ಬಿಜೆಪಿ ಮುಖಂಡರೊಂದಿಗೆ ಬಿಎಸ್‍ವೈ ಗಹನ ಚರ್ಚೆ
ಮೈಸೂರು

ಬಿಜೆಪಿ ಮುಖಂಡರೊಂದಿಗೆ ಬಿಎಸ್‍ವೈ ಗಹನ ಚರ್ಚೆ

September 12, 2018

ಬೆಂಗಳೂರು: ಆಡಳಿತ ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪಕ್ಷದ ಪ್ರಮುಖ ನಾಯಕ ರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಡಾಲರ್ಸ್ ಕಾಲನಿಯ ತಮ್ಮ ಧವಳಗಿರಿ ನಿವಾಸದಲ್ಲಿ ಬಹು ಸಮಯದವರೆಗೆ ಗೌಪ್ಯ ಸಭೆ ಮಾಡಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್-ಜೆಡಿಎಸ್‍ನಿಂದ ಬೇಸರಗೊಂಡು ತಮ್ಮ ಜೊತೆ ಕೈಜೋಡಿ ಸಲು ಶಾಸಕರು ಮುಂದಾಗಿರುವುದು, ಇದೇ ಸಂದರ್ಭದಲ್ಲಿ ವರಿಷ್ಠರು ನೀಡಿರುವ ಸಲಹೆಗಳನ್ನು ನಾಯಕರ ಗಮನಕ್ಕೆ ತಂದಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚನೆ ಸಾಧ್ಯವೇ? ಅಂತಹ ಸನ್ನಿವೇಶ ಒದಗಿ ಬಂದರೆ ಪಕ್ಷದ ಕಾರ್ಯತಂತ್ರ ಏನಿರಬೇಕೆಂಬ ಕುರಿತು ಚರ್ಚಿಸಿದರು. ಆಪರೇಷನ್ ಕಮಲಕ್ಕೆ ಒಳಗಾಗಲು ಮುಂದೆ ಬಂದಿರುವ ಆಡಳಿತ ಪಕ್ಷಗಳ ಕೆಲವು ಶಾಸಕರ ಹೆಸರನ್ನು ಸಭೆ ಮುಂದಿಟ್ಟು ಇವರ ಬಗೆಗಿನ ವಿಶ್ವಾಸಾರ್ಹತೆ ಮಾಹಿತಿಯನ್ನೂ ಕಲೆ ಹಾಕಿದರು ಎನ್ನಲಾಗಿದೆ. ಒಟ್ಟಾರೆ ಸಭೆಯಲ್ಲಿ ಭಾಗವಹಿಸಿದ ಮುಖಂಡರು, ಗೌಪ್ಯ ವಿಚಾರಗಳು ಏನು ಎಂಬುದರ ಬಗ್ಗೆ ಮಾಹಿತಿ ಹೊರಗೆಡಹಲು ಹಿಂಜರಿಯುತ್ತಿದ್ದಾರೆ.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಜಗದೀಶ್ ಶೆಟ್ಟರ್, ಉಮೇಶ್‍ಕತ್ತಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಮತ್ತಿತರರು ಪಾಲ್ಗೊಂಡಿದ್ದರು.

Translate »