ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ
ಹಾಸನ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ

September 16, 2018

ಅರಸೀಕೆರೆ: ನಗರದ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾರು ಬಾರು ಹೆಚ್ಚಿದ್ದು, ಅಧಿಕಾರಿಗಳು ಕಂಡೂ ಕಾಣದಂತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಸಹಾಯಕರಾಗಿ ಕೈ ಚೆಲ್ಲುವುದರ ಮೂಲಕ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಅತೀ ಹೆಚ್ಚು ಕಂದಾಯ ವಸೂಲಿಯಾಗುವ ಪ್ರದೇಶವಾಗಿದ್ದು, ಇದಕ್ಕಾಗಿ ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಕಾರುಬಾರು ಹೆಚ್ಚುವ ಮೂಲಕ ಜನ ಸಾಮಾನ್ಯರು ಅಧಿಕಾರಿ ಗಳ ಬಳಿ ಸರ್ಕಾರಿ ಕೆಲಗಳನ್ನು ಮಾಡಿಕೊಳ್ಳು ವುದೇ ದುಸ್ಸಾಹಸ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಶವ ಸಂಸ್ಕಾರ ಸಹಾಯ ಧನ ಸೇರಿದಂತೆ ಇನ್ನಿತರೇ ಯೋಜನೆಗಳಿಗೆ ಅರ್ಹ ಫಲಾನುಭವಿ ನಾಗರಿಕರು ಅರ್ಜಿ ಹಾಕಿದರೆ ವಿಳಂಬವಾಗುವುದು ಇಲ್ಲದೆ, ವಜಾ ಆಗುವುದು ಈ ಕಚೇರಿ ಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ.

ಆದರೆ ಸಾರ್ವಜನಿಕರು ಇವುಗಳ ಉಸಾ ಬರಿ ಯಾರಿಗೆ ಬೇಕೆಂದು ಈಗಿನ ತಾಲೂಕು ಕಚೇರಿ ಮತ್ತು ಹಳೇ ತಾಲೂಕು ಕಚೇರಿ ಕಟ್ಟಡದಲ್ಲಿರುವ ರಾಜಸ್ವ ಮತ್ತು ಗ್ರಾಮ ಲೆಕ್ಕಾಧಿ ಕಾರಿಗಳ ಕಚೇರಿಗಳಲ್ಲಿ ಸದಾ ಅಧಿಕಾರಿ ಗಳನ್ನು ನಾಚಿಸುವಂತೆ ವೀರಾಜಮಾನರಾಗಿ ಕುಳಿತುಕೊಳ್ಳುವ ಮಧ್ಯವರ್ತಿಗಳಿಗೆ ದಾಖಲೆಗಳನ್ನು ಒಪ್ಪಿಸಿಬಿಟ್ಟರಾಯಿತು. ಕೆಲವೇ ದಿನಗಳು ಅಥವಾ ಅವಧಿಯಲ್ಲಿ ಆದೇಶಗಳ ಪ್ರತಿಗಳು ಕೈಸೇರುತ್ತವೆ. ಅಷ್ಟು ಶೀಘ್ರದಲ್ಲಿ ದಾಖಲೆ ತಂದುಕೊಡಬಲ್ಲ ನಿಸ್ಸೀಮ ಮಧ್ಯವರ್ತಿಗಳು ಇಲ್ಲಿದ್ದು, ಭೂ ಮಾಫಿಯಾ, ಮರಳು ದಂಧೆ, ಕೆಲ ಅನಧಿಕೃತ ಜಲ್ಲಿ ಕ್ರಷರ್ ಘಟಕಗಳು ಮಧ್ಯವರ್ತಿಗಳಿಂದ ಹೊರ ತಾಗಿಲ್ಲ ಎಂಬುದು ದುರಂತದ ಸಂಗತಿ.

ಬಹುತೇಕ ಮಧ್ಯವರ್ತಿಗಳು ಕಳೆದ ಹತ್ತಾರು ವರ್ಷಗಳಿಂದ ಜನ ಪ್ರತಿನಿಧಿಗಳ ಪ್ರಭಾವ ಬಳಸಿಕೊಂಡು ಈ ಎಲ್ಲಾ ಕಚೇರಿಗಳ ಕೆಲವು ಗುಮಾಸ್ತರು, ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ, ಜನ ಸಾಮಾನ್ಯರಿಗೆ ಎಟುಕದ ಎಷ್ಟೋ ಕೆಲಸಗಳು ಹಾಗೂ ಯೋಜನೆಗಳ ಫಲವನ್ನು ಈ ಮದ್ಯವರ್ತಿಗಳೇ ದಯಪಾಲಿಸುತ್ತಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿರುವ ಪಡಸಾಲೆಯಲ್ಲಿ ವಿವಿಧ ವಿಭಾಗಗಳ ಗಣಕೀ ಕೃತ ಘಟಕಗಳಲ್ಲಿ ನಿತ್ಯ ವಿವಿಧ ಯೋಜನೆ ಗಳನ್ವಯ ನೂರಾರು ಜನರು ಅರ್ಜಿಗಳನ್ನು ಹಾಕಲು ಸರತಿ ಸಾಲಿನಲ್ಲಿ ಕಾದಿರುತ್ತಾರೆ. ಆದರೆ ಇದೇ ಮಧ್ಯವರ್ತಿಗಳು ರಾಜಾರೋಷವಾಗಿ ಕಂಪ್ಯೂಟರ್ ಆಪರೇಟರ್‌ಗಳ ಛೇಂಬರ್‌ಗಳಿಗೆ ನೇರ ಪ್ರವೇಶಿಸುವ ಮೂಲಕ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬಲ್ಲ ಚಾಕ ಚಕ್ಯತೆ ಉಳ್ಳವರು ಎಂಬುದು ಗುಟ್ಟಾಗಿ ಉಳಿದಿಲ್ಲ.

