ಆಸ್ತಿ ವೈಷಮ್ಯಕ್ಕಾಗಿ ಸಹೋದರನ ಹತ್ಯೆ; ದಂಪತಿಗೆ ಜೀವಾವಧಿ ಶಿಕ್ಷೆ
ಹಾಸನ

ಆಸ್ತಿ ವೈಷಮ್ಯಕ್ಕಾಗಿ ಸಹೋದರನ ಹತ್ಯೆ; ದಂಪತಿಗೆ ಜೀವಾವಧಿ ಶಿಕ್ಷೆ

January 6, 2019

ಹಾಸನ:ಆಸ್ತಿ ವಿಚಾರವಾಗಿ ಉಂಟಾದ ವೈಷಮ್ಯದ ಹಿನ್ನೆಲೆಯಲ್ಲಿ ಸ್ಕ್ರೂಡ್ರೈವರ್‍ನಿಂದ ಚುಚ್ಚಿ ಅಣ್ಣನನ್ನು ಕೊಲೆ ಮಾಡಿದ ತಮ್ಮ ಮತ್ತು ಆತನ ಪತ್ನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಹಾಸನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಮರಗೂರು ಅವರು ಇಂದು ತೀರ್ಪು ನೀಡಿದ್ದಾರೆ.

ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿ ಮಲಗನಹಳ್ಳಿ ನಿವಾಸಿ ವೇಣುಗೋಪಾಲ್ ಅಲಿಯಾಸ್ ನಂದೀಶ ಮತ್ತು ಆತನ ಪತ್ನಿ ಶಿಕ್ಷೆಗೊಳಗಾದವರು.
ವಿವರ: ಶಿಕ್ಷೆಗೊಳಗಾಗಿರುವ ವೇಣುಗೋಪಾಲ ಮತ್ತು ಉಮಾಶಂಕರ ಅಣ್ಣ ತಮ್ಮಂದಿರಾಗಿದ್ದು, ಇವರಿಗೆ 15 ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು. ಆಸ್ತಿಯನ್ನು ಪಾಲು ಮಾಡಿಕೊಳ್ಳುವ ವಿಚಾರವಾಗಿ ಇವರಿಬ್ಬರ ನಡುವೆ ಆಗಿಂದಾಗ್ಗೆ ಜಗಳ ನಡೆಯು ತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಪಂಚಾಯ್ತಿ ನಡೆಸಿ ಆಸ್ತಿಯನ್ನು ಇಬ್ಬರಿಗೂ ಪಾಲು ಮಾಡಿಕೊಟ್ಟಿದ್ದರು.

ಆದರೂ ಸಮಾಧಾನಗೊಳ್ಳದ ವೇಣುಗೋಪಾಲ್ 2015ರ ಅಕ್ಟೋಬರ್ 24ರಂದು ಸಂಜೆ ಆತನ ಅಣ್ಣ ಉಮಾಶಂಕರ್ ಮತ್ತು ಅತ್ತಿಗೆ ವಿನುತಾ ಅವರುಗಳು ತಮ್ಮ ಜಮೀನಿಗೆ ನೀರು ಹಾಯಿಸಲು ಪೈಪ್‍ಗಳನ್ನು ಜೋಡಿಸುತ್ತಿದ್ದಾಗ ಅಲ್ಲಿಗೆ ತೆರಳಿದ ವೇಣುಗೋಪಾಲ ಮತ್ತು ಆತನ ಪತ್ನಿ ಶಿಲ್ಪಾ ಅವರುಗಳು ವಿನಾಕಾರಣ ತಕರಾರು ತೆಗೆದು ವೇಣುಗೋಪಾಲ ತನ್ನ ಅಣ್ಣ ಉಮಾಶಂಕರ್‍ನನ್ನು ಹಲವಾರು ಬಾರಿ ಸ್ಕ್ರೂಡ್ರೈವರ್‍ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೆ ಅತ್ತಿಗೆ ವಿನುತಾ ಅವರಿಗೂ ಸಹ ಸ್ಕ್ರೂಡ್ರೈವರ್‍ನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಈತನ ಕೃತ್ಯಕ್ಕೆ ಪತ್ನಿ ಶಿಲ್ಪಾ ಪ್ರಚೋದನೆ ನೀಡಿದ್ದಾಳೆ.
ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂದಿನ ಸರ್ಕಲ್ ಇನ್‍ಸ್ಪೆಕ್ಟರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ವೇಣುಗೋಪಾಲ್‍ಗೆ ಕೊಲೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ಮತ್ತು ಅತ್ತಿಗೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ 7 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ, ಈತನ ಕೃತ್ಯಕ್ಕೆ ಪ್ರಚೋದನೆ ನೀಡಿದ ಅಪರಾಧಕ್ಕೆ ಆತನ ಪತ್ನಿ ಶಿಲ್ಪಾಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದ್ದು, ವಸೂಲಾಗುವ ದಂಡ 20 ಸಾವಿರ ರೂ.ಗಳನ್ನು ಮೃತ ಉಮಾ ಶಂಕರ್ ಅವರ ಪತ್ನಿ ವಿನುತಾ ಅವರಿಗೆ ಪರಿಹಾರವಾಗಿ ನೀಡಬೇಕೆಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೃಷ್ಣಾ ಜಿ ದೇಶಭಂಡಾರಿ ವಾದ ಮಂಡಿಸಿದ್ದರು.

Translate »