿಮದ ಪ್ರಭಾವಕ್ಕೆ ಮರುಳಾದೆವು ಎಂಬುದನ್ನು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು. ಬ್ರಿಟಿಷ್ ಭಾರತದಲ್ಲಿ ಬೈಬಲ್ ಅನ್ನು ದೇಶ ಭಾಷೆಗಳಿಗೆ ಅನುವಾದಿಸಿ ಹಂಚಲಾಗುತ್ತಿತ್ತು. ಅವರ ಪ್ರಕಾರ ಮೂಲಕ್ಕೆ ಸಮೀಪವಿರುವ ಅನುವಾದವೇ ಉತ್ತಮ ಅನುವಾದ ಎನ್ನುವ ಪರಿಕಲ್ಪನೆ ಇತ್ತು. ಆದರೆ ಭಾರತೀಯರ ನೆಲಗಟ್ಟಿನಲ್ಲಿ ಯಾವುದೇ ಕಥೆಯಾದರೂ ಅದನ್ನು ಸ್ಥಳ, ಸನ್ನಿವೇಶ ಹಾಗೂ ಕಾಲಮಾನಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳುವುದೇ ಉತ್ತಮ ಅನುವಾದ ಎಂಬುದಾಗಿತ್ತು. ಹೀಗಾಗಿ ಕುವೆಂಪು ಅವರು ತಮ್ಮರಾಮಾಯಣ ದರ್ಶನಂ’ನಲ್ಲಿ ಅನೇಕ ಪ್ರಸಂಗಗಳನ್ನು ಬದಲಾಯಿಸಿದ್ದಾರೆ.

ಅದೇ ರೀತಿ ಭೈರಪ್ಪನವರು ತಮ್ಮ ಪರ್ವ’ ಕಾದಂಬರಿಯಲ್ಲಿ ಮಹಾಭಾರತದ ಮೂಲ ಕಥೆಯನ್ನು ವೈಜ್ಞಾನಿಕ ಚಿಂತನೆಗೆ ಅನುಗುಣವಾಗಿ ಬದಲಾವಣೆ ಮಾಡಿದ್ದಾರೆ. ಮೂಲಮಹಾಭಾರತ’ ಯುದ್ಧವೇ ಸರಿ ಎಂದು ಪ್ರತಿಪಾದಿಸಿದರೆ `ಪರ್ವ’ ಯುದ್ಧದಿಂದ ಹಾನಿ ಎಂಬ ಸಂದೇಶ ಸಾರುತ್ತದೆ. ಯುದ್ಧದಿಂದ ವಿಧವೆಯಾದವರು ಅರಮನೆಗೆ ನುಗ್ಗಿ ದಾಂಧಲೆ ಮಾಡಿದ ಪ್ರಸಂಗವನ್ನು ರೋಚಕವಾಗಿ ಪರ್ವದಲ್ಲಿ ಚಿತ್ರಿಸಿದ್ದು, ಯುದ್ಧದ ಚಾಳಿ ಇರುವವರು ಈ ಕಾದಂಬರಿ ಓದಿದರೆ ನಿಜಕ್ಕೂ ಪರಿವರ್ತನೆ ಆಗಲಿದ್ದಾರೆ. ಹೀಗಾಗಿ ಈ ಕಾದಂಬರಿ ನನ್ನನ್ನು ಹೆಚ್ಚು ಕಾಡಿದೆ ಎಂದು ನುಡಿದರು.

ವಂಶವೃಕ್ಷ’ ಸಿನಿಮಾ ಮಾಡುವಾಗ ಅದರ ಟೈಟಲ್ ಹಾಡು ಬರೆಯುವ ಅವಕಾಶ ನನಗೆ ಲಭಿಸಿತು. ಭಾರತೀಯರ ಅಸ್ಮಿತೆಯನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸುವಲ್ಲಿ ಅಗ್ರಸ್ಥಾನದಲ್ಲಿರುವ ಕಾದಂಬರಿವಂಶವೃಕ್ಷ’. ಸಾಹಿತ್ಯದಲ್ಲಿ ಛಂದಸ್ಸು ಸೇರಿದಂತೆ ಸಿದ್ಧಸೂತ್ರಗಳನ್ನು ಮೀರಿ ಜನರ ಮನಸ್ಸಿಗೆ ಮುಟ್ಟುವಂತಹ ಸಾಹಿತ್ಯ ಕೃಷಿಯನ್ನು ಭೈರಪ್ಪನವರು ಮಾಡಿದ್ದು, ರವೀಂದ್ರನಾಥ ಟ್ಯಾಗೋರ್ ಅವರು ನೊಬೆಲ್ ಪ್ರಶಸ್ತಿ ಪಡೆದು ಖ್ಯಾತನಾಮರಾಗಿದ್ದರೆ, ಅಂತಹ ಪ್ರಶಸ್ತಿ ಇಲ್ಲದಿದ್ದರೂ ಭೈರಪ್ಪನವರು ದೇಶದ ತುಂಬ ಪ್ರಸಿದ್ಧಿ ಪಡೆದಿದ್ದಾರೆ. ಭಾರತದ ಹಲವು ಭಾಷೆಗಳಿಗೆ ಅವರ ಸಾಹಿತ್ಯ ಅನುವಾದಗೊಂಡಿವೆ ಎಂದು ಹೇಳಿದರು.

