ಕುಶಾಲನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತರಲು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸಿ ವಿಫಲವಾಗಿದೆ ಎಂದು ದೂರಿದ ಕಾಂಗ್ರೆಸ್ ಕಾರ್ಯ ಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಚುನಾಯಿತ ಶಾಸಕರಿಗೆ ಹಣದ ಆಮಿಷ ತೋರಿಸಿ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಯತ್ನಿಸಿದ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದರು.
ರಾಜ್ಯದಲ್ಲಿರುವ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬುಡ ಮೇಲು ಮಾಡಲು ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಹೊರಟ ಅಮಿತ್ ಶಾ ಮತ್ತು ಯಡಿಯೂರಪ್ಪ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಅಧಿಕಾರದ ಆಸೆಗಾಗಿ ಜನರಿಂದ ಆಯ್ಕೆಯಾದ ಶಾಸಕರನ್ನು ಆಪರೇಷನ್ ಕಮಲ ಮೂಲಕ ತಮ್ಮತ್ತ ಸೆಳೆಯಲು ವಿಫಲ ಯತ್ನ ನಡೆಸಿದ ಯಡಿಯೂರಪ್ಪ ಹಾಗೂ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ನೂರಾರು ಕೋಟಿ ರೂ.ಗಳ ಆಮಿಷವೊಡ್ಡಿ ಸರ್ಕಾರ ವನ್ನು ಅತಂತ್ರಗೊಳಿಸಲು ಹೊರಟ ಬಿಜೆಪಿ ನಾಯಕರ ಅಧಿಕಾರ ದಾಹವನ್ನು ರಾಜ್ಯದ ಜನತೆ ಖಂಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತನ್ನ ಅಧಿಕಾರದ ಅವಧಿಯಲ್ಲಿ 23 ಉಪಚುನಾ ವಣೆಯನ್ನು ನಡೆಸಿ 20 ತಿಂಗಳ ಅವಧಿಯಲ್ಲೇ ಅಧಿಕಾರ ತ್ಯಜಿಸಿ ಜೈಲುಪಾಲಾದ ವ್ಯಕ್ತಿ ಎಂದು ಲೇವಡಿಯಾಡಿದರು.
ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುದರೇಶ್, ಕಲ್ಲಿಮುಲ್ಲಾ, ಎಪಿಎಂಸಿ ಅಧ್ಯಕ್ಷ ರಮೇಶ್, ನಿರ್ದೇಶಕ ಶಶಿಭೀಮಯ್ಯ, ಮುಖಂಡರಾದ ಕುಡಾ ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಎಂ.ನಂಜುಂಡಸ್ವಾಮಿ, ಗೀತಾಧರ್ಮಪ್ಪ, ಶಾಂತಪ್ಪ, ಗೋವಿಂದರಾಜು, ನವೀನ್ ಗೌಡ, ಗುರುಸ್ವಾಮಿ ಪಾಲ್ಗೊಂಡಿದ್ದರು.