ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ: ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವವರಿಗೆ ಸಂಕಟ
ಮೈಸೂರು

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ: ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವವರಿಗೆ ಸಂಕಟ

March 15, 2020

ಮೈಸೂರು, ಮಾ. 14(ಆರ್‍ಕೆ)- ಕೋವಿಡ್-19 ಭೀತಿಯಿಂದಾಗಿ ಮುಂಜಾಗ್ರತೆ ವಹಿಸಲು ಶುಕ್ರವಾರ ರಾಜ್ಯ ಸರ್ಕಾರ ವಾರ ಕಾಲ ವಿವಾಹ, ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಿರುವುದರಿಂದ ಪೂರ್ವ ನಿಗದಿಯಾಗಿದ್ದಂತೆ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವವರಿಗೆ ತೊಂದರೆಯಾಗಿದೆ.

ಇಂದು (ಶನಿವಾರ) ಆರತಕ್ಷತೆ ಹಾಗೂ ಭಾನುವಾರ ಮದುವೆ ಸಿದ್ಧತೆ ಮಾಡಿಕೊಂಡಿ ರುವವರಿಗೆ ಸರ್ಕಾರದ ಆದೇಶ ಚಿಂತೆಗೀಡು ಮಾಡಿದೆ. ಈ ಮೊದಲೇ ವಿವಾಹ ಕಾರ್ಯಕ್ರಮ ನಿಗದಿಯಾಗಿ ಆಹ್ವಾನ ಪತ್ರಿಕೆ ಹಂಚಿದ್ದು, ಆತಿಥ್ಯ ವ್ಯವಸ್ಥೆ, ಡೆಕೋರೇಷನ್ ತಯಾರಿ ನಡೆಸಿರುವುದರಿಂದ ವಧು ಮತ್ತು ವರನ ಕಡೆಯವರಿಗೆ ಆತಂಕ ಉಂಟಾಗಿದೆ.

ಆದರೆ ಅನಿವಾರ್ಯವಾಗಿ ಇಂದು ರಾತ್ರಿಯ ಆರತಕ್ಷತೆಗಳು ನಡೆದವು. ಭಾನು ವಾರದ ಧಾರಾ ಮುಹೂರ್ತಕ್ಕೆ ಆದಷ್ಟು ಕಡಿಮೆ ಜನರು ಬರುವಂತೆ ಮಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲು ನಿರ್ಧರಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಈ ಮೊದಲೇ ನಿಗದಿಯಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿರುವ ಕಾರಣ ಇಂದಿನ ಆರತಕ್ಷತೆ ಮತ್ತು ನಾಳಿನ ಧಾರಾ ಮುಹೂರ್ತವನ್ನು ರದ್ದುಪಡಿಸಲು ಸಾಧ್ಯವಾಗದ ಕಾರಣ ನಡೆಸಲೇಬೇಕಾಯಿತು ಎಂದರು. ಆದರೆ, ಭಾನುವಾರದ ಧಾರಾ ಮುಹೂ ರ್ತಕ್ಕೆ ಆದಷ್ಟು ಕಡಿಮೆ ಜನರೊಂದಿಗೆ ಮುಕ್ತಾಯಗೊಳಿಸಿ ಎಂದು ಮದುವೆ ಮಾಡುವವರಿಗೆ ಮನವಿ ಮಾಡಿಕೊಂಡಿದ್ದೇವೆ. ಅದೃಷ್ಟವಶಾತ್ ಮುಂದಿನ ವಾರ ಅಷ್ಟಾಗಿ ಮದುವೆ ಕಾರ್ಯಕ್ರಮಗಳಿಲ್ಲ ಎಂದು ತಿಳಿಸಿದರು.

ಮೈಸೂರು ನಗರದ 150 ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 200 ಕಲ್ಯಾಣ ಮಂಟಪಗಳಿವೆ. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಕೈಗೊಂಡಿ ರುವ ನಿರ್ಧಾರಕ್ಕೆ ನಾವೂ ಸಹಕರಿಸಬೇಕಾಗಿರುವುದರಿಂದ ಎಲ್ಲಾ ಕಲ್ಯಾಣ ಮಂಟಪ ಗಳಲ್ಲಿ ಮದುವೆ ಬುಕ್ ಮಾಡಿರುವ ವಧುವಿನ ಕಡೆಯವರಿಗೆ ಮನವರಿಕೆ ಮಾಡಿದ್ದೇವೆ ಎಂದು ಸತ್ಯನಾರಾಯಣ ತಿಳಿಸಿದರು. ಮುಂದೆ ಒಂದು ವೇಳೆ ನಿರ್ಬಂಧ ಮುಂದು ವರೆದರೂ ಎಲ್ಲರೂ ಸಹಕರಿಸಬೇಕಾಗಿದೆ. ಈ ಸಂದೇಶವನ್ನೂ ನಾವು ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರಿಗೆ ರವಾನಿಸಿದ್ದೇವೆ ಎಂದು ಅವರು ತಿಳಿಸಿದರು.

Translate »