ಭೈರಪ್ಪರಲ್ಲಿನ ವೈವಿಧ್ಯ ಕುಮಾರವ್ಯಾಸನಲ್ಲೂ ಇಲ್ಲ: ಭಾರತೀಯ ಸಾಹಿತ್ಯದ ಮುಖ್ಯ ಪ್ರಾಕಾರ ಕಥನವಾಗಿದ್ದು, ಇಂತಹ ಕಥನ ಪ್ರಕಾರದಲ್ಲೂ ವೈವಿಧ್ಯ ವಿಧಾನಗಳ ಸೃಷ್ಟಿಯನ್ನು ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯದಲ್ಲಿ ಕಾಣಬಹುದು. ಭೈರಪ್ಪರ ಒಂದೊಂದು ಕಾದಂಬರಿಯಲ್ಲಿ ಒಂದೊಂದು ಕಥನದ ವಿಧಗಳು ಅನಾವರಣಗೊಂಡಿವೆ. ಇಂತಹ ವೈವಿಧ್ಯತೆಯನ್ನು ಕುಮಾರವ್ಯಾಸನಲ್ಲೂ ಕಾಣಲಾಗದು. ಕುಮಾರವ್ಯಾಸ ಹಾಗೂ ವಾಲ್ಮೀಕಿಯವರ ಸಮನಾದ ಖ್ಯಾತನಾಮವನ್ನು ಭೈರಪ್ಪ ಹೊಂದಿದ್ದಾರೆ. ಯಾವುದೇ ವಿಷಯ ಮಂಡನೆಯಾದರೂ ಭೈರಪ್ಪನವರಷ್ಟು ನಿಖರವಾಗಿ ಮಂಡಿಸಲು ನನ್ನಿಂದ ಸಾಧ್ಯವಿಲ್ಲ. ಈ ಕಾರಣಕ್ಕೆ ಅವರ ಎದುರು ಮಾತನಾಡಲು ನಿಜಕ್ಕೂ ನನಗೆ ಭಯವಿದೆ. ಈ ಹಿಂದೆ ತಮ್ಮ ವಿಚಾರಧಾರೆ ಮೂಲಕ ಭೈರಪ್ಪನವರು ನವ್ಯರನ್ನು ಸಮರ್ಥವಾಗಿ ಎದುರಿಸಿದ್ದರು. ಇದು ಸಾಮಾನ್ಯ ಸಂಗತಿಯಲ್ಲ ಎಂದು ತಿಳಿಸಿದರು. ಅತ್ಯಂತ ಗೌರವ ಭಾವನೆಯನ್ನು ಭೈರಪ್ಪರಲ್ಲಿ ನಾನು ಇರಿಸಿಕೊಂಡಿದ್ದು, ಅನೇಕ ಸಂದರ್ಭದಲ್ಲಿ ನನಗೆ ಅವರು ನೆರವಾಗಿದ್ದಾರೆ. ನಾನು ಹಂಪಿ ವಿವಿ ಕುಲಪತಿಯಾಗಿದ್ದ ವೇಳೆ ಪ್ರವಾಹಕ್ಕೆ ಸಿಲುಕಿ ವಿವಿ ಗ್ರಂಥಾಲಯದಲ್ಲಿನ ಗ್ರಂಥಗಳು ಹಾನಿಗೊಳಗಾಗಿದ್ದ ಸಂದರ್ಭದಲ್ಲಿ ವಿವಿಗೆ ಧಾವಿಸಿದ್ದ ಭೈರಪ್ಪ, 8 ದಿನಗಳ ಕಾಲ ನಮ್ಮೊಂದಿಗೆ ಇದ್ದು ಗ್ರಂಥಗಳ ಸಂರಕ್ಷಣೆ ಕಾರ್ಯದಲ್ಲಿ ನೆರವಾದರು ಎಂದು ಸ್ಮರಿಸಿದರು. ಹಿರಿಯ ಸಾಹಿತಿ ಡಾ.ಎಸ್.ಎಲ್.ಭೃರಪ್ಪ ಉಪಸ್ಥಿತರಿದ್ದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್, ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್, ಪುಣೆ ಮೂಲದ ಲೇಖಕಿ ಶೆಫಾಲಿ ವೈದ್ಯ, ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಪ್ರೊ.ಎಂ.ಕೃಷ್ಣೇಗೌಡ, ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಿ.ಎಲ್.ಶೇಖರ್ ಸೇರಿದಂತೆ ಗಣ್ಯರು, ಭೈರಪ್ಪನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »