ಹಾಸನ: ಪೆಟ್ರೋಲ್-ಡೀಸೆಲ್ ಬೆಲೆ ಇಳಿಮುಖವಾಗಿದ್ದರೂ ಕರ್ನಾಟಕದ ಸಮಿಶ್ರ ಸರ್ಕಾರ ತೆರಿಗೆ ಏರಿಕೆ ಮಾಡಿ ರಾಜ್ಯದಲ್ಲಿ ದರ ಏರಿಸಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಡೀಸೆಲ್ ದರ ಇಳಿಮುಖ ವಾಗುವ ಮೂಲಕ ವಾಹನ ಸವಾರರಿಗೆ ತುಸು ನಿರಾಳ ಉಂಟಾಗುತ್ತಿರುವ ಹೊತ್ತಿ ನಲ್ಲಿ ಪೆಟ್ರೋಲ್ ಡೀಸೆಲ್ ಮೇಲೆ ಕರ್ನಾ ಟಕದ ಸಮಿಶ್ರ ಸರ್ಕಾರ ತೆರಿಗೆ ಏರಿಕೆ ಮಾಡಿ ರುವುದು ಸಾಮಾನ್ಯ ಜನರಿಗೆ ಅನಾನು ಕೂಲವಾಗಿದೆ. ಇದರಿಂದ ಹೆಚ್ಚಿಗೆ ಬೆಲೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ಪೆಟ್ರೋಲ್ ಮತ್ತು ಡೀಸೆಲ್ ಪ್ರತೀ ಲೀಟರ್‍ಗೆ 2 ರೂ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಮೇಲಿನ ಶೇ. 21 ರಿಂದ 32ಕ್ಕೆ, ಡೀಸೆಲ್ ಮೇಲೆ ಶೇ. 17.73 ರಿಂದ 28.75ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ತಿಂಗಳಿನಿಂದ ಇಳಿ ದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಹೆಚ್ಚಳವಾಗಿದ್ದು, ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಇಂಧನ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ವನ್ನು ದೂಷಿಸಿ ಭಾರತ್ ಬಂದ್ ಮಾಡಿದ್ದ ಕಾಂಗ್ರೆಸ್ ನಾಯಕರ ಬಾಯಿಯೇ ಈಗ ಬಂದ್ ಆಗಿದೆ. ತಮ್ಮದೇ ಸರ್ಕಾರದಲ್ಲಿ ತೆರಿಗೆ ಹೆಚ್ಚಳ ಮಾಡಿದ ಮುಖ್ಯಮಂತ್ರಿಯ ತೀರ್ಮಾನವನ್ನು ಬೆಂಬಲಿಸುತ್ತಿದ್ದಾರೆ. ರಾಜ್ಯ ಸರ್ಕಾರವೇ ಇಂಧನ ದರ ಹೆಚ್ಚಳಕ್ಕೆ ಕಾರಣ ವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ಪುಟ್ಟರಂಗಶೆಟ್ಟಿ ವಜಾಕ್ಕೆ ಆಗ್ರಹ: ವಿಧಾನ ಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಸಿಬ್ಬಂದಿಯ ಬಳಿ 25.76 ಲಕ್ಷ ರೂ ನಗದು ಪತ್ತೆಯಾಗಿದೆ. ಈ ಪ್ರಕರಣ ದಿಂದ ಶಕ್ತಿ ಸೌಧವು ದುರ್ಬಳಕೆ ಆಗುತ್ತಿದೆ ಎಂಬುದು ಸಾಬೀತಾಗಿದೆ. ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನವೀಲೆ ಅಣ್ಣಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ಎಸ್.ಡಿ. ಚಂದ್ರು, ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಸುಶೀಲ ಅಣ್ಣಪ್ಪ ಇತರರು ಪಾಲ್ಗೊಂಡಿದ್ದರು.