ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧ
ಹಾಸನ

ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧ

August 11, 2018

ಹಾಸನ: ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧರಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಗ್ಯದ ದೃಷ್ಟಿಯಿಂದ ಆಪರೇಷನ್ ಕಮಲ ಮಾಡಲು ನಾವು ಸಿದ್ಧರಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಆಪರೇಷನ್ ಕಮಲ ಮಾಡಿದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು ಎಂದು ನಾವೇ ಪಕ್ಷಕ್ಕೆ ಬರುವುದನ್ನು ತಡೆದಿದ್ದೇವೆ ಎಂದು ವಿಪಕ್ಷದ ಹೇಳಿಕೆಗೆ ತಿರುಗೇಟು ನೀಡಿದರು.

ಕಳೆದ ಆರು ತಿಂಗಳ ಹಿಂದೆ ಬೆಳಗಾವಿಯ ಕೆಶಿಪ್ ಕಚೇರಿಯಲ್ಲಿ ನಡೆಯುತ್ತಿರುವ ಕೆಲಸಗಳು ಪೂರ್ಣಗೊಂಡಿದ್ದು, ಆ ಹಿನ್ನೆಲೆಯಲ್ಲಿ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ಆದೇಶ ಮಾಡಲಾಗಿದೆ. ಯಾವ ದಾಖಲೆ ಇಲ್ಲದೆ ಯಾರೂ ಕೂಡ ಮಾತನಾಡಬಾರದು ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ನಾನು ಸಚಿವನಾದ ನಂತರ ಈ ಕಾರ್ಯ ನಡೆದಿಲ್ಲ. 6 ತಿಂಗಳ ಹಿಂದೆಯೇ ಈ ಪ್ರಕ್ರಿಯೆ ಪ್ರಗತಿಯಲ್ಲಿತ್ತು ಎಂದು ಹೇಳಿದರು.

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿದ್ದ ಕಚೇರಿಯನ್ನು ಹೊಳೆನರಸೀಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಹಾಸನ, ಅರಸೀಕೆರೆ, ಬೇಲೂರಿಗೂ ಕೂಡ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 600 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳು ಬೇರೆಡೆಯಿಂದ ಬಂದು ಕಾಮಗಾರಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಇದರಲ್ಲಿ ಉತ್ತರ ಕರ್ನಾಟಕದ ರಸ್ತೆಗಳು ಸೇರಿವೆ. ಉತ್ತರ ಕರ್ನಾಟಕದಲ್ಲಿ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮಾಜಿ ಸಿ.ಎಂ.ಜಗದೀಶ್ ಶೆಟ್ಟರ್ ಮಾಡಲಾಗದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ನನಗೆ ಉತ್ತರ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಎಂಬ ಭೇದ ಭಾವವಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮನಾಗಿ ಕಾಣುವ ಮೂಲಕ ಕೆಲಸ ಮಾಡುತ್ತಿದ್ದೇನೆ. ವಿನಾಕಾರಣ ವಿಪಕ್ಷದ ನಾಯಕರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಮಾತನಾಡುವ ಮುನ್ನ ದಾಖಲೆ ಇಟ್ಟುಕೊಂಡು ಹೇಳಿಕೆ ನೀಡಲಿ ಎಂದು ಸಲಹೆ ನೀಡಿದರು.

Translate »