ಬಿಜೆಪಿಯ ಆಪರೇಷನ್ ಕಮಲ ವಿಫಲ ದೋಸ್ತಿ ಸರ್ಕಾರ ಅಬಾಧಿತ
ಮೈಸೂರು

ಬಿಜೆಪಿಯ ಆಪರೇಷನ್ ಕಮಲ ವಿಫಲ ದೋಸ್ತಿ ಸರ್ಕಾರ ಅಬಾಧಿತ

January 17, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸಿದ ಯತ್ನ ವಿಫಲಗೊಂಡಿದ್ದು, ಪಕ್ಷದ ಶಾಸಕರು ಹರಿಯಾಣದ ಗುರುಗ್ರಾಮದಿಂದ ನಗರಕ್ಕೆ ಹಿಂತಿರುಗುತ್ತಿದ್ದಾರೆ.

ಮತ್ತೊಂದೆಡೆ ತಮ್ಮ ಸದಸ್ಯತ್ವ ತೊರೆದು ಬಿಜೆಪಿ ಬೆಂಬಲಿಸಲು ಮುಂಬೈ ಸೇರಿದಂತೆ ರಾಷ್ಟ್ರದ ವಿವಿಧೆಡೆ ಪ್ರತ್ಯೇಕವಾಗಿ ವಾಸ್ತವ್ಯ ಹೂಡಿದ್ದ ಐವರು ಕಾಂಗ್ರೆಸ್ ಸದಸ್ಯರು ರಾಜಧಾನಿಗೆ ಬರಿಗೈಲಿ ವಾಪಸಾಗುತ್ತಿದ್ದಾರೆ. ಯಾವ ಶಾಸಕರನ್ನು ನೆಚ್ಚಿಕೊಂಡು ದೋಸ್ತಿ ಸರ್ಕಾರ ಕೆಡವಲು ಬಿಜೆಪಿ ಸಂಚು ರೂಪಿಸಿತ್ತೋ ಅದೇ ಶಾಸಕರು ತಮ್ಮ ತಮ್ಮ ಪಕ್ಷಗಳತ್ತ ಮುಖ ಮಾಡಿರುವುದರಿಂದ ಆಪರೇಷನ್ ಕಮಲ ಕಾರ್ಯಾಚರಣೆ ಮತ್ತೊಮ್ಮೆ ಠುಸ್ಸಾಗಿದೆ. ಬಿಜೆಪಿ ಶಾಸಕರು ನಾಳೆ ನಗರಕ್ಕೆ ಪ್ರತ್ಯೇಕವಾಗಿ ಹಿಂತಿರುಗಲಿದ್ದಾರೆ. ಆಪರೇಷನ್ ಕಮಲ ನಡೆಸುವ ಸಂದರ್ಭ ದಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೆಳೆಯಬಾರದು ಎನ್ನುವ ಉದ್ದೇಶದಿಂದ ಕಳೆದ 4 ದಿನಗಳಿಂದ ದೆಹಲಿ ಮತ್ತು ಹರಿಯಾಣದ ಹೋಟೆಲ್ ಮತ್ತು ರೆಸಾರ್ಟ್‍ಗಳಲ್ಲಿ ಅವರನ್ನು ಹಿಡಿದಿಡಲಾಗಿತ್ತು.

ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ರಾಜ್ಯದಲ್ಲಿ ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ಸಂಖ್ಯೆ ಮುಟ್ಟಲು ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ 16ರಿಂದ 18 ಶಾಸಕರನ್ನು ಸೆಳೆಯಲು ನಡೆಸಿದ ನಿರಂತರ ಯತ್ನ ಮತ್ತೊಮ್ಮೆ ವಿಫಲಗೊಂಡಿದೆ. ದೊಡ್ಡ ಪ್ರಮಾಣದಲ್ಲಿ ಆಪರೇಷನ್ ಕಮಲ ಆಗುತ್ತಿರುವ ಬಗ್ಗೆ ತಡವಾಗಿಯಾದರೂ ಎಚ್ಚೆತ್ತುಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕಳೆದ 24 ಗಂಟೆಗಳಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿ, ಬಿಜೆಪಿಗೆ ಮುಖಭಂಗವಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನಿರಂತರ ಸಂಪರ್ಕದಲ್ಲಿದ್ದುಕೊಂಡು ತಮ್ಮ ಪಕ್ಷದ ನಾಯಕರಿಗೆ ಮಾರ್ಗದರ್ಶನ ನೀಡಿದರು. ರಾಜ್ಯ ನಾಯಕರು ತಮ್ಮ ಪಕ್ಷದ ಭಿನ್ನಮತದ ನಾಯಕರು ಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಬಿಜೆಪಿ ಸೇರಲು ಮುಂದಾಗಿದ್ದ ಶಾಸಕರ ಮನವೊಲಿಸಿ ಹಿಂದಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮಧ್ಯೆ ಪಕ್ಷದ ಶಾಸಕರ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶುಕ್ರವಾರ ಮಧ್ಯಾಹ್ನ 3.30ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗಬಹುದಾದವರ ಪಟ್ಟಿಯಲ್ಲಿದ್ದ ಬಹುತೇಕರು ನಗರಕ್ಕೆ ಹಿಂತಿರುಗಿದ್ದಾರೆ. ಕೆಲವರು ಮುಖ್ಯಮಂತ್ರಿ ಅವರನ್ನು ಪಂಚತಾರಾ ಹೋಟೆಲ್ ಒಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಅಮರೇಗೌಡ ಬಯ್ಯಾಪುರ, ದರ್ಶನಾಪುರ್, ಬಸನಗೌಡ ದದ್ದಲ್ ಸೇರಿದಂತೆ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅವರಲ್ಲಿ ಪ್ರಮುಖವಾಗಿದ್ದರು.

