ಮೈಸೂರು: ಹಾಡಹಗಲೇ ಮನೆ ಬಾಗಿಲು ಬೀಗ ಮುರಿದು 1.5 ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೊರ ವಲಯದ ನ್ಯಾಯಾಂಗ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಮೈಸೂರು ತಾಲೂಕು, ಜಯಪುರ ಹೋಬಳಿ ವ್ಯಾಪ್ತಿಯ ನ್ಯಾಯಾಂಗ ಬಡಾವಣೆ ನಿವಾಸಿ ನಟೇಶ್ ಎಂಬುವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ರಿಂದ 3ಗಂಟೆ ನಡುವೆ ನಡೆದಿದೆ. ಕಿಟಕಿ ಸರಳು ಮುರಿದು ಒಳಗೆ ಪ್ರವೇಶಿಸಿರುವ ಖದೀಮರು, ಕೊಠಡಿಯ ವಾರ್‍ಡ್ರೋಬ್‍ನಲ್ಲಿದ್ದ 1.5 ಲಕ್ಷ ರೂ. ನಗದು ಹಾಗೂ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗ್ಯಾರೇಜೊಂದರಲ್ಲಿ ಮೇನೇಜರ್ ಆಗಿರುವ ನಟೇಶ್, ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದಾಗ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಯಪುರ ಠಾಣೆ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಬೆರಳಚ್ಚು ಮುದ್ರೆ ಘಟಕದ ಹಾಗೂ ಶ್ವಾನ ದಳದ ಸಿಬ್ಬಂದಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅದೇ ದಿನ ಬೆಳಿಗ್ಗೆ ಕೆ.ಆರ್.ನಗರದಲ್ಲಿ ಮೂರು ಮನೆಗಳಲ್ಲಿ ಕಳವು ಮಾಡಿದವರೇ ಮೈಸೂರಿನಲ್ಲಿ ನ್ಯಾಯಾಂಗ ಬಡಾವಣೆಯಲ್ಲೂ ಕೃತ್ಯ ಎಸಗಿರಬಹು ದೆಂಬ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.