ಹಿಂದಿನ ತಹಶೀಲ್ದಾರ್ ಚಿದಾನಂದ ಅವರು ಮಧ್ಯವರ್ತಿಗಳ ನಿಯಂತ್ರಣ, ಅಧಿಕಾರಿಗಳು ಹಾಗೂ ಕಚೇರಿಯಲ್ಲಿನ ಚಲನ ವಲನ ಅರಿಯಲು ಕಚೇರಿ ಎಲ್ಲೆಡೆ ಸಿಸಿ ಕ್ಯಾಮೆ ರಾಗಳನ್ನು ಆಳವಡಿಸಿ ತಮ್ಮ ಕಚೇರಿ ಕೊಠಡಿಯಲ್ಲಿದ್ದಾಗ ನಿಗಾ ಇರಿಸುತ್ತಿದ್ದರು.

ಪ್ರಸ್ತುತದಲ್ಲಿ ಈ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿದ್ದರೂ ಮಧ್ಯವರ್ತಿಗಳ ಚಲನವಲನಗಳು ನಿಯಂತ್ರಿಸಲು ಇಂದಿನವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನೋವಿನ ಸಂಗತಿಯಾದರೆ, ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಇಲ್ಲಿಯ ತಹಶೀಲ್ದಾರ್, ಉಪ ತಹಶೀಲ್ದಾರ್ ಮತ್ತು ವಿವಿಧ ಶಿರಸ್ತೇದಾರ್‍ಗಳ ಗಮನಕ್ಕೆ ಬಂದಿಲ್ಲವೇ ಎಂಬುದು ಸಾರ್ವಜನಿಕರಲ್ಲಿ ಕಾಡುತ್ತಿರುವ ಯಕ್ಷ ಪ್ರಶ್ನೆ.

ಮಧ್ಯವರ್ತಿಗಳಿಂದ ಹಣ ಪಡೆದು ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿ ಕೊಡುತ್ತಿದ್ದಾರೋ, ಇಲ್ಲವೋ ಅಥವಾ ತಮ್ಮ ವೈಯಕ್ತಿಕ ಕೆಲಸಗಳಿಗೆ ಮಧ್ಯವರ್ತಿಗಳ ಕೃಪಾಕಟಾಕ್ಷಬೇಕೆಂದು ಪರೋಕ್ಷ ವಾಗಿ ಬೆಂಬಲಿಸುತ್ತಿದ್ದಾರೋ ತಿಳಿಯದಂತಾಗಿದ್ದು, ರಾಜಕೀಯ ಪ್ರಭಾವ ದಿಂದ ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಭಯದಿಂದ ಮೌನಕ್ಕೆ ಶರಣಾಗಿ ದ್ದಾ ರೆಯೇ ಎಂಬ ಅನುಮಾನ ಕಾಡುತ್ತಿದೆ.

ಒಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಬಡವರು, ಪ್ರಜ್ಞಾವಂತರು ನೇರ ವಾಗಿ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಹೆಣಗುವಂತಾಗಿದ್ದು, ನಿಷ್ಠಾವಂತಹ ಅಧಿಕಾರಿಗಳು ಇಂತಹ ಮಧ್ಯವರ್ತಿ ಗಳಿಂದ ಸಾಕಷ್ಟು ನೋವು ತಿನ್ನುವುದರೊಂದಿಗೆ ಮೇಲಧಿಕಾರಿಗಳ ಬಗ್ಗೆಯೂ ಆಸಹನೆ ತೋರುತ್ತಿದ್ದಾರೆ. ಆಳವಾಗಿ ಬೇರೂರಿಸುವ ಈ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸದಿದ್ದಲ್ಲಿ ಮುಂದೊಂದು ದಿನ ಅಧಿಕಾರಿಗಳು ನಗೆಪಾಟಲಿ ಗೀಡಾದರೂ ಆಶ್ಚರ್ಯವಿಲ್ಲ. ಇದಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆ ನ್ನುವುದು ಸಾರ್ವಜನಿಕರ ಆಶಯ.

Translate »