ಬಿಜೆಪಿ ಕಾರ್ಯಕರ್ತನ ಹತ್ಯೆ ಆರೋಪಿ ಬಂಧನ
ಕೊಡಗು

ಬಿಜೆಪಿ ಕಾರ್ಯಕರ್ತನ ಹತ್ಯೆ ಆರೋಪಿ ಬಂಧನ

October 3, 2018

ಮಡಿಕೇರಿ:  ಮರಗೋಡು ನಿವಾಸಿ, ಸ್ಥಳೀಯ ಬಿಜೆಪಿ ಮುಖಂಡ ಕಾನಡ್ಕ ತಿಲಕ್‍ರಾಜ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪದ ಅಡಿಯಲ್ಲಿ ಮರಗೋಡು ಗ್ರಾಪಂ ಸದಸ್ಯ ಮುಂಡೋಡಿ ನಂದಾ ನಾಣಯ್ಯನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ರಿವಾಲ್ವರ್, ಜೀವಂತ ಗುಂಡುಗಳು, ಡಸ್ಟರ್ ಕಾರು ಮತ್ತು ಬೈಕ್‍ನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆ ಪ್ರಕರಣದ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಅವರು, 2 ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಜಿಲ್ಲಾ ಅಪರಾಧ ಪತ್ತೆದಳ ಮತ್ತು ಗ್ರಾಮಾಂತರ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಸಂದರ್ಭ ನಂದಾನಾಣಯ್ಯ, ಕೃತ್ಯಕ್ಕೆ ಬಳಸಿದ್ದ ಡಸ್ಟರ್ ವಾಹನವನ್ನು ತನ್ನ ಮನೆಯಲ್ಲಿ ನಿಲ್ಲಿಸಿ, ಬೈಕ್‍ನಲ್ಲಿ ರಿವಾಲ್ವರ್ ಮತ್ತು ಜೀವಂತ ಗುಂಡುಗಳ ಸಹಿತ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಪೊಲೀಸರು ತಕ್ಷಣವೇ ದಾಳಿ ನಡೆಸಿ ಆರೋಪಿ ನಂದಾ ನಾಣಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂ ದಷ್ಟೇ ತಿಳಿದು ಬರಬೇಕಿದ್ದು, ರಾಜಕೀಯ ದ್ವೇಷವೆ ಕೊಲೆಗೆ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿದೆ.

ಡಿವೈಎಸ್‍ಪಿ ಸುಂದರ್ ರಾಜ್ ನೇತೃತ್ವದಲ್ಲಿ ನಡೆಸಲಾದ ದಾಳಿಯ ಸಂದರ್ಭ ಮಡಿಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಎಂ.ಎಂ.ಭರತ್, ಪೊಲೀಸ್ ಉಪ ಅಧೀಕ್ಷಕ ಚೇತನ್, ಎಎಸ್‍ಐ ರಾಜು ಸಿಬ್ಬಂದಿಗಳಾದ ಕಿರಣ್, ಇಬ್ರಾಹಿಂ, ಸತೀಶ್, ಹನೀಫ್, ಶಿವರಾಜೇಗೌಡ ಹಾಗೂ ಚಾಲಕರಾದ ಮೋಹನ ಮತ್ತು ಅರುಣ ಪಾಲ್ಗೊಂಡಿದ್ದರು.

ಹತ್ಯೆಯ ಹಿನ್ನಲೆ: ಮೂಲತಃ ಮಾಲ್ದಾರೆ ನಿವಾಸಿಯಾದ ಮುಂಡೋಡಿ ನಂದಾ ನಾಣಯ್ಯ 15 ವರ್ಷಗಳ ಹಿಂದೆ ಮರ ಗೋಡು ಗ್ರಾಮಕ್ಕೆ ಬಂದು ನೆಲೆಸಿದ್ದ ಎನ್ನಲಾಗುತ್ತಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ನಂದಾ ನಾಣಯ್ಯ ಈ ಹಿಂದೆ ನಡೆದ ಮರಗೋಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ 17 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ. ಇದೀಗ ಹತ್ಯೆಯಾದ ಕಾನಡ್ಕ ತಿಲಕ್‍ರಾಜ್ ನಂದಾನಾಣಯ್ಯನಿಗೆ ಪ್ರತಿಸ್ಪರ್ಧಿಯಾಗಿ ಚುನಾವಣೆ ಎದುರಿಸಿ ಪರಾಭವಗೊಂಡಿದ್ದರು.

ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿತ ಅಭ್ಯರ್ಥಿ ತಿಲಕ್‍ರಾಜ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಂದಾ ನಾಣಯ್ಯ ನಡುವೆ ಪರಸ್ಪರ ವೈರತ್ವ ಪ್ರಾರಂಭವಾಗಿತ್ತು ಎನ್ನಲಾಗಿದೆ. ಮಾತಿನ ಚಕಮಕಿ ಹಾಗೂ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯದ ವೈರತ್ವವನ್ನು ಸ್ಥಳೀಯರೇ ಸಂಧಾನಪಡಿಸಿದ್ದರು ಎನ್ನಲಾಗಿದೆ. ಆ ಬಳಿಕ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭವೂ ಇವರಿಬ್ಬರ ರಾಜಕೀಯ ದ್ವೇಷ ಸ್ಪೋಟಗೊಂಡಿತ್ತು ಎಂದು ಮರಗೋಡು ಗ್ರಾಮಸ್ಥರು ಹೇಳುತ್ತಾರೆ.

ಅ.1ರಂದು ಸಂಜೆ 6.30ಗಂಟೆಗೆ ಮರಗೋಡು ವಿಜಯ ಬ್ಯಾಂಕ್ ಎದುರಿನ ಹೋಟೆಲ್‍ಗೆ ಎಂದಿನಂತೆ ಸ್ನೇಹಿತರನ್ನು ಭೇಟಿಯಾಗಲು ಬಂದ ತಿಲಕ್‍ರಾಜ್ ಅವರನ್ನು ಕಂಡ ನಂದಾನಾಣಯ್ಯ, ತನ್ನ ಬಗ್ಗೆ ಆರೋಪ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾನೆ. ಈ ಸಂದರ್ಭ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣವೇ ನಂದಾ ನಾಣಯ್ಯ ಜೇಬಿನಿಂದ ಪಿಸ್ತೂಲ್ ಹೊರ ತೆಗೆದು ತಿಲಕ್‍ರಾಜ್‍ನ ಎದೆಯ ಭಾಗಕ್ಕೆ ಗುಂಡಿಕ್ಕಿದ್ದಾನೆ. ಗುಂಡೇಟು ತಿಂದ ತಿಲಕ್‍ರಾಜ್ ಎದೆ ಹಿಡಿದುಕೊಂಡು ಹೋಟೆಲ್ ಒಳಗೆ ಓಡಿ ನೆಲಕ್ಕೆ ಬಿದ್ದಿದ್ದಾರೆ. ಹೊಟೇಲ್‍ನಲ್ಲಿದ್ದವರು ತಿಲಕ್‍ರಾಜ್‍ಗೆ ನೀರು ಕುಡಿಸಿ ಜೀಪಿನಲ್ಲಿ ಮಡಿಕೇರಿ ಜಿಲ್ಲಾ ಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ತಿಲಕ್ ರಾಜ್ ಮೃತಪಟ್ಟಿದ್ದಾರೆ. ಹತ್ಯೆ ಘಟನೆಗೂ ಮುನ್ನ ನಡೆದ ದೃಶ್ಯಗಳೆಲ್ಲವೂ ಮರಗೋಡು ಜಂಕ್ಷನ್‍ನ ಹೊಟೇಲ್ ಒಂದರ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಹತ್ಯೆಗೀಡಾದ ತಿಲಕ್‍ರಾಜ್ ಅವರ ಮೃತ ದೇಹವನ್ನು ಅಕ್ಟೋಬರ್ 2ರಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಯಿತು.

ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಬಿಜೆಪಿ ಮುಖಂಡ ತಳೂರು ಕಿಶೋರ್ ಕುಮಾರ್ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತರ ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಮೃತ ತಿಲಕ್‍ರಾಜ್ ಅವರ ಪತ್ನಿ, ಮಕ್ಕಳು ಸಹಿತ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Translate »