ಅಪಾಯದ ಅಂಚಿನಲ್ಲಿ ಕೊಡಗು-ಮೈಸೂರು ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ತೂಗು ಸೇತುವೆ
ಕೊಡಗು

ಅಪಾಯದ ಅಂಚಿನಲ್ಲಿ ಕೊಡಗು-ಮೈಸೂರು ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ತೂಗು ಸೇತುವೆ

September 16, 2018

ಕುಶಾಲನಗರ: ಸೋಮವಾರಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ಮತ್ತು ಹಾರಂಗಿ ನದಿಯ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಹಾನಿ ಯಾಗಿದ್ದು, ಇದರಿಂದ ಎರಡು ಜಿಲ್ಲೆಗಳ ಗಡಿ ಗ್ರಾಮಗಳ ಜನರ ಬಾಂಧವ್ಯದ ಕೊಂಡಿಯಾಗಿದ್ದ ಏಕೈಕ ತೂಗು ಸೇತುವೆ ಕಳಚಿ ಬಿದ್ದಂತಾಗಿದೆ.

ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಣಿವೆ ಶ್ರೀರಾಮಲಿಂಗೇ ಶ್ವರ ದೇವಸ್ಥಾನದ ಬಳಿ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. ಸುಂದರವಾಗಿ ನಿರ್ಮಾಣಗೊಂಡಿದ್ದ ಈ ಸೇತುವೆ ಕಣಿವೆ ಗ್ರಾಮದ ಹಾಗೂ ಪ್ರವಾಸಿಗರ ಪ್ರಮುಖ ಆಕರ್ಷಿಣಿಯ ಕೇಂದ್ರವಾಗಿತ್ತು. ಅಲ್ಲದೆ ಈ ತೂಗು ಸೇತುವೆ ಈ ಭಾಗದ ಜನರ ಬಾಂಧವ್ಯದ ಬೇಸುಗೆಯಾಗಿತ್ತು.

ಆದರೆ ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಹಾರಂಗಿ ಜಲಾಶಯದಿಂದ ನದಿಗೆ ಬಿಡುಗಡೆ ಮಾಡಿದ ಅಪಾರ ಪ್ರಮಾಣದ ನೀರಿನಿಂದ ಹಾರಂಗಿ ಹಾಗೂ ಕಾವೇರಿ ನದಿಗಳು ಕೂಡಿಗೆ ಬಳಿ ಸಂಗಮಗೊಂಡು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ನದಿಗಳ ಪ್ರವಾಹಕ್ಕೆ ಸಿಲುಕಿ ತೂಗು ಸೇತುವೆಗೆ ಸಂಪೂರ್ಣ ಹಾನಿಯಾಗಿದೆ.

ಗ್ರಾಮದ ಪ್ರಮುಖ ಆಕರ್ಷಿಣೀಯ ಈ ಸೇತುವೆ ತನ್ನ ಆಸ್ತಿತ್ವವನ್ನು ಕಳೆದುಕೊಂಡು ಅಲುಗಾಡಲು ಆರಂಭಿಸಿದೆ. ಈ ತೂಗು ಸೇತುವೆ ಎರಡು ಜಿಲ್ಲೆಯ ಗಡಿಗ್ರಾಮಗಳ ಸಂಕರ್ಪ ಕಲ್ಪಿಸುವ ಹತ್ತಿ ರದ ಸೇತುವೆಯಾಗಿತ್ತು. ನದಿಯ ಎರಡು ದಂಡೆಗಳ ಮೇಲೆ ಬೃಹತ್ ಕಂಬಗಳನ್ನು ಅಳವಡಿಸಿ ಕಬ್ಬಿಣದ ಮೂಲಕ ನಿರ್ಮಿಲಾಗಿದ್ದ ಈ ಸೇತುವೆ ಸಂಪೂರ್ಣ ಹಾನಿ ಯಾಗಿರುವ ಹಿನ್ನೆಲೆಯಲ್ಲಿ ಪಾದಚಾರಿಗಳ ಸಂಚಾರಕ್ಕೂ ಸಾಧ್ಯವಾಗದ ದುಸ್ಥಿತಿಗೆ ತಲುಪಿದೆ. ಕಬ್ಬಿಣದ ಸರಳುಗಳು ಮುರಿದು ಹೋಗಿವೆ. ನಡೆದಾಡಲು ಅಳವಡಿಸಿದ್ದ ಮರದ ಹಲಗೆಗಳು ಕಳಚಿ ಹೋಗಿವೆ. ನದಿಯ ಮತ್ತೊಂದು ದಂಡೆಯಲ್ಲಿ ಬೃಹತ್ ಸಿಮೆಂಟ್ ಕಂಬಕ್ಕೆ ಜೋಡಣೆ ಮಾಡಿದ್ದ ಸೇತುವೆ ತುಂಡಾಗಿ ಸರಿದು ನಿಂತಿದೆ. ತೂಗು ಸೇತುವೆಗೆ ಆಧಾರವಾಗಿದ್ದ ಕಬ್ಬಿ ಣದ ತಂತಿಗಳು ಬೆಂಡಾಗಿ ಹೋಗಿವೆ.

ಈ ಸೇತುವೆಯನ್ನೆ ಅವಲಂಬಿಸಿದ್ದ ನೂರಾರು ಕಾರ್ಮಿಕರಿಗೆ ಈಗ ದಿಕ್ಕು ತೋಚದಂತೆ ಆಗಿದೆ. ಕಳೆದ ಏಳೆಂಟು ವರ್ಷ ಗಳ ಹಿಂದೆ ಶಿವಮೊಗ್ಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ರೂ.45 ಲಕ್ಷ ವೆಚ್ಚದಲ್ಲಿ ಕಣಿವೆ ಬಳಿ ತೂಗು ಸೇತುವೆ ನಿರ್ಮಿಸಲಾಗಿತ್ತು. ಸುಳ್ಯದ ತೂಗು ಸೇತುವೆ ತಜ್ಞ ಎಂಜಿನಿಯರ್ ಗಿರೀಶ್ ನೇತೃತ್ವದ ತಂಡ ಈ ಸೇತುವೆಯನ್ನು ಆಧು ನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿ ದ್ದರು. ಇದರಿಂದ ಗ್ರಾಮಸ್ಥರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತೆ ಆಗಿತ್ತು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗಡಿಭಾಗದ ಗ್ರಾಮಗಳಾದ ದೊಡ್ಡ ಕಮರಹಳ್ಳಿ, ಶ್ಯಾನುಬೊಗನಹಳ್ಳಿ, ದಿಂಡಿಗಾಡು, ಮುತ್ತಿನಮುಳ್ಳುಸೋಗೆ, ಕಣಗಾಲು, ಹನುಮಂತಪುರ, ಕರಡಿ ಲಕ್ಕನ ಕೆರೆ ಹಾಗೂ ಕೊಡಗಿನ ಕಣಿವೆ, ಭುವನಗಿರಿ, ಹುಲುಸೆ, ಹಕ್ಕೆ, ಕೂಡಿಗೆ, ಮರಾರೂ, ಹೆಬ್ಬಾಲೆ ಮತ್ತಿತರ ಗ್ರಾಮ ಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸಿದೆ. ಈ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮಗಳ ಜನರು, ವಿದ್ಯಾರ್ಥಿಗಳು ಕೊಡಗು ಜಿಲ್ಲೆಗೆ ತಮ್ಮ ದಿನನಿತ್ಯದ ವ್ಯವ ಹಾರ ಹಾಗೂ ವಿದ್ಯಾಭ್ಯಾಸಕ್ಕಾಗಿ ದೋಣಿ ಮೂಲಕ ನದಿ ದಾಟುತ್ತಿದ್ದರು. ಅಲ್ಲದೇ ಕಾವೇರಿ ನದಿಗೆ ಅಡ್ಡಲಾಗಿ ಹಾರಂಗಿ ಜಲಾಶಯದ ವತಿಯಿಂದ ನಿರ್ಮಿಸಿರುವ 50 ಅಡಿ ಎತ್ತರದ ಅಪಾಯಕಾರಿ ಮೇಲ್ಗಾ ಲುವೆಯ ಸೇತುವೆ ಮೇಲೆ ಸಂಚ ರಿಸುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ತುಂಬ ತೊಂದರೆ ಅನುಭವಿಸುತ್ತಿದ್ದರು.

ಈ ಎಲ್ಲ ಸಮಸ್ಯೆಗಳಿಗೆ ಅಂತ್ಯಹಾಡಿ ಎರಡು ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಕಣಿವೆಯಲ್ಲಿ ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ ಹಾರಂಗಿ ಜಲಾ ಶಯದಿಂದ ಹರಿದ ಅಪಾರ ಪ್ರಮಾಣ ನೀರಿನಿಂದ ಹಾಗೂ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ತೂಗು ಸೇತುವೆಯ ಮೇಲೆ ನೀರು ಹರಿದು ಹೆಚ್ಚಿನ ಪ್ರಮಾ ಣದಲ್ಲಿ ಹಾನಿಯಾಗಿದೆ.

ಈ ಸೇತುವೆ ಅಪಾಯದ ಸ್ಥಿತಿಯಲ್ಲಿರುವುದರಿಂದ ಜನರ ಸಂಚಾರಕ್ಕೆ ನಿಬರ್ಂಧಿಸಲಾಗಿದೆ. ಸೇತುವೆಗೆ ಅಡ್ಡಲಾಗಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮಗಳ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು 20 ಕಿ.ಮೀ. ದೂರ ಕ್ರಮಿಸಿ ಪರ್ಯಾಯ ರಸ್ತೆ ಅವರ್ತಿ ಮೂಲಕ ಕುಶಾಲನಗರ ಹಾಗೂ ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾಫಿ ಕೈಗಾರಿಕೆಗಳಿಗೆ ಬರುತ್ತಿದ್ದೇವೆ ಎಂದು ಕಾರ್ಮಿಕ ಮಹಿಳೆ ಸರೋಜಮ್ಮ ತಮ್ಮ ನೋವು ತೊಡಿಕೊಂಡಿದ್ದಾರೆ.

ಸಂಪೂರ್ಣ ಹಾನಿಯಾಗಿರುವ ತೂಗು ಸೇತುವೆಯನ್ನು ಶೀಘ್ರವಾಗಿ ದುರಸ್ತಿಗೊಳಿಸುವ ಮೂಲಕ ಗಡಿಗ್ರಾಮಗಳ ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಸ್ಥರು ಒತ್ತಾಯಿಸಿದ್ದಾರೆ.

Translate »