ಬ್ರಹ್ಮಕಲಶೋತ್ಸವ ಪ್ರತ್ಯೇಕ ಸಮಿತಿ ರದ್ದು
ಕೊಡಗು

ಬ್ರಹ್ಮಕಲಶೋತ್ಸವ ಪ್ರತ್ಯೇಕ ಸಮಿತಿ ರದ್ದು

March 17, 2019

ಮಡಿಕೇರಿ: ಶ್ರೀ ಭಾಗಮಂಡಲ ತಲಕಾವೇರಿ ದೇಗುಲದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಅಷ್ಠಬಂಧ ಬ್ರಹ್ಮಕಲಶೋತ್ಸವವನ್ನು ಆಯೋಜಿಸಲು ಪ್ರತ್ಯೇಕವಾಗಿ ರಚನೆಗೊಂಡಿದ್ದ 19 ಮಂದಿಯ ಸಮಿತಿಯ ಅವಶ್ಯಕತೆ ಇನ್ನು ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಹೇಳಿದೆ. ಈ ಸಂಬಂಧ ಎಂ.ಬಿ.ದೇವಯ್ಯ ಮತ್ತಿತರೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಡಿಸಿ ಕೋರ್ಟ್ ವಜಾಗೊಳಿಸಿದೆ.

2017ರಲ್ಲಿ 19 ಮಂದಿಯ ಸಮಿತಿಯನ್ನು ರಚಿಸಿ ಬ್ರಹ್ಮಕಲ ಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಮತ್ತು ಸಮಿತಿಗೆ ಮಾನ್ಯತೆ ನೀಡಬೇಕೆಂದು ಎಂ.ಬಿ.ದೇವಯ್ಯ, ಎಂ.ಎ.ನಾಣಯ್ಯ, ಎಂ.ಬಿ.ಕುಮಾರ್, ಸಿ.ಜಿ.ಸತೀಶ್, ಕೆ.ರಮೇಶ್ ಮುದ್ದಯ್ಯ, ಬಿ.ಎ.ರಮೇಶ್ ಚಂಗಪ್ಪ ಹಾಗೂ ಕೆ.ಫ್ಯಾನ್ಸಿ ಗಣಪತಿ ಅವರುಗಳು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಪ್ರಸ್ತುತ ದೇವಾಲಯ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿ ಇರುವುದರಿಂದ ಅಷ್ಠಬಂಧ ಬ್ರಹ್ಮಕಲಶೋತ್ಸವಕ್ಕಾಗಿ ಪ್ರತೇಕ ಸಮಿತಿಯ ಅಗತ್ಯವಿಲ್ಲ ಎಂದು ಮುಜರಾಯಿ ಕಾಯ್ದೆಯ ನಿಯಮಗಳನ್ನು ಉಲ್ಲೇಖಿಸಿ ತೀರ್ಪು ನೀಡಿದ್ದಾರೆ. ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಶುಕ್ರವಾರ ವಜಾಗೊಳಿಸಿದ್ದಾರೆ.

ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 25ರಂತೆ ವ್ಯವಸ್ಥಾಪನಾ ಸಮಿತಿ ರಚನೆ ಆಗಿರುವುದರಿಂದ, 2002ರ ನಿಯಮ 33(5) ಪ್ರಚಲಿತದಲ್ಲಿರುವ ರೂಢಿ ಮತ್ತು ಆಚರಣೆಗಳಿಗೆ ಅನುಸಾರವಾಗಿ ರಥೋತ್ಸವ, ಜಾತ್ರೆ ಮತ್ತು ಯಾವುದೇ ವಿಶೇಷ ಉತ್ಸವಗಳನ್ನು ನಡೆಸುವ ಜವಾಬ್ದಾರಿಯನ್ನು ವ್ಯವಸ್ಥಾಪನಾ ಸಮಿತಿ ಹೊಂದಿರುತ್ತದೆ. ಹಾಗಾಗಿ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಸುವುದಕ್ಕೆಂದೇ ಪ್ರತ್ಯೇಕ ಸಮಿತಿ ಅವಶ್ಯವಿರÀುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾನೂನಿನ ಪ್ರಕಾರ 19 ಮಂದಿಯ ಸಮಿತಿಗೆ ಯಾವುದೇ ಸಿಂಧುತ್ವ ಇಲ್ಲ. ಅಲ್ಲದೇ, 2 ಸಮಿತಿಗಳಿದ್ದರೆ ಭಕ್ತರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಸರ್ಕಾರ ನೇಮಿಸಿರುವ ವ್ಯವಸ್ಥಾಪನಾ ಸಮಿತಿಗೇ ಸಾರ್ವಜನಿಕರು ಹಾಗೂ ಭಕ್ತಾದಿಗಳ ಸಲಹೆ ಸಹಕಾರ ಪಡೆಯಲು ಅವ ಕಾಶವಿರುತ್ತದೆ ಎಂದು ತಿಳಿಸಲಾಗಿದೆ.

Translate »