ಮತ್ತೊಂದೆಡೆ ರಾಜ್ಯದ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಬಂಡಾಯದ ಮಂಚೂಣಿಯಲ್ಲಿದ್ದ ಭೀಮಾನಾಯಕ್, ಬಸನಗೌಡ ದದ್ದಲ್ ಸೇರಿದಂತೆ ಕೆಲವರು ಕುಮಾರಕೃಪಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ವೇಣುಗೋಪಾಲ್ ಅವರೊಂದಿಗೆ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದರು.

ಇದಾದ ನಂತರ ಡಾ. ಪರಮೇಶ್ವರ್, ಮುಖ್ಯಮಂತ್ರಿ ಅವರು ತಂಗಿದ್ದ ಹೋಟೆಲ್‍ಗೆ ಧಾವಿಸಿ ಸುಮಾರು 30 ನಿಮಿಷಗಳ ಕಾಲ ಚರ್ಚಿಸಿ, ಮುಂದಿನ ಬೆಳವಣಿಗೆ ಮತ್ತು ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಕೆಲವು ಅತೃಪ್ತರಿಗೆ ಅಧಿಕಾರ ನೀಡುವ ಸಂಬಂಧ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಮುಂಬೈನ ಹೋಟೆಲ್‍ನಲ್ಲಿ ತಂಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಜಾದವ್ ಅವರನ್ನು ಸಂಪರ್ಕಿಸಿ ಮನವೊಲಿಸಿದ್ದಲ್ಲದೆ ಅವರು ಹಿಂತಿರುಗುವಂತೆ ಮನವಿ ಮಾಡಿದರು.

ಅಲ್ಲಿಯೇ ಉಳಿದುಕೊಂಡಿರುವ ಇಬ್ಬರು ಪಕ್ಷೇತರ ಶಾಸಕರನ್ನು ಮನವೊಲಿಸುವ ಪ್ರಯತ್ನಕ್ಕೆ ಉಭಯ ಪಕ್ಷದ ನಾಯಕರು ಕೈಹಾಕಿಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆಗೆ ಸೇರಲು ಮುಂದಾಗಿದ್ದ ಶಾಸಕರು ನಗರಕ್ಕೆ ಹಿಂತಿರುಗುತ್ತಿದ್ದಂತೆ ನಾಯಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೇಗೌಡ ಬಯ್ಯಾಪುರ, ನಾನು ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದೆ, ಬಿಜೆಪಿಯವರು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಮುಂಬೈನಲ್ಲಿ ನಮ್ಮ ಪಕ್ಷದ ಶಾಸಕರನ್ನೂ ಭೇಟಿ ಆಗಿಲ್ಲ, ಆಪರೇಷನ್ ಕಮಲ ಸುದ್ದಿ ಕಪೋಲಕಲ್ಪಿತ, ನಮ್ಮ ಸರ್ಕಾರ ಭದ್ರವಾಗಿದೆ, ನಾನು ಇದೀಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದರು. ಮತ್ತೊಂದೆಡೆ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಭೀಮಾನಾಯಕ ಮತ್ತು ಬಸನಗೌಡ ದದ್ದಲ್, ಮಾಧ್ಯಮದವರ ವಿರುದ್ಧವೇ ತಿರುಗಿಬಿದ್ದರು. ನಾವು ಫೋನ್ ಸ್ವಿಚ್ ಆಫ್ ಮಾಡಬಾರದಾ? ಎಂದು ಪ್ರಶ್ನಿಸಿದರು.

ನಾವು ಕಾಂಗ್ರೆಸ್‍ನಲ್ಲೇ ಇದ್ದೇವೆ, ಮುಂದೆಯೂ ಇರುತ್ತೇವೆ, ಬಿಜೆಪಿಗೆ ಹೋಗಲ್ಲ, ನಾನು ಗೋವಾ ಪ್ರವಾಸಕ್ಕೆ ಹೋಗಿದ್ದೆ, ಈ ಹಿಂದೆ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದರು, ಈಗ ಯಾವ ನಾಯಕರೂ ಮಾತನಾಡಿಲ್ಲ. ಕಂಪ್ಲಿ ಗಣೇಶ್ ಚಿಕ್ಕಮಗಳೂರಿನಲ್ಲಿ ಇದ್ದಾರೆ ಅವರೂ ನಗರಕ್ಕೆ ಬರುತ್ತಾರೆ ಎಂದು ತಿಳಿಸಿದರು.

Translate »