ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು
ಮೈಸೂರು

ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು

June 25, 2018

ಮೈಸೂರು: ಮೈಸೂರು ನಗರದಲ್ಲಿ ಬುಲೆಟ್ ಬೈಕುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಬುಲೆಟ್ ಬೈಕುಗಳ ಕಳವು ಸಂಬಂಧ ಇತ್ತೀಚೆಗಷ್ಟೇ ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಕ್ರೈಂ ರಿವ್ಯೂ ಸಭೆಯಲ್ಲಿ ದ್ವಿಚಕ್ರ ವಾಹನಗಳು ಅದರಲ್ಲೂ ಬುಲೆಟ್ ಬೈಕುಗಳ ಕಳ್ಳತನ ನಿಯಂತ್ರಿಸುವಂತೆ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

2018ರ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 123 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದು, 37 ಪತ್ತೆಯಾಗಿವೆ. ಆ ಪೈಕಿ 6 ಬುಲೆಟ್ ಬೈಕುಗಳು ಕಳವಾಗಿದ್ದು, 2 ಪತ್ತೆಯಾಗಿವೆ. ಜೂನ್ 13 ಮತ್ತು 14ರಂದು ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಬುಲೆಟ್ ಬೈಕ್‍ಗಳು ಕಳವಾಗಿರುವುದರಿಂದ ಪೊಲೀಸರಿಗೆ ತಲೆನೋವಾಗಿದೆ.

ಅದೇ ರೀತಿ ಕಳೆದ ವರ್ಷ 2017ರ ಜನವರಿಯಿಂದ ಜೂನ್ ಮಾಹೆವರೆಗೆ 171 ದ್ವಿಚಕ್ರ ವಾಹನಗಳು ಮೈಸೂರು ನಗರದಲ್ಲಿ ಕಳ್ಳತನವಾಗಿದ್ದು, ಆ ಪೈಕಿ 61 ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸಕ್ತ ಸಾಲಿನಲ್ಲಿ ಎನ್.ಆರ್.ಠಾಣೆಯಲ್ಲಿ 5, ಮಂಡಿಯಲ್ಲಿ 6, ವಿವಿ ಪುರಂನಲ್ಲಿ 3, ಮೇಟಗಳ್ಳಿಯಲ್ಲಿ 2, ಜಯಲಕ್ಷ್ಮೀಪುರಂನಲ್ಲಿ 3, ವಿಜಯನಗರದಲ್ಲಿ 11, ಹೆಬ್ಬಾಳ್‍ನಲ್ಲಿ 8, ದೇವರಾಜದಲ್ಲಿ 19, ಲಷ್ಕರ್‍ನಲ್ಲಿ 9, ನಜರ್‍ಬಾದ್‍ನಲ್ಲಿ 7, ಉದಯಗಿರಿಯಲ್ಲಿ 5, ಆಲನಹಳ್ಳಿಯಲ್ಲಿ 9, ಕೃಷ್ಣರಾಜದಲ್ಲಿ 12, ವಿದ್ಯಾರಣ್ಯಪುರಂನಲ್ಲಿ 3, ಲಕ್ಷ್ಮೀಪುರಂನಲ್ಲಿ 10, ಅಶೋಕಪುರಂನಲ್ಲಿ 2, ಸರಸ್ವತಿಪುರಂನಲ್ಲಿ 6 ಹಾಗೂ ಕುವೆಂಪುನಗರ ಠಾಣಾ ಸರಹದ್ದಿನಲ್ಲಿ 3 ಸೇರಿ ಒಟ್ಟು 123 ದ್ವಿಚಕ್ರ ವಾಹನಗಳು ಕಳವಾಗಿರುವ ಬಗ್ಗೆ ವರದಿಯಾಗಿದ್ದು, 37 ವಾಹನಗಳು ಮಾತ್ರ ಪತ್ತೆಯಾಗಿವೆ.

ವಿಜಯನಗರ, ದೇವರಾಜ, ಲಷ್ಕರ್, ಕೃಷ್ಣರಾಜ ಹಾಗೂ ಲಕ್ಷ್ಮೀಪುರಂ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚು ವಾಹನಗಳು ಕಳ್ಳತನವಾಗುತ್ತಿದ್ದು, ಪೊಲೀಸರು ಗಸ್ತು ಕರ್ತವ್ಯ ತೀವ್ರಗೊಳಿಸಿದ್ದರೂ ಖಧೀಮರು ತಮ್ಮ ಕೈಚಳಕ ಮುಂದುವರೆಸಿದ್ದಾರೆ.
ಪ್ರಮುಖವಾಗಿ ಬುಲೆಟ್ ಬೈಕುಗಳು ಹೆಬ್ಬಾಳು, ಕೆ.ಆರ್., ಸರಸ್ವತಿಪುರಂ ಮತ್ತು ಕುವೆಂಪುನಗರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಕಳ್ಳತನವಾಗಿದ್ದು, ಪ್ರಕರಣ ದಾಖಲಾಗಿದೆ. ಅಷ್ಟು ಸುಲಭವಾಗಿ ಬುಲೆಟ್ ಬೈಕುಗಳ ಬೀಗ ಓಪನ್ ಆಗುವುದಿಲ್ಲ. ಆದರೂ ಕಳ್ಳತನ ಪ್ರಕರಣ ವರದಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಕೆ.ಆರ್.ಆಸ್ಪತ್ರೆ ಆವರಣ, ಸೇರಿದಂತೆ ಹಲವು ರಸ್ತೆಗಳ ಪಾರ್ಕಿಂಗ್ ಸ್ಥಳದಲ್ಲಿ ಕೆಲವರು ಬೈಕ್‍ಗಳಿಗೆ ಬೀಗ ಹಾಕದಿರುವುದು, ದ್ವಿಚಕ್ರ ವಾಹನಗಳಲ್ಲೇ ಕೀಲಿ ಬಿಟ್ಟು ಹೋಗುತ್ತಿರುವುದು ಖಧೀಮರು ವಾಹನ ಕಳವು ಮಾಡಲು ಸುಲಭವಾಗುತ್ತಿದೆ.

ಅದಕ್ಕೆಂದೇ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಪಾರ್ಕಿಂಗ್ ಸ್ಥಳಗಳಿಗೆ ನಿಯೋಜಿಸಿ ಅಂತಹ ವಾಹನಗಳನ್ನು ಠಾಣೆಗೆ ತಂದು ಮಾಲೀಕರು ದೂರು ನೀಡಲು ಬಂದಾಗ ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಮೂಲ ದಾಖಲಾತಿ ಪರಿಶೀಲಿಸಿ ವಾಹನಗಳನ್ನು ಕೊಟ್ಟು ಕಳುಹಿಸಲಾಗುತ್ತಿದೆ.

ತಮ್ಮ ವಾಹನಗಳ ಬಗ್ಗೆ ಮಾಲೀಕರೂ ಸಹ ಎಚ್ಚರ ವಹಿಸಬೇಕು ಎಂದು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ತಿಳಿಸಿದ್ದಾರೆ.

Translate »