ಸಿಎಂ ಹೆಚ್‍ಡಿಕೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಹಾಸನ

ಸಿಎಂ ಹೆಚ್‍ಡಿಕೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

July 10, 2019

ಹಾಸನ, ಜು.9- ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೊದಲಿಗೆ ನಗರದಲ್ಲಿನ ಹೇಮಾವತಿ ಪ್ರತಿಮೆ ಎದುರು ಜಮಾವಣೆಗೊಂಡ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು, ರಾಜ್ಯದಲ್ಲಿನ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಇಲ್ಲದಿದ್ದರೂ ಭಂಡತನದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಮಾರಸ್ವಾಮಿ ಕುಳಿತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಆ ಸ್ಥಾನದ ಗೌರವ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದೂ ಮನವಿ ಮಾಡಿದರು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗೊಂದಲದಲ್ಲಿಯೇ ಆಡಳಿತ ನಡೆಸುತ್ತಿದೆ. ಸಚಿವರು ಜನಪರ ಕಾರ್ಯ ನಿರ್ವಹಿಸುವ ಬದಲು ಖಾತೆ ಹಂಚಿಕೆ ಗೊಂದಲದಲ್ಲೇ ಇದ್ದಾರೆ. ಸ್ವಂತದ ಸಮಸ್ಯೆ ಬಗೆಹರಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ರೈತ ಮೋರ್ಚಾ ಉಪಾಧ್ಯಕ್ಷ ರೇಣುಕುಮಾರ್, ವಕ್ತಾರ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ಶ್ರವಣಬೆಳಗೊಳ ಮಂಡಲ ಅಧ್ಯಕ್ಷÀ ಶಿವನಂಜೇಗೌಡ, ಆಲೂರು ಮಂಡಲ ಅಧ್ಯಕ್ಷ ಕದಾಳ್ ಲೋಕೇಶ್ ಮತ್ತಿತರ ಪದಾಧಿಕಾರಿಗಳು, ಹಾಸನ ನಗರಸಭೆ, ಜಿಪಂ ಸದಸ್ಯರು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು

Translate »