ಅಧಿಕಾರಕ್ಕೇರುತ್ತಿದ್ದಂತೆ ರೈತರು, ನೇಕಾರರಿಗೆ ಬಂಪರ್ ಕೊಡುಗೆ
ಮೈಸೂರು

ಅಧಿಕಾರಕ್ಕೇರುತ್ತಿದ್ದಂತೆ ರೈತರು, ನೇಕಾರರಿಗೆ ಬಂಪರ್ ಕೊಡುಗೆ

July 27, 2019

ಬೆಂಗಳೂರು, ಜು.26-ಬಿ.ಎಸ್.ಯಡಿಯೂ ರಪ್ಪ ಅವರು ಇಂದು ನಾಲ್ಕನೇ ಬಾರಿಗೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರೈತರು ಮತ್ತು ನೇಕಾರರಿಗೆ ಬಂಪರ್ ಕೊಡುಗೆ ನೀಡುವ ಮೂಲಕ ತಮ್ಮದು ರೈತರ ಹಾಗೂ ನೇಕಾರರ ಪರ ಸರ್ಕಾರ ಎಂದು ಘೋಷಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಬಳಿಕ ವಿಧಾನ ಸೌಧದಲ್ಲಿ ಪ್ರಥಮ ಸಂಪುಟ ಸಭೆ ನಡೆಸಿದ ಮುಖ್ಯ ಮಂತ್ರಿಗಳು, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ. ರೈತರಿಗೆ ನೀಡಲಾಗುತ್ತದೆ. ಆ ಯೋಜ ನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದಲೂ 4 ರೂ.ಗಳನ್ನು ನೀಡುವುದರ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾ ನುಭವಿ ರೈತರಿಗೆ ಒಟ್ಟು 10 ಸಾವಿರ ರೂ. ದೊರೆ ಯಲು ಕ್ರಮ ಕೈಗೊಂಡಿರುವುದಾಗಿ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಯಡಿ ಯೂರಪ್ಪ ತಿಳಿಸಿದರು. ರಾಜ್ಯದ ನೇಕಾರರ ಸಾಲ 2019ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಒಟ್ಟು 100 ಕೋಟಿಯಷ್ಟಿದ್ದು, ಅದನ್ನು ಸಂಪೂರ್ಣ ವಾಗಿ ಮನ್ನಾ ಮಾಡುವ ಮಹತ್ವದ ನಿರ್ಧಾರ ವನ್ನು ಕೈಗೊಳ್ಳುವ ಮೂಲಕ ನಮ್ಮ ಸರ್ಕಾರ ರೈತರ ಹಾಗೂ ನೇಕಾರರ ಪರ ಎಂಬುದನ್ನು ತಿಳಿಸುತ್ತಿದ್ದೇನೆ ಎಂದರು. ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದದಿಂದ ತಮಗೆ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಅವಕಾಶ ಲಭಿಸಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿ ಕವಾಗಿ ನಡೆದುಕೊಳ್ಳುವುದಾಗಿ ಹೇಳಿದ ಅವರು, ರಾಜ್ಯದ ಜನತೆ ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಶೀರ್ವಾದ, ಲಕ್ಷಾಂತರ ಕಾರ್ಯಕರ್ತರ ಶ್ರಮದ ಫಲವಾಗಿ ತಾವು ಮುಖ್ಯಮಂತ್ರಿಯಾಗಿರುವುದಾಗಿ ಹೇಳಿದರು.

ಹಿಂದಿನ 14 ತಿಂಗಳ ರಾಜ್ಯ ಸರ್ಕಾರ ಹಾಗೂ ತಮ್ಮ ಸರ್ಕಾರದ ಕಾರ್ಯವೈಖರಿಯ ವ್ಯತ್ಯಾಸವನ್ನು ನಾಲ್ಕೈದು ತಿಂಗಳಲ್ಲೇ ಜನತೆಗೆ ತೋರಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಮೊದಲು ಅದನ್ನು ಸರಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ನನ್ನನ್ನು ಯಾರೇ ದ್ವೇಷಿಸಿದರೂ, ಪ್ರೀತಿಯಿಂದ ಅವರನ್ನು ಕಾಣುತ್ತೇನೆ ಎಂದು ಮುಖ್ಯಮಂತ್ರಿ ಯಡಿ ಯೂರಪ್ಪ ಹೇಳಿದರು. ರೈತರು ಬರಗಾಲದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಸಂಕಷ್ಟ ನಿವಾರಿಸಲು ಮೊದಲ ಆದ್ಯತೆ ನೀಡಿ, ನಮ್ಮ ಸರ್ಕಾರ ಶ್ರಮಿಸುವುದು. ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಧನ ವಿನಿಯೋಗ ಮಸೂದೆ ಅಂಗೀಕಾರ ಪಡೆಯಬೇಕಾಗಿರುವುದರಿಂದ ಜುಲೈ 29ರಂದು ಬಹುಮತ ಸಾಬೀತುಪಡಿಸಿ, ಅಂದೇ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆಯಲಾಗುವುದು. ಮರು ದಿನವೇ ವಿಧಾನ ಪರಿಷತ್‍ನಲ್ಲೂ ಅದಕ್ಕೆ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ ಎಂದರು.

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ ಅವರು, ಕಳೆದ ಒಂದು ವರ್ಷದಿಂದ ರಾಜ್ಯದ ಜನರು ಅಭಿವೃದ್ಧಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರಲ್ಲದೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದರು.

Translate »